ಯುಗಾದಿ ಸಂದರ್ಭದಲ್ಲಿ ನಿಖಿಲ್ ಕುಟುಂಬದ ಜತೆ ತೆಗೆಸಿಕೊಂಡಿದ್ದ ಚಿತ್ರ. 
ನ್ಯೂಸ್

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಮಾಜಿ ಪ್ರಧಾನಿ ಮೊಮ್ಮಗನ ವಾರ್ಷಿಕ ಆದಾಯ ಇಷ್ಟು!

ರಾಮನಗರ: ಜೆಡಿಎಸ್​ ಅಭ್ಯರ್ಥಿಯಾಗಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗ, ನಟ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಕೋಟ್ಯಧಿಪತಿಯಾಗಿರುವ ನಿಖಿಲ್ ತಮ್ಮ ಚರಾಸ್ತಿ-ಸ್ಥಿರಾಸ್ತಿಗಳ ವಿವರವನ್ನು ನೀಡಿದ್ದು, ತಂದೆಗೆ ಸಾಲ ನೀಡಿರುವುದಲ್ಲದೆ, ಐಷಾರಾಮಿ ಕಾರುಗಳ ಒಡೆಯ ಕೂಡ ಆಗಿದ್ದಾರೆ. ನಿಖಿಲ್ ಹೆಸರಲ್ಲಿ ಒಟ್ಟು 77 ಕೋಟಿ ರೂ. ಮೌಲ್ಯದ ಆಸ್ತಿ ಇದ್ದು, ಆ ಪೈಕಿ ಚರಾಸ್ತಿಯ ಮೌಲ್ಯ 46.81 ಕೋಟಿ ರೂ. ಹಾಗೂ ಸ್ಥಿರಾಸ್ತಿ ಮೌಲ್ಯ 28 ಕೋಟಿ ರೂಪಾಯಿ.

ನಿಖಿಲ್ ಒಂದು ರೇಂಜ್‌ ರೋವರ್, 2.9 ಕೋಟಿ ಮೊತ್ತದ ಲ್ಯಾಂಬೊರ್ಗಿನಿ ಸೇರಿ ಐದು ಕಾರ್‌ಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದು, ಒಟ್ಟು 1151 ಗ್ರಾಂ ತೂಕದ ಚಿನ್ನ ಹಾಗೂ 16 ಕೆ.ಜಿ. ಬೆಳ್ಳಿ ಹೊಂದಿದ್ದಾರೆ. ಜತೆಗೆ 38.94 ಕೋಟಿ ರೂ. ಸಾಲ ಕೂಡ ಇದೆ. ಜತೆಗೆ ತಂದೆ ಕುಮಾರಸ್ವಾಮಿ ಸೇರಿದಂತೆ ಅನೇಕರಿಗೆ ಸಾಲವನ್ನೂ ನೀಡಿದ್ದಾರೆ.

ನಿಖಿಲ್ ಪತ್ನಿ ರೇವತಿ ಹೆಸರಿನಲ್ಲಿ 1.79 ಕೋಟಿ ಮೌಲ್ಯದ ಚರಾಸ್ತಿ ಹಾಗೂ 28 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅಲ್ಲದೆ 641 ಗ್ರಾಂ ಚಿನ್ನ, 12.59 ಕ್ಯಾರೆಟ್‌ ವಜ್ರ ಹಾಗೂ 33.5 ಕೆ.ಜಿ.ಬೆಳ್ಳಿ ಇದೆ.

ನಿಖಿಲ್‌ ಕಸ್ತೂರಿ ಮೀಡಿಯಾ ಪ್ರೈ.ಲಿ. ಕಂಪನಿಯಲ್ಲಿ 76 ಲಕ್ಷ ರೂ., ಹಾರಿಜನ್ ರಿಯಾಲ್ಟಿ ಕಂಪನಿಯಲ್ಲಿ 6 ಕೋಟಿ ರೂ. ಸೇರಿದಂತೆ ವಿವಿಧೆಡೆ ಹಣ ಹೂಡಿಕೆ ಮಾಡಿದ್ದಾರೆ. ಇನ್ನು ಅವರು ತಮ್ಮ ವಾರ್ಷಿಕ ಆದಾಯವನ್ನೂ ಬಹಿರಂಗಪಡಿಸಿದ್ದಾರೆ. 2021–22ನೇ ಸಾಲಿನಲ್ಲಿ ನಿಖಿಲ್‌ ಕುಮಾರಸ್ವಾಮಿ ವಾರ್ಷಿಕ ಆದಾಯ 4.27 ಕೋಟಿ ರೂ. ಇದ್ದಿದ್ದಾಗಿ ಘೋಷಿಸಿಕೊಂಡಿದ್ದಾರೆ.