ನ್ಯೂಸ್

ಭಾರತದ ಆ್ಯಪ್​ಗೆ ಹೆದರಿ​ ಚೀನಾದ ಟಿಕ್​ಟಾಕ್​ ರೇಟಿಂಗ್​ ಹೆಚ್ಚಿಸೇಬಿಟ್ಟಿತಲ್ಲ ಗೂಗಲ್​!

ನವದೆಹಲಿ: ಇದೀಗ ಎಲ್ಲೆಲ್ಲೂ ಸ್ವದೇಶಿ ಅಭಿಯಾನ ಶುರುವಾಗಿದೆ. ಚೀನಾ ಮೂಲದ ಟಿಕ್​ಟಾಕ್​ನಿಂದ ಆಗುತ್ತಿರುವ ಅನಾಹುತ ಹಾಗೂ ಈ ಆ್ಯಪ್​ ಯುವಕರರನ್ನು ತಪ್ಪುದಾರಿಗೆ ಎಳೆಯುತ್ತಿರುವುದನ್ನು ಗಮನಿಸಿ ಅದನ್ನು ಬ್ಯಾನ್​ ಮಾಡುವ ಅಭಿಯಾನವೂ ಶುರುವಾಗಿದೆ.

ಇದೇ ಕಾರಣಕ್ಕೆ ಭಾರತದಲ್ಲಿ ಅನೇಕ ಮಂದಿ ಆ್ಯಪ್ ಅನ್ನು ಅನ್​ ಇನ್​ಸ್ಟಾಲ್​ ಮಾಡುವ ಮೂಲಕ ಚೀನಾ ಮೂಲದ ಆ್ಯಪ್​ ಅನ್ನು ಧಿಕ್ಕರಿಸುತ್ತಿದ್ದಾರೆ. ತನ್ನ ದೇಶದಲ್ಲಿ ಟಿಕ್​ಟಾಕ್​ ಬಳಸದೇ ಭಾರತ ಸೇರಿದಂತೆ ಅನೇಕ ದೇಶಗಳ ಜನರನ್ನು ಹಾಳು ಮಾಡುತ್ತಿರುವ ಚೀನಾದ ದುರ್ಬುದ್ಧಿಗೆ ಭಾರತದಲ್ಲಿ ಇದೀಗ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ಸ್ವದೇಶಿ ಆ್ಯಪ್​ ಆಗಿರುವ "ಮಿತ್ರೋ" ಇದೀಗ ಭಾರತದಲ್ಲಿ ಹವಾ ಸೃಷ್ಟಿಸಿದೆ. ಇದಾಗಲೇ 50 ಲಕ್ಷಕ್ಕೂ ಅಧಿಕ ಬಳಕೆದಾರರು ಇದನ್ನು ಇನ್​ಸ್ಟಾಲ್​ ಮಾಡಿಕೊಂಡಿದ್ದಾರೆ.

ಆದರೆ ಅಮೆರಿಕ ಮೂಲಕ ಗೂಗಲ್​ ಸಂಸ್ಥೆ ಭಾರತದ ಟ್ರೆಂಡ್​ಗೆ ಬೆದರಿ ಬಿಟ್ಟಿದೆ! ಭಾರತ ಒಂದರಿಂದಲೇ ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ಟಿಕ್​ಟಾಕ್​ ಜಾಹೀರಾತಿನ ಮೂಲಕ ಪಡೆಯುತ್ತಿರುವ ಚೀನಾಕ್ಕೆ ಧಕ್ಕೆ ಉಂಟಾಗುವ ಭಯದಿಂದ ಗೂಗಲ್​ ಸಂಸ್ಥೆ ಕಿತಾಪತಿ ಮಾಡುತ್ತಿದೆ.

ಅದೇನೆಂದರೆ ಟಿಕ್​ಟಾಕ್​ ವಿರುದ್ಧ ಅಭಿಯಾನ ಶುರುವಾಗಿರುವ ಬೆನ್ನಲ್ಲೇ ಅದರ ವಿರುದ್ಧ ಲಕ್ಷಾಂತರ ಕಮೆಂಟ್​ಗಳನ್ನು ಜನರು ಮಾಡಿದ್ದಾರೆ. ಮದ್ರಾಸ್ ಹೈಕೋರ್ಟ್​ ಕೂಡ ಈ ಹಿಂದೆ ಈ ಆ್ಯಪ್​ ಬ್ಯಾನ್​ಗೆ ಆದೇಶ ಹೊರಡಿಸಿದ್ದನ್ನು ಕೂಡ ಉಲ್ಲೇಖಿಸಿರುವ ಅನೇಕ ಬಳಕೆದಾರರು, ಟಿಕ್​ಟಾಕ್​ನಿಂದ ಜನರು ಹೇಗೆ ಹಾದಿ ತಪ್ಪುತ್ತಿದ್ದಾರೆ ಎಂಬ ಬಗ್ಗೆ ಕಮೆಂಟ್​ಗಳನ್ನು ಮಾಡಿದ್ದಾರೆ.

ಆದರೆ ಈ ಯಾವುದೇ ಕಮೆಂಟ್​ಗಳು ಹೊಸದಾಗಿ ಟಿಕ್​ಟಾಕ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳುವವರಿಗೆ ಕಾಣಿಸಬಾರದು ಎನ್ನುವ ಕಾರಣದಿಂದ ಎಲ್ಲಾ ನಕಾರಾತ್ಮಕ ಕಮೆಂಟ್​ಗಳನ್ನು ಗೂಗಲ್​ ತೆಗೆದುಬಿಟ್ಟಿದೆ. ಅದೂ ಎಷ್ಟು ಅಂತೀರಾ. ಒಂದಲ್ಲಾ... ಎರಡಲ್ಲಾ... ಬರೋಬ್ಬರಿ 80 ಲಕ್ಷಕ್ಕೂ ಅಧಿಕ ನೆಗೆಟಿವ್ ರಿವ್ಯೂಗಳನ್ನು ಗೂಗಲ್​ ಅಳಿಸಿ ಹಾಕಿದೆ. 2.0ಕ್ಕೆ ಇಳಿದಿದ್ದ ಟಿಕ್​ಟಾಕ್​ ರೇಟಿಂಗ್​ ಅನ್ನು ಪುನಃ 4.4ಕ್ಕೆ ಏರಿಸಲು ಗೂಗಲ್​ ಯಶಸ್ವಿ ಕೂಡ ಆಗಿಬಿಟ್ಟಿದೆ!

ಹೊಸದಾಗಿ ಟಿಕ್​ಟಾಕ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಲು ಬಯಸುವವರಿಗೆ ಅದರಿಂದ ಆಗುತ್ತಿರುವ ಯಾವುದೇ ಅನಾಹುತಗಳ ಬಗ್ಗೆ ಈಗ ಕಮೆಂಟ್​ಗಳೇ ಇಲ್ಲ. ಏನಿದ್ದರೂ ಅದರ ಪರವಾಗಿ ಇರುವ ಕಮೆಂಟ್​ಗಳು ಮಾತ್ರ ಕಾಣಿಸುವ ಹಿನ್ನೆಲೆಯಲ್ಲಿ, ಹೆಚ್ಚು ಹೆಚ್ಚು ಜನರು ಇದನ್ನು ಪುನಃ ಡೌನ್​ಲೋಡ್​ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಗೂಗಲ್​ಗೂ ಆದಾಯ ಬರುತ್ತಿದೆ. (ಏಜೆನ್ಸೀಸ್​)