ನ್ಯೂಸ್

ಕುಮಾರಸ್ವಾಮಿ ಬಂಧಿಸಲು ನೂರು ಸಿದ್ದರಾಮಯ್ಯ ಬೇಡ, ಒಬ್ಬ ಪಿಸಿ ಸಾಕು: ಎಚ್​ಡಿಕೆಗೆ ಸಿಎಂ ಟಾಂಗ್​

ವಿಜಯಪುರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬೇಡ, ಕೇವಲ ಒಬ್ಬ ಪಿಸಿ ಸಾಕು ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.

ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು ಎಂದಿದ್ದ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಅವರನ್ನು ಬಂಧಿಸಲು ನಾನು ಯಾರು? ಬಂಧಿಸೋದು ಪೊಲೀಸ್ ಕೆಲಸ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರ ವಿರುದ್ಧ ರಾಜ್ಯಪಾಲರ ಬಳಿ ಈ ಹಿಂದೆಯೇ ದೂರು ದಾಖಲಾಗಿದ್ದು, ಅದರ ತನಿಖೆ ಆರಂಭಗೊಳ್ಳಲಿದೆ ಎಂದು ಹೆದರಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದರು.

ಕುಮಾರಸ್ವಾಮಿ ಕೇವಲ ಹಿಟ್ ಆಂಡ್ ರನ್ ಮಾತ್ರ, ಆಗ ನಾನು ಯಾವ ಅಧಿಕಾರದಲ್ಲೂ ಇರಲಿಲ್ಲ, ಮುಡಾದಲ್ಲಿ ಆಗ ಬಿಜೆಪಿಯವರೇ ಅಧ್ಯಕ್ಷರಾಗಿದ್ದವರು, ಆಗ ಮುಖ್ಯಮಂತ್ರಿಯಾಗಿದ್ದವರು ಮಿಸ್ಟರ್ ಬೊಮ್ಮಾಯಿ ಎಂದರು. ಈ ಹಿಂದೆಯೂ ಪೆನ್ ಡ್ರೈವ್ ಇದೆ ಎಂದು ಹೇಳುತ್ತಿದ್ದರು ಆಮೇಲೆ ಏನಾಯ್ತು? ಎಂದು ಪ್ರಶ್ನಿಸಿದರು.

ಮುಡಾದಲ್ಲಿ ನನ್ನ ಪಾತ್ರವೇ ಇಲ್ಲ - ದಾಖಲೆಯೂ ತಿದ್ದಿಲ್ಲ: ಮುಡಾ ಹಗರಣದಲ್ಲಿ ನನ್ನ ಯಾವ ಪಾತ್ರ, ಪ್ರಭಾವವೂ ಇಲ್ಲ, ಯಾವ ದಾಖಲೆಯನ್ನೂ ತಿದ್ದಿಲ್ಲ, ವೈಟನರ್ ಹಚ್ಚಿ ದಾಖಲೆ ತಿದ್ದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.