ನ್ಯೂಸ್

ಪ್ರವೀಣ್​ ನೆಟ್ಟಾರು ಹತ್ಯೆ; ಪ್ರಕರಣದ 6ನೇ ಆರೋಪಿ ಅರೆಸ್ಟ್​ ಮಾಡಿದ NIA

ನವದೆಹಲಿ: ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು (NIA) ಆರನೇ ಆರೋಪಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಬಂಧಿತರನ್ನು ಬಂಟ್ವಾಳ ತಾಲ್ಲೂಕಿನ ಕೋಡಾಜೆ ನಿವಾಸಿ ಮಹಮ್ಮದ್ ಶರೀಫ್ (55) ಎಂದು ಗುರುತಿಸಲಾಗಿದೆ.

ಮಹಮ್ಮದ್ ಶರೀಫ್ ಪತ್ತೆ ಹಚ್ಚಲು ರಾಷ್ಟ್ರೀಯ ತನಿಖಾ ದಳವು (NIA) ಐದು ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು. ಪ್ರವೀಣ್​ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿದ್ದ ತಂಡದಲ್ಲಿ ಈತ ಇದ್ದ. ನಿಷೇಧಿತ ಪಿಎಫ್​ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಈತನ ಮನೆ ಮೇಲೆ ಎನ್​ಎಐ ಅಧಿಕಾರಿಗಳು ಎರಡು ಬಾರಿ ದಾಳಿ ಮಾಡಿದ್ದರು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಹಚರರ ಸ್ಥಳಗಳ ಮೇಲೆ ಇತ್ತೀಚೆಗೆ ಎನ್​ಐಎ ದಾಳಿ ಮಾಡಿ ದಾಖಲೆಗಳು ಜಪ್ತಿ ಮಾಡಿಕೊಂಡಿತ್ತು. ಕರ್ನಾಟಕ ಸೇರಿ ತಮಿಳುನಾಡಿನ 16 ಕಡೆ ಎನ್​​​ಐಎ ಅಧಿಕಾರಿಗಳು ದಾಳಿ ಮಾಡಿದ್ದರು. ಹತ್ಯೆಯ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್‌ಗೆ ಇಬ್ಬರು ಆರೋಪಿಗಳು ಆಶ್ರಯ ನೀಡಿದ್ದರು.

ಜುಲೈ 26, 2022 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದ ಒಂದು ಕೊಲೆ ರಾಜ್ಯದಲ್ಲಿ ಬೆಚ್ಚಿ ಬೀಳಿಸಿತ್ತು. ಹಿಂದು ಪರ ಹೋರಾಟಗಾಗರು ಸ್ವತಃ ಬಿಜೆಪಿ ವಿರುದ್ದ ರೊಚ್ಚಿಗೇಳುವಂತೆ ಆಗಿತ್ತು ಅವತ್ತಿನ ಸ್ಥಿತಿ. ಎನ್​ಐಎ ಪ್ರವೀಣ್ ನೆಟ್ಟಾರು ಕೊಲೆ ಕೇಸ್ ತನಿಖೆ ನಡೆಸುತ್ತಿದ್ದು, 21 ಆರೋಪಿಗಳನ್ನು ಅರೆಸ್ಟ್ ಮಾಡಿ ಆರೋಪಿಗಳ ವಿರುದ್ದ ಚಾರ್ಶೀಟ್ ಸಲ್ಲಿಕೆ ಮಾಡಿತ್ತು. ಮಹಮ್ಮದ್ ಶರೀಫ್ ಸೇರಿದಂತೆ ಈವರೆಗೆ 20 ಜನರನ್ನು ಬಂಧಿಸಲಾಗಿದೆ.