ನ್ಯೂಸ್

ಪುರಿ ಜಗನ್ನಾಥ ದೇವಸ್ಥಾನಕ್ಕೆ ಗೋಮಾಂಸ ಪ್ರಚಾರಕಿ ಎಂಟ್ರಿ! ತರಾಟೆಗೆ ತೆಗೆದುಕೊಂಡ ಬಿಜೆಪಿ

ನವದೆಹಲಿ: ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಮತ್ತು ಕರ್ಲಿ ಟೇಲ್ಸ್​ ಚಾನೆಲ್​ ಸಂಸ್ಥಾಪಕಿ ಕಾಮಿಯ ಜಾನಿ ಅವರು ಜಗನ್ನಾಥ ದೇವಸ್ಥಾನದ ಆವರಣದಲ್ಲಿ ಮಾಜಿ ಐಎಎಸ್​ ಅಧಿಕಾರಿ ಹಾಗೂ ಬಿಜೆಡಿ ನಾಯಕ ವಿಕೆ ಪಾಂಡಿಯನ್​ ಜತೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ವಿವಾದವನ್ನು ಹುಟ್ಟುಹಾಕಿದೆ.

ಒಡಿಶಾದ ಬಿಜೆಪಿ ಘಟಕ ವಿಡಿಯೋಗೆ ಆಕ್ಷೇಪ ವ್ಯಕ್ತಪಡಿಸಿದೆ. ಗೋಮಾಂಸ ಸೇವನೆ ಪ್ರಚಾರ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಕಾಮಿಯಾ ಜಾನಿಗೆ ಪುರಿಯ ಪವಿತ್ರ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಿರುವುದು ಸರಿಯಲ್ಲ ಎಂದಿದೆ. ಸದ್ಯ ವಿವಾದ ಹುಟ್ಟುಹಾಕಿರುವ ವಿಡಿಯೋದಲ್ಲಿ ಕಾಮಿಯಾ ಜಾನಿ ಅವರು ಪುರಿ ಶ್ರೀಮಂದಿರ ಹೆರಿಟೇಜ್​ ಕಾರಿಡಾರ್​ ಪ್ರಾಜೆಕ್ಟ್ ಅನ್ನು ಪ್ರಚಾರ ಮಾಡುತ್ತಿರುವುದು​ ಮತ್ತು ಬಿಜೆಡಿ ನಾಯಕನೊಂದಿಗೆ ಮಹಾಪ್ರಸಾದ ಸೇವಿಸುತ್ತಿರುವುದನ್ನು ನೋಡಬಹುದಾಗಿದೆ.

ಈ ವಿಡಿಯೋವನ್ನು ಒಡಿಶಾ ಬಿಜೆಪಿ ನಾಯಕರು ಖಂಡಿಸಿದ್ದಾರೆ. ಈ ಘಟನೆ ಲಕ್ಷಾಂತರ ಹಿಂದು ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದಿದ್ದಾರೆ. ಅಲ್ಲದೆ, ದೇವಸ್ಥಾನದ ಆವರಣದಲ್ಲಿ ವಿಡಿಯೋ ಮಾಡಲು ಅನುಮತಿ ನೀಡಿದ್ದು ಸ್ವೀಕಾರ್ಹವಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಐಪಿಸಿ ಸೆಕ್ಷನ್​ 295 ಎ ಅಡಿಯಲ್ಲಿ ಪಾಂಡಿಯನ್​ ಮತ್ತು ಜಾನಿ ವಿರುದ್ಧ ಪ್ರಕರಣ ದಾಖಲಿಸಿ, ತಕ್ಷಣ ಬಂಧಿಸುವ ಮೂಲಕ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಕಾಮಿಯಾ ಜಾನಿ ಗೋಮಾಂಸ ಆಹಾರಗಳನ್ನು ಪ್ರಚಾರ ಮಾಡುವ ಹಳೆಯ ವಿಡಿಯೋಗಳನ್ನು ಶೇರ್​ ಮಾಡುವ ಮೂಲಕ ಬಿಜೆಪಿ, ಬಿಜೆಡಿ ವಿರುದ್ಧ ಆಕ್ರೋಶ ಹೊರಹಾಕಿದೆ. ಈ ವಿಚಾರ ಕಾಮಿಯಾ ಜಾನಿಗೆ ತಿಳಿಯುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಜಾನಿ, ನಾನು ಎಂದಿಗೂ ಗೋಮಾಂಸವನ್ನು ಸೇವಿಸಿಲ್ಲ ಎಂದು ಇನ್​​ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿಕೊಂಡಿದ್ದಾರೆ.

ಭಾರತೀಯಳಾಗಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಕೊಂಡೊಯ್ಯುವುದು ನನ್ನ ಧ್ಯೇಯವಾಗಿದೆ. ನಾನು ಭಾರತದ ಎಲ್ಲ ಜ್ಯೋತಿರ್ಲಿಂಗಗಳು ಮತ್ತು ಚಾರ್ ಧಾಮ್‌ಗಳಿಗೆ ಭೇಟಿ ನೀಡುತ್ತಿದ್ದೇನೆ. ಅಬ್ಬಾ! ಎಂತಹ ವಿಶೇಷತೆಗಳವು. ಜಗನ್ನಾಥನ ದೇವಸ್ಥಾನಕ್ಕೆ ನಾನು ಭೇಟಿ ನೀಡಿದನ್ನು ಪ್ರಶ್ನಿರುವುದು ಕಂಡುಬಂತು. ಈ ವಿಚಾರದಲ್ಲಿ ಯಾರೊಬ್ಬರು ನನ್ನ ಬಳಿ ಬಂದು ಪ್ರಶ್ನೆ ಮಾಡಿಲ್ಲ. ಆದರೆ, ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವುದರಿಂದ ನಾನು ಸ್ಪಷ್ಟನೆ ನೀಡಲೇಬೇಕಿದೆ. ನಾನು ಗೋಮಾಂಸವನ್ನು ಸೇವಿಸಿಲ್ಲ ಮತ್ತು ಎಂದಿಗೂ ತಿನ್ನುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಜೈ ಜಗನ್ನಾಥ್ ಎಂದು ಕಾಮಿಯಾ ಜಾನಿ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. (ಏಜೆನ್ಸೀಸ್​)