ನ್ಯೂಸ್

ಕರ್ನಾಟಕ ಬಂದ್​ಗೆ ಹಲವು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ; ಬೆಂಗಳೂರಿನಲ್ಲಿ ಮುಂದುವರಿದ ಪ್ರತಿಭಟನೆ | Karnataka Bandh

ಮೋಹನ್​ ಶೆಟ್ಟಿ

Karnataka Bandh: ಕಳೆದ ತಿಂಗಳು ಮಹಾರಾಷ್ಟ್ರ ಮರಾಠಿ ಪುಂಡರು ಕನ್ನಡಿಗರ ಮೇಲೆ ನಡೆಸಿದ ಅಟ್ಟಹಾಸ, ದಬ್ಬಾಳಿಕೆಯನ್ನು ತೀವ್ರ ಖಂಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​, ಇಂದು ರಾಜ್ಯಾದ್ಯಂತ ಬಂದ್​ಗೆ ಕರೆ ನೀಡಿದ್ದರು. ರಾಜ್ಯ ಬಂದ್​ಗೆ ಹಲವು ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ಮಾತ್ರ ನೀಡಿತ್ತು. ಕರುನಾಡನ್ನು ಸಂಪೂರ್ಣ ಸ್ತಬ್ದಗೊಳಿಸುವ ಮೂಲಕ ಪ್ರತಿಭಟನೆಯನ್ನು ಯಶಸ್ವಿ ಮಾಡಬೇಕು ಎಂದಿದ್ದ ವಾಟಾಳ್ ನಾಗರಾಜ್​ ಬಂದ್​ ಕರೆಗೆ ನೀರಸ ಪ್ರತಿಕ್ರಿಯೆ ಲಭಿಸಿದೆ.

ರಾಜ್ಯಾದ್ಯಂತ ಬಂದ್​ ಕರೆಯಿದ್ದ ಕಾರಣ ಸಾರಿಗೆ ಬಸ್​ಗಳು, ಆಟೋ, ಟ್ಯಾಕ್ಸಿಗಳು ಸಂಚಾರ ನಡೆಸಲಿದೆಯೇ ಎಂಬ ಅನುಮಾನಗಳು ಮೂಡಿತ್ತು. ಆದರೆ, ಇಂದು ಬೆಳಗ್ಗಿನಿಂದಲೇ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳು ಎಂದಿನಂತೆ ರಸ್ತೆಗಿಳಿಯಿತು. ಇದರೊಟ್ಟಿಗೆ ಖಾಸಗಿ ಕಚೇರಿಗಳು, ಹೋಟೆಲ್​, ಮಳಿಗೆಗಳು ಕೂಡ ಕಾರ್ಯನಿರ್ವಹಿಸಿವೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ರಾಜ್ಯ ರಾಜಧಾನಿ ಹೊರತುಪಡಿಸಿದರೆ ಇನ್ನುಳಿದ ಜಿಲ್ಲೆಗಳಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ ದೊರಕಿದೆ. ಈ ಮೂಲಕ ಕರ್ನಾಟಕ ಬಂದ್​ಗೆ ಕೇವಲ ನೈತಿಕ ಬೆಂಬಲ ಮಾತ್ರ ಸಿಕ್ಕಿದೆ ಎಂಬುದು ಸ್ಪಷ್ಟ.

ಬಂದ್​ಗೆ ಬೆಂಬಲ ಕೊಡದ ರಾಜ್ಯ ಸರ್ಕಾರ ನಡೆ ಮತ್ತು ಪೊಲೀಸರ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್​ ಮತ್ತು ಕನ್ನಡ ಪರ ಸಂಘಟನೆಗಳು, ಬೆಂಗಳೂರಿನ ಟೌನ್​ಹಾಲ್​ ಮುಂದೆ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್​, ರೂಪೇಶ್​ ರಾಜಣ್ಣ, ಸಾ.ರಾ. ಗೋವಿಂದು ಸೇರಿದಂತೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಲ್ಲೆಲ್ಲಿ ನೀರಸ ಪ್ರತಿಕ್ರಿಯೆ?

  • ಕರ್ನಾಟಕ ಬಂದ್‌ಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ.
  • ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ
  • ರಾಯಚೂರಿನಲ್ಲಿ ಕರ್ನಾಟಕ ಬಂದ್ ಮಿಶ್ರ ಪ್ರತಿಕ್ರಿಯೆ
  • ಶಿವಮೊಗ್ಗದಲ್ಲಿಯೂ ಸಿಗದ ಬೆಂಬಲ
  • ಮೈಸೂರಿನಲ್ಲಿ ಪ್ರತಿಭಟನೆ ಭುಗಿಲೆದ್ದರೂ ನೈತಿಕ ಬೆಂಬಲದಿಂದ ಬಂದ್​ಗೆ ಪೂರ್ಣ ಬೆಂಬಲ ಸಿಕ್ಕಿಲ್ಲ.