ನ್ಯೂಸ್

ತುಂಗಭದ್ರಾ ಡ್ಯಾಮ್​ಗೆ ಹೊಸ ಗೇಟ್​ಗಳ ಅಳವಡಿಕೆ ಯಾವಾಗ? ಕ್ಲಾರಿಟಿ ಕೊಟ್ಟ ಸರ್ಕಾರ | TB Dam

ಬೆಂಗಳೂರು: ತುಂಗಭದ್ರಾ ಅಣೆಕಟ್ಟೆಯ(TB Dam) ಎಲ್ಲಾ 33 ಕ್ರೆಸ್ಟ್ ಗೇಟ್ ಗಳನ್ನು ಬದಲಾವಣೆ ಮಾಡಲು ತುಂಗಭದ್ರಾ ಮಂಡಳಿಯವರು ಟೆಂಡರ್ ಕರೆದಿದ್ದಾರೆ. ಈಗಾಗಲೇ ಅಹಮದಾಬಾದ್ ಸಂಸ್ಥೆಯವರಿಗೆ ಗುತ್ತಿಗೆ ನೀಡಲಾಗಿದೆ. ಆರು ಗೇಟ್ ಗಳ ತಯಾರಿ ಕೆಲಸ ನಡೆಯುತ್ತಿದೆ” DCM ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಬುಧವಾರ ತಿಳಿಸಿದರು.

“ಈಗಾಗಲೇ ಗೇಟ್ ಗಳ ಫ್ಯಾಬ್ರಿಕೇಷನ್ ಕೆಲಸ ಪ್ರಾರಂಭವಾಗಿದೆ. ಅಗತ್ಯ ಸಲಕರಣೆಗಳು ಬರುತ್ತಿವೆ. ಗದಗ, ಹೊಸಪೇಟೆಯಲ್ಲಿ ಎರಡೆರಡು ಕಡೆ ಗೇಟ್ ಗಳ ತಯಾರಿ ಕೆಲಸ ಮುಂದುವರೆದಿದೆ. ಜಿಂದಾಲ್ ಅವರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಆಂಧ್ರ ಪ್ರದೇಶದ ಎಂಜಿನಿಯರ್ ಅವರಿಗೆ ಕೆಲಸವನ್ನು ಇನ್ನೂ ವೇಗಗೊಳಿಸಿ ಎಂದು ಸೂಚನೆ ನೀಡಿದ್ದೇನೆ. ಗೇಟ್ ತಯಾರಿಸಲು ಬೇರೆಯವರಿಗೂ ಅವಕಾಶ ನೀಡಿ, ಇದರಿಂದ ಕೆಲಸ ಬೇಗ ಆಗುತ್ತದೆ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.

ಎರಡನೇ ಬೆಳೆಗೆ ನೀರಿಲ್ಲ

“ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹ ಮಾಡಬೇಕಾದ ಕಾರಣಕ್ಕೆ ಎರಡನೇ ಬೆಳೆಗೆ ಈ ವರ್ಷ ನೀರು ನೀಡಲು ಸಾಧ್ಯವಾಗುತ್ತಿಲ್ಲ. ನೀರು ಕೊಟ್ಟರೆ ಗೇಟ್ ಅಳವಡಿಕೆ ಸಾಧ್ಯವಿಲ್ಲ. ಬೆಳೆಯ ಬಗ್ಗೆ ನಮ್ಮ ರೈತರಿಗೆ ಆತಂಕವಾಗಿದೆ. ನಾನು ಸಹ ಅಧಿಕಾರಿಗಳ ಬಳಿ ಮಾತನಾಡಿದೆ. ಆಗ ಅವರು ಅಣೆಕಟ್ಟು ಮುಖ್ಯವೇ? ಬೆಳೆ ಮುಖ್ಯವೇ? ಎಂದು ಕೇಳಿದರು. ಕುಡಿಯುವ ನೀರಿಗೆ ಹಾಗೂ ಕೈಗಾರಿಕೆಗಳಿಗೆ ನಾವು ಯಥಾಸ್ಥಿತಿಯಲ್ಲಿ ನೀರು ಹರಿಸುತ್ತೇವೆ. ಸ್ಟ್ರಚ್ಚರ್ ದುರಸ್ತಿ ಕೆಲಸಗಳನ್ನು ತುರ್ತಾಗಿ ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು.

“ಕನ್ನಯ್ಯ ನಾಯ್ಡು ಅವರ ಸಲಹೆಯಂತೆ ಅಣೆಕಟ್ಟೆಯಲ್ಲಿ ಸಂಪೂರ್ಣ ನೀರು ಸಂಗ್ರಹ ಮಾಡದೇ 1,626 ಅಡಿ ಅಂದರೆ ಶೇ. 76 ರಷ್ಟು ನೀರು ಸಂಗ್ರಹ ಮಾಡಬೇಕು. ಒಟ್ಟು 80 ಟಿಎಂಸಿ ನೀರನ್ನು ಸಂಗ್ರಹ ಮಾಡಲು ತುಂಗಭದ್ರಾ ಮಂಡಳಿ ತೀರ್ಮಾನ ಮಾಡಿದೆ. ಈ ಮಂಡಳಿಯಲ್ಲಿ ನಮ್ಮ ರಾಜ್ಯದ ಯಾವುದೇ ಅಧಿಕಾರವಿಲ್ಲ. ಬೇರೆಯವರು ದುಡ್ಡು ನೀಡುತ್ತಾರೋ ಬಿಡುತ್ತಾರೋ, ನಾವೇ ದುಡ್ಡು ನೀಡಿ ಅಣೆಕಟ್ಟು ಉಳಿಸಿಕೊಳ್ಳಲು ತಯಾರಿದ್ದೇವೆ. ನಮ್ಮ ರೈತರ ಜೊತೆಗೆ ಅವರ ರೈತರನ್ನೂ ನಾವು ಉಳಿಸುತ್ತೇವೆ” ಎಂದರು.

ದುರಸ್ತಿ ವೆಚ್ಚ ನೀಡಲು ನಾವು ತಯಾರಿದ್ದೇವೆ

“ದುರಸ್ತಿ ವೆಚ್ಚ ಕರ್ನಾಟಕದ್ದು ಶೇ 66, ಆಂಧ್ರ ಹಾಗೂ ತೆಲಂಗಾಣ ಸೇರಿ 33 ರಷ್ಟು ಹಣ ನೀಡಬೇಕು. ಆದರೆ ಆಂಧ್ರದವರು ಹಣವನ್ನೇ ಮೀಸಲಿಟ್ಟಿರಲಿಲ್ಲ. ಅವರಿಂದ ಆನಂತರ ಹಣ ಪಡೆದರಾಯಿತು, ಅವರ ಪಾಲಿನ ಹಣವನ್ನೂ ನಾವೇ ನೀಡುತ್ತೇವೆ ಎಂದು ಅಧಿಕಾರಿಗಳಿಗೆ ಹೇಳಿದೆ. ನಾವು ದುಡ್ಡು ನೀಡಲು ಹೋದರೂ ಅವರು ತೆಗೆದುಕೊಳ್ಳಲು ತಯಾರಿಲ್ಲ. ನಮಗೆ, ನಮ್ಮ ರೈತರಿಗೆ ತೊಂದರೆಯಾಗುವುದು ಬೇಡ ಎಂದು ನಾವೇ ಹಣ ನೀಡಲು ಮುಂದಾದೆವು” ಎಂದರು.