ನವದೆಹಲಿ: ಬ್ರಿಟಿಷರ ಕಾಲದ ಕಾನೂನುಗಳಿಗೆ ಪರ್ಯಾಯವಾಗಿ ಮೂರು ಹೊಸ ಮಸೂದೆಗಳನ್ನು ಮಂಡಿಸಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಇನ್ನೊಂದು ಬದಲಾವಣೆಗೆ ಮುಂದಾಗಿದೆ.
ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಮಾಹಿತಿಯನ್ನು ಹೊರ ಹಾಕಿದ್ದಾರೆ. ವಿಐಪಿ ವಾಹನಗಳಲ್ಲಿ ಇನ್ನುಮುಂದೆ ಸೈರನ್ ಬದಲಾಗಿ ಶಂಖ, ತಬಲಾ, ಕೊಳಲಿನ ಶಬ್ದ ಹೊರಹೊಮ್ಮುವಂತೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ನೀತಿಯನ್ನು ರೂಪಿಸಲಾಗುತ್ತಿದ್ದು, ಅದರಲ್ಲಿ ವಿಐಪಿ ವಾಹನಗಳಲ್ಲಿನ ಸೈರನ್ ಶಬ್ದದ ಬದಲು ಭಾರತೀಯ ಶಾಸ್ತ್ರೀಯ ಸಂಗೀತದ ಉಪಕರಣಗಳಾದ ಕೊಳಲು, ಶಂಖ, ತಬಲಾಗಳ ಸದ್ದನ್ನು ಅಳವಡಿಸುವ ಚಿಂತನೆ ನಡೆಯುತ್ತಿದೆ. ಈ ಮೂಲಕ ಶಬ್ದ ಮಾಲಿನ್ಯ ತಡೆಗಟ್ಟುವ ಯೋಚನೆ ಹೊಂದಲಾಗಿದೆ ಎಂದು ಹೇಳಿದ್ದಾರೆ.