ನ್ಯೂಸ್

ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತನಾಡಲು ಆಸಕ್ತಿ ಇಲ್ಲವೆಂದು ಕೈಮುಗಿದ ಸಚಿವ ಸಿ.ಸಿ.ಪಾಟೀಲ್​

ಗದಗ: ರಾಜ್ಯ ಸಭಾ ಚುನಾವಣೆಗೆ ಬಿಜೆಪಿಯಿಂದ ರಾಯಚೂರಿನ ಅಶೋಕ್​ ಗಸ್ತಿ ಮತ್ತು ಬೆಳಗಾವಿಯ ಈರಣ್ಣ ಕಡಾಡಿ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ. ರಾಜ್ಯಸಭಾ ಟಿಕೆಟ್​ ಆಕಾಂಕ್ಷಿಗಳಾಗಿದ್ದ, ರೇಸ್​ನಲ್ಲಿದ್ದ ಪ್ರಮುಖರ ಹೆಸರನ್ನು ಕೈಬಿಟ್ಟ ಬಿಜೆಪಿ ಹೈಕಮಾಂಡ್ ಇಂದು ಇವರಿಬ್ಬರ ಹೆಸರನ್ನು ಪ್ರಕಟಿಸಿ ಎಲ್ಲರಿಗೂ ಅಚ್ಚರಿಯಾಗುವಂತೆ ಮಾಡಿತ್ತು.

ಬಿಜೆಪಿಯ ಈ ನಿರ್ಧಾರದ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಸಚಿವ‌ ಸಿ.ಸಿ.ಪಾಟೀಲ್ ಬಳಿ ಪ್ರತಿಕ್ರಿಯೆ ಕೇಳಿದರೆ ಅವರು ಹೆಚ್ಚೇನೂ ಹೇಳೋದಿಲ್ಲ. ರಾಜ್ಯಸಭೆ ಆಯ್ಕೆ ವಿಷಯದಲ್ಲಿ ಚರ್ಚೆ ಮಾಡಲು ನನಗೆ ಆಸಕ್ತಿಯೇ ಇಲ್ಲ ಎಂದು ಕೈಮುಗಿದಿದ್ದಾರೆ.

ಗದಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಿ.ಸಿ.ಪಾಟೀಲ್​​ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜಿಲ್ಲೆಯ ಕೊವಿಡ್​-19 ಪರಿಸ್ಥಿತಿ ಬಗ್ಗೆ ಮಾತನಾಡಿದರು. ಜಿಲ್ಲೆಯಲ್ಲಿ ಮಾಡಲಾದ ಸಾಂಸ್ಥಿಕ ಕ್ವಾರಂಟೈನ್​ ವ್ಯವಸ್ಥೆಯ ಬಗ್ಗೆ ವಿವರಣೆ ನೀಡುತ್ತಿದ್ದರು. ಇದನ್ನೂ ಓದಿ: ರಾಜ್ಯಸಭೆಗೆ ನಾಲ್ವರೂ ಅವಿರೋಧ ಆಯ್ಕೆ?

ಇದೇ ವೇಳೆಯಲ್ಲಿ ಮಾಧ್ಯಮದವರು ರಾಜ್ಯಸಭೆ ಚುನಾವಣೆಗೆ ಬಿಜೆಪಿ ಆಯ್ಕೆ ಮಾಡಿದ ಅಭ್ಯರ್ಥಿಗಳ ಬಗ್ಗೆ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಸಚಿವರು, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ರಾಜ್ಯಸಭೆ, ವಿಧಾನ ಪರಿಷತ್​ ಟಿಕೆಟ್​​ಗೆ ನನಗಿಂತಲೂ ವರಿಷ್ಠರು ನಮ್ಮ ಪಕ್ಷದಲ್ಲಿದ್ದಾರೆ. ಪಕ್ಷದ ಹಿರಿಯರು ಎಲ್ಲ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ. ನನ್ನ ಅಭಿಪ್ರಾಯ ಏನಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ಖರ್ಗೆ ಕಾಂಗ್ರೆಸ್ ಅಭ್ಯರ್ಥಿ: ಎಐಸಿಸಿ ಅಧಿಕೃತ ಘೋಷಣೆ  

ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಕೋರ್​ ಕಮಿಟಿ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಕೇಂದ್ರ ಮಂತ್ರಿಗಳಾದ ಪ್ರಲ್ಹಾದ ಜೋಶಿ, ಸದಾನಂದ ಗೌಡ ಇದ್ದಾರೆ. ಯಾರಾದರೂ ಅಸಮಾಧಾನಗೊಂಡಿದ್ದರೆ, ಅವರಿಗೆ ಸಮಾಧಾನ ಮಾಡುವ ಶಕ್ತಿ ನಮ್ಮ ಪಕ್ಷದ ನಾಯಕತ್ವಕ್ಕೆ ಇದೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ಪಕ್ಷದ ಎಲ್ಲ ನಿರ್ಧಾರಗಳಿಗೂ ನಾನು ಬದ್ಧನಾಗಿದ್ದೇನೆ. ಅದಕ್ಕೆ ತಲೆಬಾಗುತ್ತೇನೆ. ಇನ್ನುಳಿದ ರಾಜಕಾರಣವನ್ನು ನಾನು ಮಾತನಾಡುವುದಿಲ್ಲ ಎಂದು ಕೈ ಮುಗಿದು ಹೊರಟರು.