ನ್ಯೂಸ್

ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಕರಣ; ಬಿಜೆಪಿ ಕಾರ್ಯದರ್ಶಿಯನ್ನು ವಶಕ್ಕೆ ಪಡೆದ ಎನ್​ಐಎ

ಬೆಂಗಳೂರು: ಮಾರ್ಚ್​ 01ರಂದು ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (NIA) ಮಹತ್ವದ ಬೆಳವಣಿಗೆಯಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಘಟಕದ ಬಿಜೆಪಿ ಕಾರ್ಯದರ್ಶಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ.

ವಶಕ್ಕೆ ಪಡೆದಿರುವ ವ್ಯಕ್ತಿಯ ಹೆಸರು ಸಾಯಿಪ್ರಸಾದ್​ ಎಂದು ತಿಳಿದು ಬಂದಿದ್ದು, ಈತ ಮೊಬೈಲ್ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿದ್ದ NIA ಅಧಿಕಾರಿಗಳು, ಇದೀಗ ತೀರ್ಥಹಳ್ಳಿ ಬಿಜೆಪಿ ಘಟಕದ ಕಾರ್ಯದರ್ಶಿಯಾಗಿರುವ ಸಾಯಿಪ್ರಸಾದ್​ನನ್ನು ವಶಕ್ಕೆ ಪಡೆದಿದ್ದಾರೆ.

ತನಿಖೆಯ ಭಾಗವಾಗಿ ಮಾರ್ಚ್​ 27ರಂದು ಎನ್​ಎಐ ಅಧಿಕಾರಿಗಳು ತೀರ್ಥಹಳ್ಳಿಯಲ್ಲಿರುವ ಇಂಬ್ರೇಜ್ ಮಾಲೀಕತ್ವದ ಡಿಜಿಟಲ್ ಜೋನ್ ಮೊಬೈಲ್ ಮಳಿಗೆ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಆರೋಪಿಗಳ ಜೊತೆ ಹಾಗೂ ಮೊಬೈಲ್ ಅಂಗಡಿ ಮಾಲೀಕನ ಜೊತೆ ಸಾಯಿಪ್ರಸಾದ್ ಸಂಬಂಧದ ಬಗ್ಗೆ ಮಾಹಿತಿ ಸಿಕ್ಕಿದೆ. ಇದರ ಭಾಗವಾಗಿ ಎನ್​ಎಐ ಅಧಿಕಾರಿಗಳು ಸಾಯಿಪ್ರಸಾಸ್​ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಆರೋಪ-ಪ್ರತ್ಯಾರೋಪ

ಇತ್ತ ಬಿಜೆಪಿ ಕಾರ್ಯದರ್ಶಿಯನ್ನು ಎನ್​ಎಐ ವಶಕ್ಕೆ ಪಡೆಯುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಗದ್ದಲ ಸೃಷ್ಟಿಸಿದ್ದು ಬಿಜೆಪಿ-ಕಾಂಗ್ರೆಸ್​ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಇದಕ್ಕೆ ಸಂಬಂಧಿಸಿದಂತೆ ಸಚಿವ ದಿನೇಶ್​ ಗುಂಡೂರಾವ್​ ಟ್ವೀಟ್​ ಮಾಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್‌ನನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ. ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಅನ್ನೋವಂತೆ ಮಾತಾನಾಡುತ್ತಿದ್ದ ರಾಜ್ಯದ ಕೇಸರಿ ಕಲಿಗಳು ಈಗ ಏನು ಹೇಳುತ್ತಾರೆ? ಬಿಜೆಪಿ ಮುಖಂಡನನ್ನು NIA ವಶಕ್ಕೆ ಪಡೆದಿದೆ ಎಂದ ಮೇಲೆ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಅರ್ಥಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಧರ್ಮ ರಕ್ಷಣೆ ಹೆಸರಲ್ಲಿ ರಾಜ್ಯದಲ್ಲಿ ಬಿಜೆಪಿ ನಡೆಸುತ್ತೀರೋ ಕೇಸರಿ ಭಯೋತ್ಪಾದನೆ ಎಷ್ಟು ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ ಅನ್ನೋದಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ? ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ದೇಶದ ಮೇಲೆ ಹೇರುತ್ತಿರುವ ಕೇಂದ್ರ ಬಿಜೆಪಿಯು ಇದಕ್ಕೇನು ಹೇಳುತ್ತದೆ? ರಾಷ್ಟ್ರದ ಭದ್ರತೆ ವಿಚಾರವನ್ನೂ ಲೆಕ್ಕಿಸದೇ ರಾಮೇಶ್ವರಂ ಬಾಂಬ್‌ ಸ್ಫೋಟ ಪ್ರಕರಣವನ್ನು ಕಾಂಗ್ರೆಸ್‌ ಸರ್ಕಾರದ ಮೇಲೆ ಹೊರೆಸಿದ ರಾಜ್ಯ ಬಿಜೆಪಿ ನಾಯಕರು ಈಗ ಉತ್ತರ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.