ಪಟ್ನಾ: ದೇಶದಲ್ಲಿ ದಿನ ಕಳೆದಂತೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ದುರುಳರಿಗೆ ಕಾನೂನಿನ ಭಯವಿಲ್ಲದಂತಾಗಿದೆ. ರಾಷ್ಟ್ರವ್ಯಾಪಿ ಭಾರೀ ಸದ್ದು ಮಾಡಿರುವ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಘಟನೆಯೊಂದು ಬಿಹಾರದಲ್ಲಿ ನಡೆದಿದ್ದು, ಸಂತ್ರಸ್ತೆ ಖಾಸಗಿ ಅಂಗವನ್ನು ಬ್ಲೇಡ್ನಿಂದ ಕೊಯ್ದಿರುವ ಬಗ್ಗೆ ವರದಿಯಾಗಿದೆ.
ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ನರ್ಸ್ ಒಬ್ಬರ ಮೇಲೆ ಸಾಮೂಹಿಕ ಅತ್ಯಾಚಾರದ ಯತ್ನ ನಡೆದಿದ್ದು, ಇದರಲ್ಲಿ ವೈದ್ಯರು ಕೂಡ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತೆ ವೈದ್ಯನ ಖಾಸಗಿ ಅಂಗವನ್ನು ಕಟ್ ಮಾಡಿದ್ದು, ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮುಸ್ರಿಘರಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಾಪುರದಲ್ಲಿರುವ ಆರ್ಬಿಎಸ್ ಹೆಲ್ತ್ ಕೇರ್ ಸೆಂಟರ್ನಲ್ಲಿ ಬುಧವಾರ (ಸೆಪ್ಟೆಂಬರ್ 11) ರಾತ್ರಿ ನರ್ಸ್ ಕೆಲಸ ಮುಗಿಸಿ ಮನೆಗೆ ಹೊರಡುತ್ತಿದ್ದಾಗ, ಆಡಳಿತಾಧಿಕಾರಿ ಡಾ. ಸಂಜಯ್ ಕುಮಾರ್ ಮತ್ತು ಇಬ್ಬರು ಮದ್ಯಪಾನ ಮಾಡಿ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ಸಂಜಯ್ ಹಾಗೂ ಇತರರ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ನರ್ಸ್ ವೈದ್ಯನ ಗುಪ್ತಾಂಗಕ್ಕೆ ಬ್ಲೇಡ್ನಿಂದ ಕೊಯ್ದಿದ್ದಾರೆ.
ಇದನ್ನೂ ಓದಿ: ನಾವೇನು ಮಾಡಿದ್ದೀವಿ ಅಂತ ನಮ್ಮನ್ನು ಕೇಳಿ, ನಾವೇ ಹೇಳ್ತೀವಿ; ವಿಡಿಯೋ ಮಾಡಿ ಕ್ಲಾರಿಟಿ ಕೊಟ್ಟ ನಟ ವರುಣ್ ಆರಾಧ್ಯ
ಆರೋಪಿಗಳಿಂದ ತಪ್ಪಿಸಿಕೊಂಡ ಮಹಿಳೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ವೈದ್ಯ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಸುನಿಲ್ ಕುಮಾರ್ ಗುಪ್ತಾ ಹಾಗೂ ಅವಧೇಶ್ ಕುಮಾರ್ ಎಂದು ಗುರುತಿಸಲಾಗಿದೆ. ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸುವ ಮೊದಲು ಮೂವರು ಆಸ್ಪತ್ರೆಯನ್ನು ಒಳಗಿನಿಂದ ಲಾಕ್ ಮಾಡಿದ್ದರು ಮತ್ತು ಸಿಸಿಟಿವಿ ಕ್ಯಾಮರಾಗಳನ್ನು ಆಫ್ ಮಾಡಿದ್ದರು. ವೈದ್ಯರ ಖಾಸಗಿ ಅಂಗವನ್ನು ಕತ್ತರಿಸಿದ ಬ್ಲೇಡ್ ಕೂಡ ಪತ್ತೆಯಾಗಿದೆ.
ಅರ್ಧ ಬಾಟಲಿ ಮದ್ಯ, ನರ್ಸ್ ಬಳಸುತ್ತಿದ್ದ ಬ್ಲೇಡ್, ರಕ್ತಸಿಕ್ತ ಬಟ್ಟೆ ಮತ್ತು ಮೂರು ಸೆಲ್‌ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ನರ್ಸ್ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸುವ ಮೊದಲು ಮೂವರು ವ್ಯಕ್ತಿಗಳು ಮದ್ಯಪಾನ ಮಾಡುತ್ತಿದ್ದರು, ಬಿಹಾರದಲ್ಲಿ ಮದ್ಯ ನಿಷೇಧವಿರುವುದರಿಂದ ಆ ವಿಚಾರದಲ್ಲಿಯೂ ಪ್ರಕರಣ ದಾಖಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.