ಬೆಂಗಳೂರು: ಹೊಸ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನದ ‘ಪವರ್ ಶೇರಿಂಗ್’ ಜ್ವಾಲೆ ಹೊತ್ತಿಕೊಂಡಿರುವ ನಡುವೆಯೇ ಸಂಪುಟ ವಿಸ್ತರಣೆಗಾಗಿ ನಾಯಕರ ನಡುವಿನ ಜಂಗೀಕುಸ್ತಿಗೆ ದೆಹಲಿಯಲ್ಲಿ ವೇದಿಕೆ ಸಜ್ಜಾಗಿದೆ.
ಸಂಪುಟದಲ್ಲಿ ತಮ್ಮ ಆಪ್ತರಿಗೆ ಅವಕಾಶ ಕೊಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೈಪೋಟಿಗಿಳಿದಿದ್ದು, ಉಭಯ ನಾಯಕರು ಬುಧವಾರ ತಮ್ಮ ತಮ್ಮ ‘ಆಯ್ಕೆ ಪಟ್ಟಿ’ಯೊಂದಿಗೆ ರಾಜಧಾನಿಗೆ ತೆರಳಿದ್ದಾರೆ. ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇಬ್ಬರು ಪ್ರಧಾನ ಕಾರ್ಯದರ್ಶಿಗಳೊಂದಿಗೆ ತಮ್ಮ ಬೇಡಿಕೆಯನ್ನು ಮುಂದಿಡಲಿದ್ದಾರೆ. ಸಚಿವಾಕಾಂಕ್ಷಿಗಳೂ ಸಹ ದೆಹಲಿಗೆ ದೌಡಾಯಿಸಿದ್ದು, ಶಕ್ತಿ ಮೀರಿ ಪ್ರಯತ್ನ ನಡೆಸಲಾರಂಭಿಸಿದ್ದಾರೆ. ನಿರೀಕ್ಷೆಯಂತೆ ನಡೆದರೆ ಮೇ 28ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ಅಂದೇ ಸಂಜೆ ಖಾತೆ ಹಂಚಿಕೆಯೂ ಆಗಲಿದೆ. ಮೊದಲ ಸುತ್ತಿನಲ್ಲಿ ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ, ಬಿ.ಜೆಡ್ ಜಮೀರ್ ಅಹ್ಮದ್ ಅವಕಾಶ ಪಡೆದಿದ್ದು, ಸಂಪುಟ ಸಚಿವರಾಗಿ ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಉಳಿದ ಸ್ಥಾನಗಳಿಗೆ ಈಗ ಪೈಪೋಟಿ ಏರ್ಪಟ್ಟಿದೆ.
ಸಂಪುಟ ಸೂತ್ರ: ಖಾಲಿ ಇರುವ 24 ಸ್ಥಾನಗಳನ್ನು ಒಂದೇ ಬಾರಿಗೆ ತುಂಬಿಕೊಂಡರೆ ಸಂಪುಟ ಕಿರಿಕಿರಿ ಸದ್ಯಕ್ಕಿರುವುದಿಲ್ಲ ಎಂಬ ಅಭಿಪ್ರಾಯ ಸಿದ್ದರಾಮಯ್ಯ ಹಾಗೂ ಡಿಕೆಶಿಯವರಲ್ಲಿದೆ. ಇದೇ ಲೆಕ್ಕಾಚಾರದಲ್ಲಿ ಇಬ್ಬರೂ ದೆಹಲಿಗೆ ‘ಪ್ರತ್ಯೇಕ’ವಾಗಿ ತೆರಳಿದ್ದಾರೆ. ಪಕ್ಷದ ಮಾಹಿತಿ ಪ್ರಕಾರ ಇವರಿಬ್ಬರ ನಡುವೆ ಹೊಂದಾಣಿಕೆ ಬಾರದೇ ಹೋದಲ್ಲಿ ಒಂದೇ ಬಾರಿಗೆ ಪೂರ್ಣ ಭರ್ತಿ ಕಷ್ಟವಾಗಲಿದೆ ಎಂಬ ವಾದವಿದೆ. ಇವರಿಬ್ಬರ ನಡುವಿನ ಪೈಪೋಟಿಯ ತೀವ್ರತೆಯ ಅಧಾರದಲ್ಲಿ ಸಂಪುಟ ವಿಸ್ತರಣೆಯಾಗಬಹುದೆಂಬ ಅಂದಾಜಿದೆ. ಒಂದು ಹಂತಕ್ಕೆ ಇಬ್ಬರನ್ನೂ ಹೈಕಮಾಂಡ್ ಮನವೊಲಿಸಲು ಯಶಸ್ವಿಯಾದರೆ 20-22 ಸ್ಥಾನಗಳನ್ನು ಭರ್ತಿ ಮಾಡಿ, ಎರಡರಿಂದ ನಾಲ್ಕು ಸ್ಥಾನ ಖಾಲಿ ಇಟ್ಟುಕೊಳ್ಳಬಹುದು ಅಥವಾ ಇಬ್ಬರೂ ಜಿದ್ದಾಜಿದ್ದಿಗೆ ಬಿದ್ದರೆ 10-12 ಸ್ಥಾನಗಳನ್ನಷ್ಟೇ ಈಗ ಭರ್ತಿ ಮಾಡಿಕೊಂಡು, ನಂತರ ನಿಗಮ ಮಂಡಳಿಯನ್ನು ಅಂತಿಮಗೊಳಿಸಿದ ತರುವಾಯ ಅಂದರೆ, ತಿಂಗಳ ಬಳಿಕ ಉಳಿದ ಖಾಲಿಸ್ಥಾನ ಭರ್ತಿ ಮಾಡುವ ಸಾಧ್ಯತೆ ಇದೆ.
ಸಂಪುಟ ಗಾತ್ರ: ಮುಖ್ಯಮಂತ್ರಿ ಸೇರಿದಂತೆ ಒಟ್ಟು 34 ಮಂದಿ ಸಂಪುಟದಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಪ್ರಸ್ತುತ 10 ಮಂದಿ ಸಂಪುಟದ ಒಳ ಹೊಕ್ಕಿದ್ದಾರೆ. ಇನ್ನು ಎರಡು ಡಜನ್ ಸ್ಥಾನ ತುಂಬಿಕೊಳ್ಳಲು ಅವಕಾಶವಿದೆ. ಆಕಾಂಕ್ಷಿಗಳು ಎರಡು ಡಜನ್ನಷ್ಟಿದ್ದಾರೆ. ಹಿರಿಯ ಶಾಸಕರು ಮತ್ತು ವಿವಿಧ ಆಯಾಮದಲ್ಲಿ ಸಚಿವ ಸ್ಥಾನಕ್ಕೆ ಅರ್ಹರಾದವರ ಸಂಖ್ಯೆ ಹೆಚ್ಚಿರುವುದು ಕಾಂಗ್ರೆಸ್ಗೆ ತಲೆನೋವಾಗಿ ಪರಿಣಮಿಸಿದೆ. ಯಾರನ್ನೇ ಕಡೆಗಣಿಸಿದರೂ ಜನ ಸಮುದಾಯಕ್ಕೆ ಬೇರೆಯದೇ ಸಂದೇಶ ಹೋಗಲಿದೆ. ಹೀಗಾಗಿ ಅಳೆದು ತೂಗಿ ಸಚಿವರ ಪಟ್ಟಿ ಅಂತಿಮಗೊಳಿಸಿ, ಅವಕಾಶ ಕಳೆದುಕೊಂಡವರ ಸಮಾಧಾನಪಡಿಸುವ ದೊಡ್ಡ ಹೊಣೆಗಾರಿಕೆ ಪಕ್ಷದ ರಾಜ್ಯನಾಯಕರ ಮೇಲಿದೆ.
ದೂರಿನ ಪಟ್ಟಿ: ಹೊಸ ಸರ್ಕಾರದ ಸಂಪುಟ ಪ್ರಮಾಣ ವಚನ ಸ್ವೀಕಾರದ ಬಳಿಕ ಸ್ವಪಕ್ಷೀಯರ ನಡವಳಿಕೆ ಬಗ್ಗೆ ಎಐಸಿಸಿಗೆ ವರದಿಯೊಂದು ಸಲ್ಲಿಕೆಯಾಗಿದೆ. ಪವರ್ ಶೇರಿಂಗ್ ಕುರಿತು ಎಂ.ಬಿ ಪಾಟೀಲ್ ಹೇಳಿಕೆ ಮತ್ತು ಅದರ ಪರಿಣಾಮ, ಸರ್ಕಾರದ ಜಾಹೀರಾತಿನ ಹಿಂದಿನ ಮರ್ಮದ ಬಗ್ಗೆಯೂ ವರದಿ ನೀಡಿದ್ದು, ಇಂತಹ ಬೆಳವಣಿಗೆಯಿಂದ ಪಕ್ಷಕ್ಕೆ ಆಗಬಹುದಾದ ಹಾನಿಯ ಕುರಿತೂ ವರದಿಯಲ್ಲಿ ಉಲ್ಲೇಖವಿದೆ ಎಂದು ಮೂಲಗಳು ತಿಳಿಸಿವೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಈ ಬೆಳವಣಿಗೆ ಬಗ್ಗೆ ಎಐಸಿಸಿ ಅಧ್ಯಕ್ಷರ ಗಮನ ಸೆಳೆಯಲು ಪ್ರಯತ್ನ ನಡೆಸಿದ್ದಾರೆಂದು ಗೊತ್ತಾಗಿದೆ.
ಸಮುದಾಯಗಳ ಪೈಪೋಟಿ: ವೀರಶೈವ ಲಿಂಗಾಯತ ಸಮುದಾಯದ ಹೆಚ್ಚು ಶಾಸಕರು ಆರಿಸಿ ಬಂದಿದ್ದು, ಕನಿಷ್ಠ 6ಕ್ಕಿಂತ ಹೆಚ್ಚು ಮಂದಿಗೆ ಸಂಪುಟದಲ್ಲಿ ಅವಕಾಶ ಕೊಡಬೇಕೆಂಬ ವಾದವಿದೆ. ಅದೇ ರೀತಿ ಒಕ್ಕಲಿಗ ಸಮುದಾಯಕ್ಕೆ ಕನಿಷ್ಠ ಐದಾದರೂ ಸಚಿವ ಸ್ಥಾನ ಕೊಡಬೇಕೆಂಬ ಬಲವಾದ ಕೋರಿಕೆ ಇದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಐದು ಸ್ಥಾನಗಳ ನಿರೀಕ್ಷೆ ಇದೆ. ಎಸ್ಸಿ, ಎಸ್ಟಿ, ಸಣ್ಣ ಸಮುದಾಯಗಳೂ ಕೂಡ ತಮ್ಮ ನೆಲೆಯಲ್ಲಿ ವಾದ ಮುಂದಿಟ್ಟಿವೆ. ಈ ನಡುವೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕೆಂದು ಎಐಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಈ ಕಾರಣಗಳಿಂದಲೇ ಪೈಪೋಟಿ ಅಸಾಮಾನ್ಯವಾಗಿ ಕಾಣಿಸಿದೆ.
ಕಸಿಯುವ ರಾಜಕಾರಣ: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜಿದ್ದಾಜಿದ್ದಿ ಎರಡು ರೀತಿಯಲ್ಲಿ ಕಾಣಿಸಿದೆ. ಆಪ್ತರನ್ನು ಸಂಪುಟಕ್ಕೆ ಸೇರಿಸುವುದು ಒಂದು ಪ್ರಯತ್ನವಾದರೆ, ಕೆಲವರನ್ನು ಸೇರಿಸಿಕೊಳ್ಳಬಾರೆಂಬ ಛಲವೂ ಇನ್ನೊಂದು ಪ್ರಯತ್ನ. ಸಿದ್ದರಾಮಯ್ಯ ಪ್ರಸ್ತಾಪಿಸುವ ಕೆಲವು ಹೆಸರನ್ನು ಡಿಕೆಶಿ ಖಡಾಖಂಡಿತವಾಗಿ ವಿರೋಧಿಸುತ್ತಿದ್ದು, ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದೆಂದು ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದಾರೆ. ಇದೇ ರೀತಿ ಸಿದ್ದರಾಮಯ್ಯ ಕಡೆಯಿಂದಲೂ ಪ್ರಯತ್ನ ನಡೆದಿದೆ. ಇದೇ ಕಾರಣಕ್ಕೆ ಮೊದಲ ಹಂತದ ಸಂಪುಟ ರಚನೆ ವೇಳೆ ಕೇವಲ ಎಂಟು ಮಂದಿಗೆ ಅವಕಾಶ ಸಿಕ್ಕಿದೆ. ಅದರಲ್ಲೂ ಜಮೀರ್ ಅಹ್ಮದ್ಗೆ ಅವಕಾಶ ಕೊಡಬಾರದೆಂದು ಡಿಕೆಶಿ ಪಟ್ಟು ಹಿಡಿದಿದ್ದರು. ಆದರೆ, ಹೈಕಮಾಂಡ್ ಸಿದ್ದರಾಮಯ್ಯ ವಾದಕ್ಕೆ ಮಣಿಯಿತು. ರಾಯಚೂರಿನ ಮುಖಂಡ ಬೋಸರಾಜುಗೆ ಸಚಿವ ಸ್ಥಾನ ಸಿಗಬಹುದೆಂಬ ಸುಳಿವರಿತ ಆ ಜಿಲ್ಲೆಯ ನಾಯಕರು ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಅವಕಾಶ ಕೊಡಕೂಡದೆಂದು ಆಗ್ರಹಿಸಿದ್ದಾರೆ. ಹಾಲಿ ಶಾಸಕರು, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಸಹ ಪ್ರತ್ಯೇಕ ಪತ್ರ ಬರೆದಿರುವುದು ವಿಶೇಷ ಸಂಗತಿಯಾಗಿದೆ.
ಆಕಾಂಕ್ಷಿಗಳ ದಂಡು: ಮೊದಲ ಸುತ್ತಿನ ಸಂಪುಟ ರಚನೆ ವೇಳೆ ಪರಿಗಣಿಸಿಲ್ಲ ಎಂದು ಹಿರಿ-ಕಿರಿಯ ಶಾಸಕರು ಸಿಟ್ಟಾಗಿ, ಅಸಮಾಧಾನವನ್ನು ಬೇರೆ ಬೇರೆ ರೂಪದಲ್ಲಿ ಹೊರಹಾಕಿ ದ್ದಾರೆ. ಪ್ರಮುಖವಾಗಿ ಆರ್.ವಿ. ದೇಶಪಾಂಡೆ, ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಬಸವರಾಜ ರಾಯರೆಡ್ಡಿ, ಮಧು ಬಂಗಾರಪ್ಪ ತಮ್ಮ ಅಸಮಾಧಾನವನ್ನು ಪಕ್ಷದ ವೇದಿಕೆಯಲ್ಲಿ ದಾಖಲಿಸಿದ್ದಾರೆ. ಉಳಿದಂತೆ ಬಿ.ಕೆ. ಹರಿಪ್ರಸಾದ್, ಲಕ್ಷಿ್ಮೕ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ, ನಾಗೇಂದ್ರ, ತನ್ವೀರ್ ಸೇಠ್, ಸಲೀಂ ಅಹ್ಮದ್, ವಿನಯ್ ಕುಲಕರ್ಣಿ, ಡಿ. ಸುಧಾಕರ್, ಚೆಲುವರಾಯ ಸ್ವಾಮಿ, ಈಶ್ವರ್ ಖಂಡ್ರೆ, ಶರಣ ಪ್ರಕಾಶ್ ಪಾಟೀಲ್, ಮಧುಗಿರಿ ರಾಜಣ್ಣ, ನಸೀರ್ ಅಹ್ಮದ್, ಶಿವಲಿಂಗೇಗೌಡ, ಪುಟ್ಟರಂಗಶೆಟ್ಟಿ, ಸಂತೋಷ್ ಲಾಡ್, ಎನ್.ವೈ. ಗೋಪಾಲಕೃಷ್ಣ, ಶಿವರಾಜ್ ತಂಗಡಗಿ, ರಾಘವೇಂದ್ರ ಹಿಟ್ನಾಳ್, ಎಂ.ಕೃಷ್ಣಪ್ಪ, ಹ್ಯಾರಿಸ್, ಸಂಗಮೇಶ್ವರ, ಶಿವಣ್ಣ ರೇಸ್ನಲ್ಲಿರುವ ಪ್ರಮುಖ ಹೆಸರುಗಳು.
ಹಂಚಿಕೆ ಸೂತ್ರ: ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಕ್ಕೆ ತಲಾ 10 ಸಚಿವ ಸ್ಥಾನ, ಉಳಿದ 12 ಹೈಕಮಾಂಡ್ ತೀರ್ಮಾನ ವೆಂಬ ಒಮ್ಮತದ ನಿರ್ಧಾರಕ್ಕೆ ಬರಲಾಗಿತ್ತು. ಮೊದಲ ಸುತ್ತಿನ 8 ಮಂದಿಯಲ್ಲಿ ಬಹುತೇಕ ಹೈಮಾಂಡ್ ಆಯ್ಕೆಗೆ ಅವಕಾಶ ಸಿಕ್ಕಿದೆ. ಸಿದ್ದರಾಮಯ್ಯ ಕೋಟಾದಲ್ಲಿ 2 ಸ್ಥಾನ ಭರ್ತಿಯಾಗಿದೆ. ಇನ್ನು ಸಿದ್ದರಾಮಯ್ಯ 8 ಸಚಿವ ಸ್ಥಾನಕ್ಕೆ ಹೆಸರು ಶಿಫಾರಸು ಮಾಡಬಹುದಾಗಿದ್ದು. ಡಿ.ಕೆ.ಶಿವಕುಮಾರ್ 10 ಹೆಸರನ್ನು ಶಿಫಾರಸು ಮಾಡಲಿದ್ದಾರೆ.