ತಿರುವನಂತಪುರಂ: ಜೀವನದಲ್ಲಿ ಸಾಕಷ್ಟು ಆಸೆ-ಆಕಾಂಕ್ಷೆಗಳನ್ನಿಟ್ಟುಕೊಂಡು ವೈವಾಹಿಕ ಜೀವನ ಪ್ರವೇಶಿಸಿದ್ದ ನವಜೋಡಿ ಮದುವೆಯಾದ ಕೇವಲ ಹತ್ತು ದಿನದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ಶನಿವಾರ ಬೆಳಗ್ಗೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
ಪಶ್ಚಿಮ ಕನ್ನಮಂಗಳಂದ ಸಲಾಹುದೀನ್ (25) ಹಾಗೂ ಚೆಲೆಂಬ್ರದ ಫಾತಿಮಾ ಜಮುನಾ (19) ಮೃತ ನವದಂಪತಿ. ಇಬ್ಬರು ಮಲಪ್ಪುರಂನಲ್ಲೇ ವಾಸವಿದ್ದರು. ಶನಿವಾರ ಬೆಳಗ್ಗೆ ದಂಪತಿ ಬೈಕ್ನಲ್ಲಿ ಪ್ರಯಾಣಿಸುವಾಗ ಚೆಲೆಂಬ್ರ ಪಂಚಾಯಿತಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ನವದಂಪತಿ ರಾಯಲ್ ಎನ್ಫೀಲ್ಡ್ ಬೈಕನ್ನೇರಿ ಸಂಬಂಧಿಕರ ಮನೆಗೆ ಭೇಟಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಚೆಲೆಂಬ್ರ ಪಂಚಾಯಿತಿ ಬಳಿ ಬರುತ್ತಿದ್ದಂತೆ ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ಸಲಾಹುದೀನ್ ಯತ್ನಿಸಿದ್ದಾರೆ. ಆದರೆ, ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ಅಪ್ಪಳಿಸಿದೆ. ಈ ವೇಳೆ ಎದುರುಗಡೆ ಬರುತ್ತಿದ್ದ ಲಾರಿಯ ಕೆಳಗೆ ಇಬ್ಬರು ಸಿಲುಕಿ, ಗಂಭೀರ ಗಾಯಗೊಂಡಿದ್ದರು.
ತೀವ್ರ ರಕ್ತಸ್ರಾವವಾಗಿ ಸಲಾಹುದೀನ್ ಸ್ಥಳದಲ್ಲೇ ಮೃತಪಟ್ಟರೆ, ಫಾತಿಮಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದರು. ಇಬ್ಬರ ಶವವನ್ನ ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತೆನ್ಹಿಪಾಲಂ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಕೋಯಿಕ್ಕೋಡ್ನ ಫೆರೊಕೆ ಪೆತ್ತಾದಲ್ಲಿರುವ ಫಾತಿಮಾ ಅವರ ಸಂಬಂಧಿಕರ ಮನೆಗೆ ಭೇಟಿ ನೀಡಿ ದಂಪತಿ ಹಿಂದಿರುಗುವಾಗ ದುರ್ಘಟನೆ ಸಂಭವಿಸಿದೆ. (ಏಜೆನ್ಸೀಸ್)