ಜೈಪುರ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯೋರ್ವ ಃಆಸ್ಟೆಲ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ನಿತಿನ್ ಫೌಜ್ದಾರ್ (18) ಎಂದು ಗುರುತಿಸಲಾಗಿದೆ. ಇವರು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ನಾಡಬಾಯಿ ಪಟ್ಟಣದ ನಿವಾಸಿ ಎಂದು ತಿಳಿದು ಬಂದಿದೆ. ನೀಟ್ ಪರೀಕ್ಷೆಗಾಗಿ ಕೋಚಿಂಗ್ ಸೆಂಟರ್‌ನಲ್ಲಿ ತಯಾರಿ ನಡೆಸುತ್ತಿದ್ದರು ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉದ್ಯೋಗ ನಗರ ಪೊಲೀಸ್ ಠಾಣಾಧಿಕಾರಿ ಸುರೇಂದ್ರ ಡೆಗ್ರಾ, ನೀಟ್ ಪರೀಕ್ಷೆಗೆ ತಯಾರಿ ನಡೆಸಲೆಂದು ನಿತಿನ್ ಜೂನ್ ತಿಂಗಳಲ್ಲಿ ಸಿಕಾರ್ಗೆ ಆಗಮಿಸಿದ್ದರು. ಖಾಸಗಿ ಕೋಚಿಂಗ್ ಸೆಂಟರ್ ಒಂದರಲ್ಲಿ ತರಬೇತಿ ಪಡೆಯುತ್ತಿದ್ದರು. ಶನಿವಾರ ತರಗತಿಗೆ ಹಾಜರಾಗದೇ ಇರುವುದನ್ನು ಗಮಿಸಿದ ಆತನ ಸ್ನೇಹಿತರು ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಇದನ್ನೂ ಓದಿ: ಏಕದಿನ ವಿಶ್ವಕಪ್ 2023| ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ; ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಬಿಸಿಸಿಐ
ಅನುಮಾನಗೊಂಡು ಆತನ ಹಾಸ್ಟೆಲ್ ರೂಮಿಗೆ ತೆರಳಿ ಪರಿಶೀಲನೆ ನಡೆಸಿದಾಗ ಆತ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಮೂರು ದಿನದ ಅವಧಿಯಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಉದ್ಯೋಗ ನಗರ ಪೊಲೀಸ್ ಠಾಣಾಧಿಕಾರಿ ಸುರೇಂದ್ರ ಡೆಗ್ರಾ ತಿಳಿಸಿದ್ದಾರೆ.
ರಾಜಸ್ಥಾನದ ಕೋಟಾ ಒಂದರಲ್ಲೇ ಬರೋಬ್ಬರಿ 23 ವಿದ್ಯಾರ್ಥಿಗಳು ಈ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023ರಲ್ಲೇ ಇದು ಅತಿ ಹೆಚ್ಚು ಎಂದು ಹೇಳಲಾಗಿದೆ.