ತಿರುಪತಿ: ತಿರುಪತಿಗೆ ಹೋಗುವ ಭಕ್ತಾದಿಗಳು ಅಲ್ಲಿನ ಪಾದಚಾರಿ ಮಾರ್ಗದಲ್ಲಿ ಸಾಮಾನ್ಯವಾಗಿ 'ಗೋವಿಂದ ಗೋವಿಂದ' ಎಂದು ಜಪಿಸುತ್ತ ಸಾಗುತ್ತಾರೆ. ಆದರೆ ಇನ್ಮುಂದೆ ಅಂಥವರು ಏಕಾಂಗಿಯಾಗಿ ಇಲ್ಲವೇ ಕಡಿಮೆ ಸಂಖ್ಯೆಯಲ್ಲಿ ಚದುರಿದಂತೆ ಹೋಗುವಂತಿಲ್ಲ. ಏಕೆಂದರೆ ಅವರನ್ನು ಇನ್ನು ಗುಂಪು ಗುಂಪಾಗಿಯೇ ಕಳಿಸಿಕೊಡಲಾಗುತ್ತದೆ.
ಮೊನ್ನೆಮೊನ್ನೆಯಷ್ಟೇ ಇಲ್ಲಿನ ಪಾದಚಾರಿ ಮಾರ್ಗದಲ್ಲಿ ಆರು ವರ್ಷದ ಬಾಲಕಿಯೊಬ್ಬಳ ಮೇಲೆ ಚಿರತೆ ದಾಳಿ ನಡೆಸಿ ಹತ್ಯೆಗೈದ ಕಾರಣ ತಿರುಪತಿ ತಿರುಮಲ ದೇವಾಲಯದ ಆಡಳಿತ ಮಂಡಳಿ ಭಕ್ತರ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಂಡಿದೆ. ಭಕ್ತರಿಗೆ ಭದ್ರತೆ ಒದಗಿಸುವ ಸಲುವಾಗಿ ಹೊಸ ನಿಯಮಗಳನ್ನು ರೂಪಿಸಿದೆ. ಇಲ್ಲಿನ ಪಾದಚಾರಿ ಮಾರ್ಗಗಳ ಮೂಲಕ ಸಾಗುವ ಭಕ್ತರು ಇನ್ಮುಂದೆ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಟಿಟಿಡಿ ಅಧ್ಯಕ್ಷ ಬಿ. ಕರುಣಾಕರ ರೆಡ್ಡಿ ಜಿಲ್ಲಾ ಮತ್ತು ಅರಣ್ಯಾಧಿಕಾರಿಗಳ ಜತೆ ನಡೆಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯಗಳನ್ನು ತಳೆಯಲಾಗಿದೆ.
ಸುರಕ್ಷತಾ ನಿಯಮಗಳು
- ಹನ್ನೆರಡು ವರ್ಷಕ್ಕಿಂತ ಕಿರಿಯ ಮಕ್ಕಳೊಂದಿಗೆ ಪಾದಚಾರಿ ಮಾರ್ಗದಲ್ಲಿ ಸಂಚರಿಸುವ ಭಕ್ತರಿಗೆ ಬೆಳಗ್ಗೆ 5ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಚಾರಣ ನಡೆಸಲು ಅವಕಾಶ ಇರುತ್ತದೆ. ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಘಾಟಿಯಲ್ಲಿ ದ್ವಿಚಕ್ರ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿರುತ್ತದೆ.
- ಪಾದಯಾತ್ರೆಗೆ ತೆರಳುವ ಪ್ರತಿಯೊಬ್ಬರಿಗೂ ಕೋಲು ಕೊಡಲಾಗುತ್ತದೆ. ಅಲ್ಲದೆ ನೂರು ಭಕ್ತರಿಗೆ ಒಂದರಂತೆ ಗುಂಪುಗಳನ್ನು ಮಾಡಿ, ಆ ಗುಂಪಿಗೆ ಒಬ್ಬ ಸಿಬ್ಬಂದಿಯನ್ನು ಜತೆ ಮಾಡಿ ಕಳುಹಿಸಿಕೊಡಲಾಗುತ್ತದೆ.
- ಅಲಿಪಿರಿ ಹಾಗೂ ತಿರುಮಲ ನಡುವಿನ 7ನೇ ಮೈಲಿಯಲ್ಲಿ ಪೊಲೀಸ್ ಚೌಕಿ ನಿರ್ಮಿಸಿ, ಮಕ್ಕಳು ಮತ್ತು ಶಿಶುಗಳ ಕೈಗೆ ಭದ್ರತಾ ಟ್ಯಾಗ್ ಅಳವಡಿಸಿ, ಚೌಕಿಯಲ್ಲಿ ಪೋಷಕರ ವಿವರ ದಾಖಲಿಸಲಾಗುವುದು.
- ಪ್ರಾಣಿಗಳಿಗೆ ಆಹಾರ ಪದಾರ್ಥ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುವುದು. ಈ ಪ್ರದೇಶದಲ್ಲಿ 500 ಸಿಸಿಟಿವಿ ಕ್ಯಾಮರಾ, ಫೋಕಸ್ ಲೈಟ್‌ಗಳನ್ನು ಅಳವಡಿಸಲಿಕ್ಕೂ ಕ್ರಮಕೈಗೊಳ್ಳಲಾಗಿದೆ. ಪಾದಾಚಾರಿ ಮಾರ್ಗದಲ್ಲಿ ಬೇಲಿ ನಿರ್ಮಾಣಕ್ಕಾಗಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.