ನ್ಯೂಸ್

ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಕರಣ; ಐದನೇ ಆರೋಪಿಯನ್ನು ಬಂಧಿಸಿದ NIA

ಬೆಂಗಳೂರು: ಮಾರ್ಚ್​ 01ರಂದು ನಗರದ ಕುಂದಲಹಳ್ಳಿ ಅಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಐದನೇ ಆರೋಪಿಯನ್ನು ವಶಕ್ಕೆ ಪಡೆದಿದೆ.

ಹುಬ್ಬಳ್ಳಿಯ ಶೋಯೆಬ್​ ಅಹ್ಮದ್​ ಮಿರ್ಜಾ ಅಲಿಯಾಸ್​ ಚೋಟು (35) ಬಂಧಿತ ಆರೋಪಿ. ಈತ ಲಷ್ಕರ್​-ಇ-ತೋಯ್ಬಾ (LET) ಪರ ಪಿತೂರಿ ನಡೆಸಿದ ಆರೋಪದ ಮೇಲೆ ಶಿಕ್ಷೆ ಅನುಭವಿಸಿ 2018ರಲ್ಲಿ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರಬಂದ ಬಳಿಕ ಮತೀನ್ ಸ್ನೇಹ ಬೆಳೆಸಿದ್ದ. ಬಳಿಕ ವಿದೇಶದಲ್ಲಿರುವ ಶಂಕಿತ ಆನ್‌ಲೈನ್‌ ಹ್ಯಾಂಡ್ಲರ್‌ಗೆ ಅಬ್ದುಲ್ ಮತೀನ್‌ನನ್ನು ಶೋಹೆಬ್ ಅಹ್ಮದ್ ಪರಿಚಯ ಮಾಡಿದ್ದ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಷ್ಟ್ರೀಯ ತನಿಖಾ ದಳ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ನಾಲ್ಕು ರಾಜ್ಯಗಳಲ್ಲಿ ಮೂರು ದಿನಗಳು ತೀವ್ರ ಶೋಧ ನಡೆಸಿದ ಬಳಿಕ ಲಷ್ಕರ್​-ಇ-ತೋಯ್ಬಾ (LET) ಪರ ಪಿತೂರಿ ನಡೆಸಿದ ಆರೋಪದ ಮೇಲೆ ಶಿಕ್ಷೆ ಅನುಭವಿಸಿ 2018ರಲ್ಲಿ ಬಿಡುಗಡೆಯಾಗಿದ್ದ ಶೋಯೆಬ್​ ಅಹ್ಮದ್​ ಮಿರ್ಜಾ ಅಲಿಯಾಸ್​ ಚೋಟುನನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದೆ.

ಕರ್ನಾಟಕದ ಹುಬ್ಬಳ್ಳಿಯಲ್ಲೂ ದಾಳಿ ನಡೆಸಿ ಶೋಯೆಬ್ ಮತ್ತು ಸಹೋದರನನ್ನ ವಶಕ್ಕೆ ಪಡೆಯಲಾಗಿತ್ತು. ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದ್ದ NIA ಅಧಿಕಾರಿಗಳು ಶೋಯೆಬ್ ಮಿರ್ಜಾನನ್ನು ಬಂಧಿಸಿದ್ದಾರೆ.ಮೂಲತಃ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಶೋಯೆಬ್‌ ಅಬ್ದುಲ್ ಮಿರ್ಜಾ, ಹುಬ್ಬಳ್ಳಿಯಲ್ಲಿ ಗೌಸಿಯಾ ಟೌನ್ ವಾಸವಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.