ನ್ಯೂಸ್

ಯಾವ ವಿಧವೆಯೂ ನನ್ನಷ್ಟು... ಕಲಾವಿದ ಕೊಲ್ಲಂ ಸುಧಿ ಪತ್ನಿ ಭಾವುಕ

ಕೇರಳ: ವಿಧವೆಯರು (Widow) ಅಂದಾಕ್ಷಣ ಅವರಿಗೆ ಯಾರು ಗತಿಯಿಲ್ಲ, ಕೇಳುವವರು ಇಲ್ಲ ಎಂದು ಅನೇಕರು ಭಾವಿಸುತ್ತಾರೆ ಅನಿಸುತ್ತದೆ. ನಮ್ಮ ಇಚ್ಛೆಯಂತೆ ಬದುಕಲು ಏಕೆ ಈ ಜನಗಳು ಬಿಡುವುದಿಲ್ಲ ಎಂಬುದು ನಿಜಕ್ಕೂ ನನಗೆ ಅರ್ಥವಾಗದ ಸಂಗತಿ. ಇಡೀ ಕೇರಳದಲ್ಲಿ ನನ್ನಷ್ಟು ಅವಮಾನ (Humiliated) ಅನುಭವಿಸಿದ ವಿಧವೆ ಬೇರಾರೂ ಇಲ್ಲ ಎಂದು ದಿವಗಂತ ಮಿಮಿಕ್ರಿ ಕಲಾವಿದ ಕೊಲ್ಲಂ ಸುಧಿ ಪತ್ನಿ ರೇಣು ಅಳಲು ತೋಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ರೇಣು, "ನನ್ನ ಪತಿ ಸುಧಿಯನ್ನು ಕಳೆದುಕೊಂಡ ನಂತರ ನಾನು ಅತೀವ ನೋವಿಗೆ ಒಳಗಾದೆ. ನನಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವಂತೆ ಮಾಡಿದ್ದು ನನ್ನ ಪತಿಯೇ. ಅವರ ಮಾರ್ಗದರ್ಶನದಲ್ಲಿ ಒಂದಷ್ಟು ಕಾಮಿಡಿ ವಿಡಿಯೋ, ರೀಲ್ಸ್​ ಮಾಡುವುದನ್ನು ಕಲಿತೆ. ಆದ್ರೆ, ಕೆಲವರು ಅದ್ಯಾಕೆ ನನ್ನ ವಿರುದ್ಧ ಅಷ್ಟೊಂದು ಕಿಡಿಕಾರುತ್ತಾರೆ? ತೀವ್ರವಾಗಿ ಟೀಕಿಸುತ್ತಾರೆ ಎಂಬುದು ಮನಸಿಗೆ ಘಾಸಿ ಉಂಟುಮಾಡಿದೆ" ಎಂದಿದ್ದಾರೆ.

ಆ ಕಾಲ ಹೋಯಿತು

"ಜಾಲತಾಣಗಳಲ್ಲಿ ಯಾವುದಾದರೂ ಒಂದು ವಿಡಿಯೋ ಅಥವಾ ಫೋಟೋ ಹಾಕಿದ್ರೆ ಸಾಕು, ಇವಳಿಗ್ಯಾಕೆ ಇವೆಲ್ಲಾ? ಪತಿ ಇಲ್ಲದ ವಿಧವೆಗೆ ಇದೆಲ್ಲಾ ಬೇಕೇ? ಎಂದು ಅಸಭ್ಯವಾಗಿ ಕಮೆಂಟ್ ಮಾಡ್ತಾರೆ. ವಿಧವೆಯಾದವಳು ಈ ರೀತಿ ವರ್ತಿಸಬಾರದು ಎಂದೆಲ್ಲಾ ವ್ಯಂಗ್ಯವಾಡ್ತಾರೆ. ಈಗಿನ ಕಾಲಘಟ್ಟದಲ್ಲೂ ಇಂತಹ ವರ್ತನೆಗಳು ಇರುವುದನ್ನು ಕಂಡು ಭಾರೀ ಅಚ್ಚರಿಗೆ ಒಳಗಾಗಿದ್ದೇನೆ. ಸತಿ ಸಂಪ್ರದಾಯವನ್ನು ಹಲವು ವರ್ಷಗಳ ಹಿಂದೆಯೇ ರದ್ದುಪಡಿಸಲಾಗಿದೆ, ಇಷ್ಟಾದರೂ ಕೂಡ ನನ್ನನ್ನು ಏಕೆ ಈ ರೀತಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಸಂಗತಿ ಮಾತ್ರ ಇಂದಿಗೂ ನನಗೆ ಅರ್ಥವಾಗದು" ಎಂದು ಕ್ಯಾಮರಾ ಮುಂದೆಯೇ ಭಾವುಕರಾಗಿದ್ದಾರೆ,(ಏಜೆನ್ಸೀಸ್).