ಕೊಲ್ಕತಾ: ನಿನ್ನೆ ಕೊಲ್ಕತಾದಲ್ಲಿ ನಡೆದ ಬಿಜೆಪಿ ಜನಸಮಾವೇಶದಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ ಸರ್ಕಾರ ರಾಜ್ಯದ ಅಭಿವೃದ್ಧಿಯ ಬಗ್ಗೆ ಗಮನ ನೀಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ಆ ಟೀಕೆಗೆ ಟಿಎಂಸಿ ನಾಯಕರಾದ ರಾಜ್ಯ ಸಚಿವ ಸುಬ್ರತ ಮುಖರ್ಜಿ ಮತ್ತು ಸಂಸದ ಡೆರೆಕ್ ಒ ಬ್ರೇನ್ ಕಟುವಾದ ತಿರುಗೇಟು ಕೊಟ್ಟಿದ್ದಾರೆ.
"ಕಳೆದ ಆರು ವರ್ಷಗಳಿಂದ ಕೇಂದ್ರದಲ್ಲಿ ಮೋದಿ ಸರ್ಕಾರವಿದೆ. ಅವರು ಬಂಗಾಳಕ್ಕಾಗಿ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ ? ಅವರಿಗೆ ಬಂಗಾಳದ ಬಗ್ಗೆ ನಿಜವಾಗಲೂ ಕಾಳಜಿ ಇದ್ದಿದ್ದರೆ, ಕಳೆದ ಎಷ್ಟೋ ವರ್ಷಗಳಿಂದ ಬಂಗಾಳಕ್ಕಾಗಿ ದುಡಿಯುವುದರಿಂದ ಅವರನ್ನು ಯಾರು ತಡೆದಿದ್ದರು ?" ಎಂದು ಹಿರಿಯ ನಾಯಕ ಸುಬ್ರತ ಮುಖರ್ಜಿ ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ, ಟಿಎಂಸಿ ಸಂಸದ ಡೆರೆಕ್ ಒ'ಬ್ರೇನ್ ಅವರು, ಮೋದಿ ಅವರ ಆರೋಪವನ್ನು ಅಲ್ಲಗಳೆಯುತ್ತಾ, ಟ್ವಿಟರ್ನಲ್ಲಿ ಮೂರು ಪುಟಗಳ ಡಾಕ್ಯುಮೆಂಟ್ ಒಂದನ್ನು ಶೇರ್ ಮಾಡಿದ್ದರು. ಅದರಲ್ಲಿ ಮಮತಾ ಬ್ಯಾನರ್ಜಿ, ರಾಜ್ಯದ ಮತ್ತು ರಾಜ್ಯದ ಜನರ ಜೀವನವನ್ನು ಬದಲಾಯಿಸಿದ 10 ರೀತಿಗಳ ಬಗ್ಗೆ ವಿವರಿಸಿದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯೋಗದಿಂದ ಹಿಡಿದು ಕೃಷಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ 10 ಕ್ಷೇತ್ರಗಳಲ್ಲಿ ಜಾರಿಗೆ ತಂದ ವಿವಿಧ ಯೋಜನೆಗಳ ಬಗ್ಗೆ ಬ್ರೇನ್ ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ