ರಾತ್ರಿ ನಾಪತ್ತೆಯಾದ ಬಾಲಕಿ ಬೆಳಗ್ಗೆ ಸಮುದ್ರ ದಡದಲ್ಲಿ ಶವವಾಗಿ ಪತ್ತೆ: ಮಲತಂದೆ ಅರೆಸ್ಟ್​! Mumbai

Mumbai
Published on

Mumbai : ಮಂಬೈ ಜನರನ್ನು ಚರ್ಚೆಗೆ ದೂಡಿದ್ದ 4 ವರ್ಷದ ಕಂದಮ್ಮ ಅಮೈರಾ ಶೇಖ್​ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಆಕೆಯ ಮಲತಂದೆ ಇಮ್ರಾನ್​ ಶೇಖ್​ನನ್ನು ಮುಂಬೈ ಪೋಲಿಸರು ಬಂಧಿಸಿದ್ದಾರೆ.

ಮುಂಬೈನ ಆಂಟೋಪ್​ ಬೆಟ್ಟದಲ್ಲಿರುವ ತನ್ನ ಮನೆಯಿಂದ ಜುಲೈ 14ರಂದು ಬಾಲಕಿ ಅಮೈರಾ ನಾಪತ್ತೆಯಾಗಿದ್ದಳು. ಇದಾದ ಮಾರನೆಯ ದಿನವೇ ಕೊಲಬ ಸಮುದ್ರದ ದಡದಲ್ಲಿ ಆಕೆ ಶವ ಪತ್ತೆಯಾದಳು.

ಮಲತಂದೆ ಇಮ್ರಾನ್​ ಶೇಖ್​​ ಮೇಲೆ ಶಂಕೆ

ಅಮೈರಾ ನಾಪತ್ತೆಯಾದ ಬಳಿಕ ಆಕೆಯ ತಾಯಿ ನಾಜಿಯಾ, ಆಂಟೋಪ್​ ಪೋಲಿಸರಿಗೆ ದೂರು ದಾಖಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಬಾಲಕಿಗಾಗಿ ಹುಡುಕಾಟ ನಡೆಸಲು ಆರಂಭಿಸಿದರು. ಈ ವೇಳೆ ಅಮೈರಾ ಮಲತಂದೆಯ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಏಕೆಂದರೆ, ಇಮ್ಮು ಎಂದು ಕರೆಯಲ್ಪಡುವ ಇಮ್ರಾನ್​, ಅಮೈರಾಳನ್ನು ರಾತ್ರಿ ಕರೆದುಕೊಂಡು ಹೋಗಿದ್ದು, ಆತನ ಮೊಬೈಲ್​ ಸ್ವಿಚ್ ಆಫ್​ ಆಗಿತ್ತು. ಇಮ್ರಾನ್​ನ ಈ ನಡೆ ಅನುಮಾನಗಳಿಗೆ ಎಡೆ ಮಾಡಿ ಕೊಡುತ್ತಿದೆ ಎಂದು ವರದಿಯಾಗಿತ್ತು.

ಅಮೈರಾ ತನ್ನ ತಾಯಿ ನಾಜಿಯಾ ಹಾಗೂ ಮಲತಂದೆ ಇಮ್ರಾನ್​ನೊಂದಿಗೆ ಬೆಂಗಾಲಿಪುರದ ರಾಜೀವ್​ ನಗರದಲ್ಲಿ ವಾಸವಾಗಿದ್ದಳು. ನಾಜಿಯಾ ಮೊದಲು ಎರಡು ಮದುವೆಯಾಗಿದ್ದು, ಅವರಿಂದ ಪ್ರತ್ಯೇಕವಾದ ನಂತರ ಇಮ್ರಾನ್​ನೊಂದಿಗೆ ಮೂರನೇ ಮದುವೆಯಾಗಿದ್ದಳು. ಇನ್ನು ಜುಲೈ 14ರಂದು ಮಗಳು ಕಾಣೆಯಾಗಿದ್ದರಿಂದ ಕೊಲಬ ಪೋಲಿಸರಿಗೆ ದೂರು ದಾಖಲಿಸಿದ್ದಳು. ಪೋಲಿಸರು ಬಾಲಕಿಯ ಹುಡುಕಾಟವನ್ನು ನಡೆಸುವಾಗ ಮಾರನೇ ದಿನ ಬಾಲಕಿ ಶವ ಸಸ್ಸೂನ್​ ಡಾಕ್​ ಬಳಿ ಪತ್ತೆಯಾಗಿದ್ದು, ಆಕೆಯ ದೇಹವನ್ನು ಸೇಂಟ್​ ಜಾರ್ಜ್​ ಆಸ್ಪತ್ರೆಗೆ ಮರಣೊತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ಆರಂಭದಲ್ಲಿ ಆಂಟೋಪ್​ ಪೋಲಿಸರು ಅಪಘಾತ ಸಾವಿನ ವರದಿ ಎಂದು ದಾಖಲಿಸಿದ್ದರು. ತದನಂತರ ಇಮ್ರಾನ್​ ಶೇಖ್​​ ಕಾಣೆಯಾಗಿದ್ದರಿಂದ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು. ಇನ್ನು ಪೋಲಿಸರ ವರದಿ ಪ್ರಕಾರ ಮಲತಂದೆ ಇಮ್ರಾನ್​ ಅಮೈರಾಳನ್ನು ಕೊಲೆಮಾಡಿ ತದನಂತರ ಸಮುದ್ರಕ್ಕೆ ಎಸೆದಿರಬಹುದು ಎಂದು ನಂಬಿದ್ದಾರೆ.

ಈ ಬೆಳವಣಿಗೆಯ ನಂತರ ಪೊಲೀಸರು ಇಮ್ರಾನ್​ನನ್ನು ಪತ್ತೆಹಚ್ಚಲು ಪ್ರಾರಂಭಿಸಿದ್ದು, ಮಂಗಳವಾರ ಆತನನ್ನು ಸೆರೆ ಹಿಡಿದಿದ್ದಾರೆ. ಇನ್ನು ಪೋಲಿಸರು ಈ ಕೃತ್ಯದ ಹಿಂದೆ ಇರುವ ಕಾರಣವನ್ನು ಭೇದಿಸಲು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net