ಮುಂಬೈ: ಪ್ರಸ್ತುತ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ನ ಹಮಾಸ್ ಉಗ್ರರ ಗುಂಪಿನ ನಡುವೆ ಉಂಟಾಗಿರುವ ಸಂಘರ್ಷದ ನಡುವೆ ಯುದ್ಧ ಪೀಡಿತ ಪ್ರದೇಶದಲ್ಲೇ ಸಿಲುಕಿದ್ದ ಬಾಲಿವುಡ್ ನಟಿ ನುಶ್ರತ್ ಭರುಚ್ಚ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.
ಹೈಫಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ ನಟನೆಯ ಅಕೆಲ್ಲಿಯ ಪ್ರದರ್ಶನಕ್ಕಾಗಿ ನುಶ್ರತ್ ಭರುಚ್ಚ ಇಸ್ರೇಲ್ಗೆ ತೆರಳಿದ್ದರು. ಮಧ್ಯಾಹ್ನ 2 ಘಂಟೆ ಸುಮಾರಿಗೆ ಅವರು ಮುಂಬೈನಲ್ಲಿರುವ ಛತ್ರಪತಿ ವಿಮಾಣ ನಿಲ್ದಾಣಕ್ಕೆ ಬಂದಿಳಿದಿದ್ಧಾರೆ.
ಯುದ್ಧ ಪೀಡಿತ ಇಸ್ರೇಲ್ನಲ್ಲೇ ನಟಿ ನುಶ್ರತ್ ಅವರು ಸಿಲುಕಿಕೊಂಡಿದ್ದು, ಅವರ ಕುಟುಂಬವನ್ನು ಆತಂಕಕ್ಕೆ ದೂಡಿತ್ತು. ಆದರೆ, ಇದೀಗ ಅವರು ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ್ದ ನುಶ್ರತ್ ತಂಡದ ಸದಸ್ಯರೊಬ್ಬರು ದುರಾದೃಷ್ಟವಶಾತ್ ಸಂಘರ್ಷ ಪೀಡಿತ ಇಸ್ರೇಲ್ನಲ್ಲಿ ನುಶ್ರತ್ ಸಿಲುಕಿದ್ದಾರೆ. ಹೈಫಾ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಸ್ರೇಲ್ಗೆ ಹಾರಿದ್ದರು. ಶನಿವಾರ ಮಧ್ಯಾಹ್ನ 12.30ಕ್ಕೆ ಕೊನೆಯ ಬಾರಿಗೆ ಆಕೆಯೊಂದಿಗೆ ಸಂಪರ್ಕ ಸಾಧಿಸಿದ್ದೆ. ಬೇಸ್ಮೆಂಟ್ ಒಂದರಲ್ಲಿ ಸುರಕ್ಷಿತವಾಗಿ ಇರುವುದಾಗಿ ತಿಳಿಸಿದರು.
ಇದಾದ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ನುಶ್ರತ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದೇವೆ ಮತ್ತು ಯಾವುದೇ ಹಾನಿಯಾಗದೇ, ಆರೋಗ್ಯಯುತವಾಗಿಯೇ ಆಕೆ ತವರಿಗೆ ಮರಳುತ್ತಾಳೆ ಎಂದು ಭರವಸೆ ಇದೆ ಎಂದು ನುಶ್ರತ್ ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದರು.
ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.
ಗಾಜಾ ಪಟ್ಟಿ ಎಂದರೇನು? : ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ.