More

    ಮಾಸ್ಕ್ ಧರಿಸುವುದಿಲ್ಲವೆ? ಹಾಗಿದ್ದರೆ ಹೊಡೆಯಿರಿ ಬಸ್ಕಿ- ಪೊಲೀಸರಿಗಿದೆ ಟಾರ್ಗೆಟ್​!

    ಬಾಲಿ: ಕರೊನಾ ಹರಡದಂತೆ ತಡೆಯಲು ಮುಖ್ಯವಾದ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದೂ ಒಂದು. ಆದರೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸದೆ ತಮಗಷ್ಟೇ ಅಲ್ಲ ಇತರರಿಗೂ ಅಪಾಯ ಹೆಚ್ಚಿಸುವ ಜನರಿಗೇನೂ ಕಡಿಮೆ ಇಲ್ಲ. ಇಂಥ ಬೇಜವಾಬ್ದಾರಿಗೆ ನಮ್ಮ ದೇಶದಲ್ಲಿ 200 ರೂಪಾಯಿ ದಂಡ ವಿಧಿಸಲಾಗುತ್ತದೆ.

    ಇದೀಗ ಈ ದಂಡ ವಿಧಿಸಲು ಕೂಡ ಪೊಲೀಸರಿಗೆ ಟಾರ್ಗೆಟ್ ನಿಗದಿ ಮಾಡಲಾಗಿದ್ದು ಕಂಡಲ್ಲೆಲ್ಲ ದಂಡ ಪಡೆಯುವ ದೃಶ್ಯಗಳು ಕಾಣುತ್ತವೆ. ಹೀಗಿರುವಾಗ ಇಂಡೋನೇಷಿಯಾದ ಬಾಲಿಯಲ್ಲಿ ಮಾಸ್ಕ್ ಧರಿಸದವರಿಗೆ ಒಂದು ವಿನೂತನ ಶಿಕ್ಷೆಯನ್ನು ರೂಪಿಸಿದ್ದಾರೆ. ಅದೆಂದರೆ ಬಸ್ಕಿ ಹೊಡೆಯುವುದು.

    ಪ್ರವಾಸಿಗಳೇ ಹೆಚ್ಚಾಗಿ ಕಾಣುವ ಇಂಡೋನೇಷಿಯಾದ ದ್ವೀಪನಗರಿ ಬಾಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ನಿಯಮವನ್ನು ಅಲ್ಲಿಯ ಆಡಳಿತ ರೂಪಿಸಿದೆ. ಅಲ್ಲಿನ ಕೋವಿಡ್ ಟ್ಯಾಸ್ಕ್ ಫೋರ್ಸ್​ನ ಪ್ರಕಾರ ಮಾಸ್ಕ್ ನಿಯಮದ ಅನುಷ್ಠಾನದ ಪ್ರಮಾಣ ಶೇ.96.5 ಇದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಪ್ರಮಾಣ ಶೇ.92 ಇದೆ. ಆದರೆ ಕೆಲವು ನಾಗರೀಕರು ಮತ್ತು ಪ್ರವಾಸಿಗಳು ಮಾಸ್ಕ್ ಧರಿಸದೆ ಅಡ್ಡಾಡುವುದು ಕಂಡುಬಂದಿದೆ. ಅದಕ್ಕೆ ಕಾನೂನು ಪ್ರಕಾರ 100000 ರುಪಯ್ಯ (520 ರೂಪಾಯಿಗೆ ಸಮ) ದಂಡವನ್ನು ವಿಧಿಸಲಾಗುತ್ತದೆ.

    ಬಡುಂಗ್​ನ ಪಬ್ಲಿಕ್ ಆರ್ಡರ್ ಏಜೆನ್ಸಿ ಮುಖ್ಯಸ್ಥ ಗಸ್ಟಿ ಅಗುಂಗ್ ಕೆರ್ತ ಸೂರ್ಯನೆಗೆರ ಅವರ ಪ್ರಕಾರ ಕೂಟ ಮತ್ತು ಸೆಮಿನ್ಯಕ್ ಬೀಚ್​ಗಳಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಹೆಚ್ಚಾಗಿ ಕರೊನಾ ಆರೋಗ್ಯ ಪ್ರಣಾಳಿಕೆಯ ಉಲ್ಲಂಘನೆ ಕಂಡುಬರುತ್ತಿದೆ. ನಿಯಮ ಉಲ್ಲಂಘಿಸುವವರಲ್ಲಿ ಇಂಡೋನೇಷಿಯಾದ ಜನರೂ ಇದ್ದಾರೆ. ಆದರೆ ಶೇ.80 ರಷ್ಟು ಜನರು ಯುರೋಪ್ ಮತ್ತಿತರ ದೇಶಗಳಿಂದ ಬರುವ ವಿದೇಶೀ ಪ್ರವಾಸಿಗರಂತೆ.

    ಮಾಸ್ಕ್ ಧರಿಸದೆ ಅಡ್ಡಾಡುವ ಪ್ರವಾಸಿಗರಲ್ಲಿ ಕೆಲವರು ತಮಗೆ ನಿಯಮ ತಿಳಿದಿಲ್ಲ ಎಂದರೆ ಮತ್ತೆ ಕೆಲವರು ಮರೆತುಬಿಟ್ಟೆವು ಅಥವಾ ಮಾಸ್ಕ್ ಹಾಳಾಗಿದೆ ಎಂದೆಲ್ಲಾ ಸಬೂಬು ನೀಡುತ್ತಾರಂತೆ. ಇವರಿಗೆ ದಂಡ ಹಾಕುವ ಬದಲು ಬಾಲಿ ಸ್ಥಳೀಯ ಅಧಿಕಾರಿಗಳು ಬಸ್ಕಿ ಹೊಡೆಸುತ್ತಾರೆ. ಮಾಸ್ಕ್​ಅನ್ನು ಸರಿಯಾಗಿ ಧರಿಸದವರಿಗೆ 15 ಬಸ್ಕಿ ಹೊಡೆಯಲು ಹೇಳಿದರೆ, ಮಾಸ್ಕ್ ತರದೆ ಇರುವವರಿಗೆ 25 ರಿಂದ 50 ಬಸ್ಕಿ ಅಂತೆ. ಈ ರೀತಿ ಪ್ರವಾಸಿಗರು ಬಸ್ಕಿ ಹೊಡೆಯುವ ವೀಡಿಯೋ ತುಣುಕುಗಳು ಇತ್ತೀಚೆಗೆ ಇಂಟರ್ನೆಟ್ಟಲ್ಲಿ ಹರಿದಾಡುತ್ತಿದೆ.

    ಬಾಲಿಯ ಬಡುಂಗ್​ ಪ್ರಾಂತ್ಯದಲ್ಲಿ ಈವರೆಗೆ 8864 ಕರೊನಾ ಪ್ರೊಟೊಕಾಲ್ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದ್ದು, 15.3 ಮಿಲಿಯನ್ ರುಪಯ್ಯ (80,000 ರೂಪಾಯಿಗೆ ಸಮ) ದಂಡ ಸಂಗ್ರಹಿಸಲಾಗಿದೆಯಂತೆ. ಈವರೆಗೆ ಇಂಡೋನೇಷಿಯಾದಲ್ಲಿ ಎಂಟೂವರೆ ಲಕ್ಷ ಜನರು ಕರೊನಾ ಸೋಂಕಿಗೆ ಒಳಗಾಗಿದ್ದು, ಬಾಲಿಯಲ್ಲಿ 20 ಸಾವಿರ ಪ್ರಕರಣಗಳು ವರದಿಯಾಗಿವೆ.

    ಪ್ರವಾಸೋದ್ಯಮ ಆಸಕ್ತಿಯಿದೆಯೆ? ಹಾಗಿದ್ದರೆ ಕೆಟಿಐಎಲ್‍ಗೆ ಇಂದೇ ಅರ್ಜಿ ಸಲ್ಲಿಸಿ…

    ಜೋ ಬೈಡೆನ್​ ಭಾಷಣಕ್ಕೆ ಕ್ಷಣಗಣನೆ… ಈ ಭಾರತೀಯನಿಗೆ ಸಿಗಲಿದೆ ಶ್ರೇಯಸ್ಸು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts