ನ್ಯೂಸ್

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ನರ್ಸ್​..!

ಚಂದ್ರಾಪುರ: ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಕುಸಿದು ಬಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.

ಸೀಮಾ ಮೇಶ್ರಮ್ (28) ಮೃತ ದುರ್ದೈವಿಯಾಗಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಖಾಯಂ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಬುಧವಾರದಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಲೆ ಸುತ್ತುವ ಅನುಭವವಾಗಿ ಕುಸಿದು ಬಿದ್ದಿದ್ದಳು. ಆಗ ಅಲ್ಲಿದ್ದ ಸಿಬ್ಬಂದಿ ಆಕೆಯನ್ನು ಅಲ್ಲಿಯೇ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗುರುವಾರ ಬೆಳಿಗ್ಗೆ 11 ಗಂಟೆಯವರೆಗೂ ಯಾವೊಬ್ಬ ಹಿರಿಯ ವೈದ್ಯಾಧಿಕಾರಿಯೂ ಆಸ್ಪತ್ರೆಗೆ ಆಗಮಿಸಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ತುಳಸಿ ಎಲೆಗಳನ್ನು ನೀರಿನಲ್ಲಿ ಸೇರಿಸಿ ಕುಡಿದರೆ.. ಈ ರೋಗಗಳು ದೂರ..!
ಈ ನಡುವೆ ಆಕೆಯ ಸೀಮಾಳ ಸ್ಥಿತಿ ಬಿಗಡಾಯಿಸಿದ್ದರಿಂದ ಸಂಬಂಧಿಕರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಯೂ ಚಿಕಿತ್ಸೆಗೆ ಆಕೆ ಸ್ಪಂದಿಸಿರಲಿಲ್ಲ. ಕೊನೆಗೆ ನಾಗ್ಪುರದ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಗೆ ರವಾನಿಸುವ ವೇಳೆ ಆಕೆಯ ಮೃತಪಟ್ಟಿದ್ದಾಳೆ.

ಆಕೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸಿಬ್ಬಂದಿಗಳು ಧರಣಿಯನ್ನು ಆರಂಭಿಸಿದ್ದು, ತಪ್ಪಿತಸ್ಥ ವೈದ್ಯರು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ನರ್ಸ್​ ಸಂಘಗಳು ಮುಷ್ಕರ ಆರಂಭಿಸಿವೆ. ರಾಜ್ಯ ಸರ್ಕಾರಿ ನೌಕರರ ಸಂಘವೂ ಭಾಗವಹಿಸುವ ಮೂಲಕ ಈ ಧರಣಿಗೆ ಬೆಂಬಲ ನೀಡಿದ್ದು, ಕೊನೆಗೆ ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್​)