ಬೆಂಗಳೂರು: ಕರಿದ ತಿಂಡಿಗಳು ಕೈಗೆ ಸಿಕ್ಕಿದರೆ ಎಷ್ಟು ತಿನ್ನುತ್ತೇವೆಂದು ಲೆಕ್ಕ ಇಡುವವರು ಯಾರು? ಆದರೆ ಇವು ನಿಮ್ಮ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಗೊತ್ತೆ? ಕರಿದ ತಿಂಡಿಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸುತ್ತಾ ಹೋದರೂ ಅದು ದೀರ್ಘಕಾಲೀನ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಅಪಾರವಾಗಿ ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಹಿಂದಿನ ಕಾಲದಲ್ಲಿ ಹಬ್ಬ ಹರಿದಿನ ಬಂದರೆ ಮನೆಯಲ್ಲಿ ಚಕ್ಕುಲಿ ಕೋಡುಬಳೆ ಮುಂತಾದ ಕರಿದ ತಿಂಡಿ ತಯಾರಿಸುವ ವಾಡಿಕೆಯಿತ್ತು. ಬಹಳ ಶ್ರಮದಿಂದ ನಮ್ಮ ತಾಯಿ-ಅಜ್ಜಿ ಈ ತಿಂಡಿಗಳನ್ನು ಮಾಡಿ ಡಬ್ಬಿಗಳಲ್ಲಿ ತುಂಬಿಡುತ್ತಿದ್ದರು. ಬಳಿಕ ಮನೆಮಂದಿಯೆಲ್ಲ ಹಂಚಿಕೊಂಡು ಅವನ್ನು ತಿನ್ನುತ್ತಿದ್ದೆವು. ಬಿಸಿಬೇಳೆಬಾತ್ ಮಾಡಿದಂದು ಮಾತ್ರ ಅಂಗಡಿಯಿಂದ ಆಲೂಗೆಡ್ಡೆ ಚಿಪ್ಸ್ ತರುವ ಅಭ್ಯಾಸವಿತ್ತು. ಅದೇ ಈಗ... ಆಸೆಯಾದ ತಕ್ಷಣ ಅಂಗಡಿಗೆ ಹೋಗಿ ಲೇಸ್, ಕುರ್ಕುರೆ, ಅಷ್ಟೇಕೆ ಚಕ್ಕುಲಿ ಕೋಡುಬಳೆ ಎಲ್ಲವನ್ನೂ ಕೊಂಡು ತಂದು ತಿನ್ನಬಹುದು. ವಿಶೇಷವಾಗಿ ಮಕ್ಕಳು ರೆಡಿ ಕರಿದ ತಿಂಡಿಗಳನ್ನು ತಮ್ಮ ನಿತ್ಯದ ಈವ್ನಿಂಗ್ ಸ್ನಾಕ್ ಮಾಡಿಕೊಂಡುಬಿಟ್ಟಿದ್ದಾರೆ. ಕೈಯಲ್ಲಿ ಹಿಡಿದ ಮೇಲೆ ನಮಗೆ ಅರಿವಿಲ್ಲದಂತೆಯೇ ಪ್ಯಾಕೆಟ್ ಖಾಲಿಯಾಗಿಬಿಡುತ್ತದೆ. ಆದರೆ ಈ ರೂಢಿ ಮಾಡಿಕೊಳ್ಳುವ ಮುನ್ನ ನಿಮ್ಮ ಹೃದಯದ ಬಗ್ಗೆ ಒಮ್ಮೆ ಯೋಚಿಸಿ.
ಹಾರ್ಟ್ ಎಂಬ ವಾರ್ತಾಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ವಿಶ್ಲೇಷಣಾ ವರದಿಯ ಪ್ರಕಾರ ಪ್ರತಿ ವಾರ ಕರಿದ ತಿಂಡಿಯನ್ನು ತಿನ್ನುವ ಜನರಲ್ಲಿ ಹೃದಯ-ರಕ್ತನಾಳದ ಸಮಸ್ಯೆಗಳ ಅಪಾಯವು ಶೇ.28 ರಷ್ಟು ಹೆಚ್ಚಿರುವುದಾಗಿ ಕಂಡುಬಂದಿದೆ. ಹೃದಯಸಂಬಂಧಿ ಕಾಯಿಲೆಗಳಿಗೆ ಕರಿದ ತಿಂಡಿ ಸೇವನೆಯೊಂದಿಗೆ ಇರುವ ನಿಕಟಸಂಬಂಧವನ್ನು ಒಂಬತ್ತೂವರೆ ವರ್ಷಗಳ ಪರಿವೀಕ್ಷಣೆ ನಡೆಸಿರುವ ವಿಜ್ನಾನಿಗಳು ಕರಿದ ತಿಂಡಿಗಳು ಹೃದಯರಕ್ತನಾಳಗಳ ಆರೋಗ್ಯಕ್ಕೆ ಹೆಚ್ಚಿನ ಅಪಾಯ ಒಡ್ಡುವುದು ಕಂಡುಬಂದಿದೆ.
ನಿಯಮಿತವಾಗಿ ಕರಿದ ತಿಂಡಿಗಳನ್ನು ಸೇವಿಸುವುದರಿಂದ ಪರಿಧಮನಿಯ ಹೃದಯ ಕಾಯಿಲೆಯ (ಕರೊನರಿ ಹಾರ್ಟ್ ಡಿಸೀಸ್) ಅಪಾಯ ಶೇ.22ರಷ್ಟು ಹೆಚ್ಚುತ್ತದೆ, ಹೃದಯ ವೈಫಲ್ಯದ ಅಪಾಯ ಶೇ.37ರಷ್ಟು ಹೆಚ್ಚುತ್ತದೆ. ವಾರಕ್ಕೆ ಹೆಚ್ಚುವರಿಯಾಗಿ ಸೇವಿಸುವ ಪ್ರತಿ 114 ಗ್ರಾಂ ಕರಿದ ತಿಂಡಿಯಿಂದ ಹೃದಯರಕ್ತನಾಳದ ತೊಂದರೆ ಶೇ.3ರಷ್ಟು, ಪರಿಧಮನಿಯ ಹೃದಯ ಕಾಯಿಲೆಯ ಅಪಾಯ ಶೆ.2ರಷ್ಟು, ಹೃದಯ ವೈಫಲ್ಯದ ಅಪಾಯ ಶೇ.12ರಷ್ಟು ಹೆಚ್ಚುವ ಸಾಧ್ಯತೆ ಇರುತ್ತದೆ ಎಂದು ವರದಿ ತಿಳಿಸುತ್ತದೆ.
ಕರಿದ ತಿಂಡಿಗಳನ್ನು ಸೇವಿಸುವುದರಿಂದ ನೇರ ಸಾವುಂಟಾಗುವ ಪ್ರಮೇಯವಿಲ್ಲ. ಆದರೆ ಕ್ರಮೇಣ ಹೃದಯ ಮತ್ತು ರಕ್ತನಾಳಗಳ ಆರೋಗ್ಯವನ್ನು ಇವು ಕೆಡಿಸುತ್ತವೆ. ಈ ಪದಾರ್ಥಗಳು ಹಾನಿಕಾರಕ ಟ್ರಾನ್ಸ್ ಫಾಟ್ಸ್ ಅನ್ನು ಉತ್ಪಾದಿಸಿ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುವ ರಾಸಾಯನಿಕಗಳನ್ನು ಹರಡುತ್ತವೆ ಎಂಬುದು ವಿಜ್ನಾನಿಗಳ ಅನುಮಾನ. ಕರಿದ ತಿಂಡಿಗಳಲ್ಲಿ ಹೆಚ್ಚು ಉಪ್ಪು ಸೇರಿಸಿರುವುದೂ ಮತ್ತೊಂದು ಹಾನಿಕಾರಕ ಅಂಶ.
ಹಾಗಾಗಿ ಕರಿದ ತಿಂಡಿಗಳನ್ನು ತಿನ್ನುವ ರೂಢಿ ನಿಮಗಿದ್ದರೆ ನಿಮ್ಮ ಹೃದಯ ಮತ್ತು ರಕ್ತನಾಳಗಳಿಗೆ ಹಾನಿ ಮಾಡಿಕೊಳ್ಳುತ್ತಿದ್ದೀರಾ ಜೋಕೆ. ಅವನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ, ಪ್ರಾಯಶಃ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸೇವಿಸುವುದು ನಿಮ್ಮ ಹೃದಯದ ಆರೋಗ್ಯದೆಡೆಗೆ ನೀವಿಡುವ ಮೊದಲ ಹೆಜ್ಜೆಯಾಗಬಹುದು.