ಮುಂಬೈ: ಆರಂಭಿಕ ವಹಿವಾಟಿನಲ್ಲಿ ಏರುಗತಿಯಲ್ಲಿದ್ದರೂ ಐಟಿ ಮತ್ತು ಆಯ್ದ ಬ್ಯಾಂಕಿಂಗ್ ಷೇರುಗಳ ಮಾರಾಟ ಒತ್ತಡದಿಂದಾಗಿ ಶುಕ್ರವಾರ ಬೆಂಚ್ಮಾರ್ಕ್ ಸೂಚ್ಯಂಕಗಳು ಕುಸಿತ ಕಂಡವು.
ಬೆಂಚ್ಮಾರ್ಕ್ ಸೂಚ್ಯಂಕಗಳ ಪೈಕಿ, 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 15.44 ಅಂಕಗಳು ಅಥವಾ ಶೇಕಡಾ 0.02 ರಷ್ಟು ಕುಸಿದು 73,142.80 ಅಂಕಗಳಿಗೆ ತಲುಪಿತು. ಈ 30 ಷೇರುಗಳ ಪೈಕಿ 17 ಷೇರುಗಳ ಬೆಲೆ ಇಳಿಕೆಯಾದರೆ, 13 ಷೇರುಗಳ ಬೆಲೆ ಏರಿಕೆ ಕಂಡಿತು.
ಶುಕ್ರವಾರ ಸೂಚ್ಯಂಕವು ಏರುಗತಿಯಲ್ಲಿ ಪ್ರಾರಂಭವಾಯಿತು. ಆದರೆ ನಂತರ ಹೂಡಿಕೆದಾರರು ಲಾಭ ಮಾಡಿಕೊಳ್ಳುವುದಕ್ಕಾಗಿ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಕುಸಿತ ಕಂಡಿತು.
ಇನ್ನೊಂದು ಬೆಂಚ್ಮಾರ್ಕ್ ಸೂಚ್ಯಂಕವಾದ ನಿಫ್ಟಿ ಸೂಚ್ಯಂಕವು 4.75 ಅಂಕಗಳು ಅಥವಾ ಶೇಕಡಾ 0.02 ರಷ್ಟು ಕಡಿಮೆಯಾಗಿ 22,212.70 ಅಂಕಗಳಿಗೆ ಕೊನೆಗೊಂಡಿತು. 50-ಷೇರುಗಳ ಈ ಸೂಚ್ಯಂಕವು ಇಂಟ್ರಾ-ಡೇ ವಹಿವಾಟಿನಲ್ಲಿ 22,297.50 ರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿತ್ತು.
"ನಿಫ್ಟಿಯು ಉನ್ನತ ಮಟ್ಟದಲ್ಲಿ ತೆರೆದುಕೊಂಡಿತು. ಆದರೆ ಬೆಳಗಿನ ಆವೇಗವನ್ನು ಉಳಿಸಿಕೊಳ್ಳಲು ವಿಫಲವಾಯಿತು. ಇದು ಲಾಭದ ಬುಕಿಂಗ್‌ನಿಂದಾಗಿ ದಿನದ ಕನಿಷ್ಠ ಮಟ್ಟದಲ್ಲಿ ಮುಕ್ತಾಯಕ್ಕೆ ಕಾರಣವಾಯಿತು" ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಹಿರಿಯ ತಾಂತ್ರಿಕ ವಿಶ್ಲೇಷಕ ರೂಪಕ್ ಡಿ. ಹೇಳಿದರು.
ಎಚ್‌ಸಿಎಲ್‌ಟೆಕ್, ಏಷ್ಯನ್ ಪೇಂಟ್ಸ್, ಮಾರುತಿ, ಜೆಎಸ್‌ಡಬ್ಲ್ಯೂ ಸ್ಟೀಲ್, ಟಿಸಿಎಸ್, ಎಸ್‌ಬಿಐ, ಐಟಿಸಿ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಪ್ರಮುಖವಾಗಿ ನಷ್ಟ ಅನುಭವಿಸಿದವು. ಮತ್ತೊಂದೆಡೆ, ಬಜಾಜ್ ಫಿನ್‌ಸರ್ವ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟೈಟಾನ್, ಎಲ್ & ಟಿ ಮತ್ತು ವಿಪ್ರೋ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.
"ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಸಂಕೇತಗಳಿಂದ ಪ್ರೇರಿತವಾದ ದಿನದ ಆರಂಭದಲ್ಲಿ ಮತ್ತೊಂದು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ನಂತರ ದೇಶೀಯ ಮಾರುಕಟ್ಟೆಯು ಇಂದು ಕ್ಷಣಿಕವಾಗಿ ವಿರಾಮ ಪಡೆಯಿತು" ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಉತ್ಪಾದನೆ ಮತ್ತು ಸೇವೆಗಳಲ್ಲಿನ ಪ್ರಗತಿಯಿಂದ ಬೆಂಬಲಿತವಾದ ಬಂಡವಾಳ ಸರಕುಗಳು ಮತ್ತು ಕೈಗಾರಿಕಾ ವಲಯಗಳ ಷೇರುಗಳು ಏರಿಕೆಯನ್ನು ತೋರಿಸಿದವು. ಬಿಎಸ್‌ಇ ಮಿಡ್‌ಕ್ಯಾಪ್ ಶೇಕಡಾ 0.25 ರಷ್ಟು ಏರಿಕೆ ಕಂಡರೆ, ಸ್ಮಾಲ್‌ಕ್ಯಾಪ್ ಶೇಕಡಾ 0.53 ರಷ್ಟು ಹೆಚ್ಚಳ ದಾಖಲಿಸಿತು.
ಬಿಎಸ್‌ಇ ತೈಲ ಮತ್ತು ಅನಿಲ ಶೇ. 0.81, ಬಿಎಸ್‌ಇ ಮೆಟಲ್ ಶೇ.0.33, ಬಿಎಸ್‌ಇ ಎನರ್ಜಿ ಶೇ.0.36 ಮತ್ತು ಬ್ಯಾಂಕೆಕ್ಸ್ ಶೇ.0.29ರಷ್ಟು ಕುಸಿದಿವೆ. ಮತ್ತೊಂದೆಡೆ, ಬಿಎಸ್‌ಇ ಇಂಡಸ್ಟ್ರಿಯಲ್ಸ್ ಶೇಕಡಾ 1.22, ದೂರಸಂಪರ್ಕ ಶೇಕಡಾ 1.52, ಕ್ಯಾಪಿಟಲ್ ಗೂಡ್ಸ್ ಶೇಕಡಾ 1.18 ಮತ್ತು ಕನ್ಸೂಮರ್ ಡ್ಯೂರಬಲ್ಸ್ ಶೇಕಡಾ 0.76 ರಷ್ಟು ಏರಿಕೆಯಾಯಿತು.
ತಂತ್ರಜ್ಞಾನ ಕಂಪನಿ ಎನ್‌ವಿಡಿಯಾದ ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳು ಬೆರಗುಗೊಳಿಸುವಂತೆ ಹೊರಹೊಮ್ಮಿವೆ. ಈ ಮೂಲಕ ಅಮೆರಿಕದ ಮಾರುಕಟ್ಟೆಗಳಲ್ಲಿನ ಏರುಗತಿಯು ಜಾಗತಿಕ ಮಾರುಕಟ್ಟೆಗಳಲ್ಲೂ ಪ್ರತಿಬಿಂಬಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ, ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಗುರುವಾರ ನಿವ್ವಳ ಮಾರಾಟಗಾರರಾಗಿದ್ದರು, ಏಕೆಂದರೆ ಅವರು ರೂ 1,410.05 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಬಿಎಸ್‌ಇ ಮಿಡ್ ಕ್ಯಾಪ್ ಸೂಚ್ಯಂಕ : 39,934.21 (0.25% ಹೆಚ್ಚಳ)
ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕ: 46,033.47 (0.53% ಹೆಚ್ಚಳ)
ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕ: 49,279.55 (0.31% ಹೆಚ್ಚಳ)
ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕ: 16,175.20 (0.38% ಹೆಚ್ಚಳ)