Fauja Singh : ಭೀಕರ ರಸ್ತೆ ಅಪಘಾತದಲ್ಲಿ 114 ವರ್ಷದ ‘ಟರ್ಬನ್ಡ್ ಟೊನಾರ್ಡೋ’ ಎಂದೇ ಜನಪ್ರಿಯರಾಗಿದ್ದ ಮ್ಯಾರಥಾನ್ ಓಟಗಾರ ಫೌಜ್ ಸಿಂಗ್ ಸಾವಿಗೀಡಾಗಿದ್ದಾರೆ.
ಜಲಂಧರ್-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಹಟ್ಟೂರು ಗ್ರಾಮದ ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿ 114 ವರ್ಷದ ಫೌಜ್ ಸಿಂಗ್ ತಲೆಗೆ ತೀವ್ರ ಪೆಟ್ಟಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೇ ಫೌಜ್ ಸಿಂಗ್ ಮೃತಪಟ್ಟಿದ್ದಾರೆ.
ಹಿಟ್ ಅಂಡ್ ರನ್ ಕೇಸ್ನಲ್ಲಿ ಜಲಂಧರ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೆನಡಾದ ಎನ್ಆರ್ಐ ಅಮೃತಪಾಲ್ ಸಿಂಗ್ ದಿಲ್ಲೋನ್ ಎಂಬ ಆರೋಪಿಯನ್ನ ಬಂಧಿಸಿದ್ದು, ಟೊಯೋಟಾ ಫಾರ್ಚನೂರ್ ಕಾರ್ನ ವಶಕ್ಕೆ ಪಡೆದಿದ್ದಾರೆ.
ಆರೋಪಿ ಅಮೃತ್ಪಾಲ್ ಸಿಂಗ್ ಕೆನಡಾ ನಿವಾಸಿಯಾಗಿದ್ದು, ವಾರದ ಮುಂಚೆ ತನ್ನ ಹುಟ್ಟೂರು ಕರ್ತಾಪುರದ ದಾಸಪುರಕ್ಕೆ ಬಂದಿದ್ದ. ಆದಂಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಫೌಜ್ ಸಿಂಗ್ 1911ರಲ್ಲಿ ಪಂಜಾಬ್ನ ಜಲಂಧರ್ನಲ್ಲಿ ಜನಸಿದ್ದು ತಮ್ಮ 80ನೇ ವಯಸ್ಸನಲ್ಲಿ ಮ್ಯಾರಥಾನ್ ಓಟವನ್ನ ಪ್ರಾರಂಭಿಸಿದರು. 2000ರಲ್ಲಿ ಲಂಡನ್ನಲ್ಲಿ ನಡೆದ ಮ್ಯಾರಥಾನ್ ಓಟದಲ್ಲಿ ಭಾಗವಹಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದರು.
2011ರಲ್ಲಿ 100 ವರ್ಷದವರಾಗಿದ್ದ ಫೌಜ್ ಸಿಂಗ್ ಟೊರೊಂಟೋ ವಾಟರ್ ಫ್ರಂಟ್ ಮ್ಯಾರಥಾನ್ನಲ್ಲಿ 42 ಕಿಮೀ ಓಟವನ್ನ 8 ಗಂಟೆ 35 ನಿಮಿಷದಲ್ಲಿ ಪೂರ್ಣಗೊಳಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದರು.(ಏಜೆನ್ಸೀಸ್)