ನ್ಯೂಸ್

ಸುಶಾಂತ್​, ಟಿಕ್​ಟಾಕ್​ ಸ್ಟಾರ್​ ಸಿಯಾ ಆತ್ಮಹತ್ಯೆಗೂ ಸಂಬಂಧವಿದೆಯಾ? ಪೊಲೀಸರಿಗೇಕೆ ಸಂಶಯ?

ನವದೆಹಲಿ: ಬಾಲಿವುಡ್​ ಸ್ಟಾರ್​ ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳಲ್ಲಿ ಟಿಕ್​ ಟಾಕ್ ಸ್ಟಾರ್​ ಸಿಯಾ ಕಕ್ಕರ್​ ದೆಹಲಿಯ ಪ್ರೀತ್​ ವಿಹಾರದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸ್​ ತನಿಖೆ ನಡೆಯುತ್ತಿದೆ.

ಸಿಯಾ ಕಕ್ಕರ್​ ಆತ್ಮಹತ್ಯೆಗೂ ಹಾಗೂ ಸುಶಾಂತ್​ ಆತ್ಮಹತ್ಯೆ ಪ್ರಕರಣಕ್ಕೂ ಏನಾದರೂ ಸಂಬಂಧವಿದೆಯಾ ಎಂಬ ಅನುಮಾನ ಹುಟ್ಟಿಕೊಂಡ ಬೆನ್ನಲ್ಲೇ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಯಾ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನಿರಬಹುದು? ಏನಾದರೂ ಸುಳಿವು ಸಿಗಬಹುದೆಂಬ ಉದ್ದೇಶದಿಂದ ಲಾಕ್​ ಆಗಿರುವ ಸಿಯಾಳ ಸೆಲ್​ಫೋನ್​ ಅನ್ನು ಅನ್​ಲಾಕ್​ ಮಾಡಲು ಪೊಲೀಸರು ಯತ್ನಿಸಿದ್ದು, ಸಿಯಾ ಕುಟುಂಬ ಸದಸ್ಯರ ನೆರವನ್ನು ಪಡೆದಿದ್ದಾರೆ.

ಸುಶಾಂತ್​ ಅವರ ದಿಢೀರ್​ ಸಾವಿನಿಂದ ಒತ್ತಡಕ್ಕೇನಾದರೂ ಸಿಲುಕಿ ಸಿಯಾ ಆತ್ಮಹತ್ಯೆ ಮಾಡಿಕೊಂಡರಾ ಎಂಬ ಪ್ರಶ್ನೆಯು ಉದ್ಭವವಾಗಿದ್ದು, ಈ ಬಗ್ಗೆ ಕುಟುಂಬದವರ ಬಳಿ ವಿಚಾರಿಸಿದಾಗ ಆ ರೀತಿಯಾದ ಒತ್ತಡವೇನು ಇರಲಿಲ್ಲ ಎಂದು ತಿಳಿಸಿದ್ದಾರೆ. ಸುಶಾಂತ್​ ಸಾವಿಗೂ ಸಿಯಾ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂತಲೂ ಪೊಲೀಸರು ತಿಳಿಸಿದ್ದಾರೆ.

ಮೊನ್ನೆಯಷ್ಟೇ ಸಿಯಾ ಕುಟುಂಬ ಆಕೆಗೆ ಅಂತರ್ಜಾಲದಲ್ಲಿ ಸಾಕಷ್ಟು ಬೆದರಿಕೆಗಳು ಬರುತ್ತಿದ್ದವು ಎಂದು ಹೇಳಿಕೆ ನೀಡಿದ್ದರು. ಇದರೊಟ್ಟಿಗೆ ಸಿಯಾ ಸಾವಿಗೂ ಮುನ್ನ ನಾಲ್ಕೈದು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎಂಬುದು ದೃಢವಾಗಿದೆ. ಆದರೆ, ಅದಕ್ಕೆ ಕಾರಣ ಏನೆಂಬುದು ಯಾರಿಗೂ ತಿಳಿದಿಲ್ಲ. ಆಕೆಯ ಶಾಲೆಯು ಸಹ ಮುಚ್ಚಿದ್ದು, ಹೆಚ್ಚಿನ ಮಾಹಿತಿ ಪಡೆಯಲು ಆಕೆಯ ಫ್ರೆಂಡ್ಸ್​ ಮತ್ತು ಶಾಲಾ ಆಡಳಿತ ಮಂಡಳಿಯನ್ನು ಭೇಟಿ ಮಾಡುವ ಪ್ರಯತ್ನಕ್ಕೆ ಪೊಲೀಸರು ಮುಂದಾಗಿದ್ದಾರೆ.

ಸಿಯಾ ಕಕ್ಕರ್​ ಗುರುವಾರ (ಜೂನ್​ 25) ದೆಹಲಿ ಗೀತಾ ಕಾಲನಿಯ ಪ್ರೀತ್​ ವಿಹಾರದ ಮನೆಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾದರು. ಈಕೆಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಈಕೆಯ ಸಾವಿನ ವಿಷಯವನ್ನು ಮ್ಯಾನೇಜರ್​ ಅರ್ಜುನ್​ ಸರೀನ್​ ಖಚಿತಪಡಿಸಿದರು.

ಸಿಯಾ ಕಕ್ಕರ್​ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಳು. ಟಿಕ್​ಟಾಕ್​, ಇನ್​ಸ್ಟಾಗ್ರಾಂ, ಸ್ನ್ಯಾಪ್​ ಚಾಟ್​ ಯೂಟ್ಯೂಬ್​ಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಳು. ಟಿಕ್​ಟಾಕ್​ನಲ್ಲಿ ನೃತ್ಯದ ಮೂಲಕ ಹೆಚ್ಚು ಜನಪ್ರಿಯತೆ ಹೊಂದಿದ್ದ ಈಕೆಗೆ 11 ಲಕ್ಷ ಫಾಲೋವರ್​ಗಳಿದ್ದರು. (ಏಜೆನ್ಸೀಸ್​)