ಮುಂಬೈ: ಜನವರಿ 5 ರಂದು ಚಂದಾದಾರಿಕೆಗಾಗಿ ಎರಡು ಹೊಸ ಎನ್ಎಫ್ಒ (ನ್ಯೂ ಫಂಡ್ ಆಫರ್)ಗಳು ತೆರೆದುಕೊಂಡಿವೆ.
ಈ ಪೈಕಿ ಕ್ವಾಂಟ್ ಮ್ಯೂಚುವಲ್ ಫಂಡ್ ಕಂಪನಿಯ ಕ್ವಾಂಟ್ ಕನ್ಸಂಪ್ಶನ್ ಫಂಡ್ ಒಂದಾಗಿದ್ದರೆ, ಇನ್ನೊಂದು ಸುಂದರಂ ಮ್ಯೂಚುವಲ್ ಫಂಡ್ ಕಂಪನಿಯ ಸುಂದರಂ ಮಲ್ಟಿ ಅಸೆಟ್ ಅಲೊಕೇಶನ್ ಫಂಡ್.
ಕ್ವಾಂಟ್ ಕನ್ಸಂಪ್ಶನ್ ಫಂಡ್:
ಇದನ್ನು ಓಪನ್-ಎಂಡೆಡ್ ಇಕ್ವಿಟಿ ಸ್ಕೀಮ್ ಎಂದು ವರ್ಗೀಕರಿಸಲಾಗಿದೆ. ವಲಯ/ವಿಷಯಾಧಾರಿತ ಷೇರು ಹೂಡಿಕೆಯ ನಿಧಿ ಇದಾಗಿರುತ್ತದೆ. ಪ್ರಾಥಮಿಕವಾಗಿ ಬಂಡವಾಳ ಹೆಚ್ಚಳ ಮತ್ತು ದೀರ್ಘಾವಧಿಯ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ.
ಇದರ ಹೂಡಿಕೆ ತಂತ್ರವು ಬಳಕೆ ಚಾಲಿತ ಕಂಪನಿಗಳ ಬಂಡವಾಳದ ಸುತ್ತ ಸುತ್ತುತ್ತದೆ. ಅಂದರೆ, ಗ್ರಾಹಕ ಬಳಕೆ ಸಂಬಂಧಿತ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ಎನ್ಎಫ್ಒನಲ್ಲಿ ಕನಿಷ್ಠ ಹೂಡಿಕೆ ಮೊತ್ತವು 5,000 ರೂಪಾಯಿ ಆಗಿರುತ್ತದೆ.
ಹೆಚ್ಚು ಕೇಂದ್ರೀಕೃತ ಮಾನ್ಯತೆ ಬಯಸುವ ಹೂಡಿಕೆದಾರರಿಗೆ ಇದು ಸೂಕ್ತವಾಗಿದೆ ಎಂದು ಕ್ವಾಂಟ್ ಮ್ಯೂಚುವಲ್ ಫಂಡ್ ಹೇಳಿದೆ. ಈ ಎನ್ಎಫ್ಒ ಹೂಡಿಕೆಗೆ ಜ. 18 ಕೊನೆಯ ದಿನವಾಗಿದೆ.
ಈ ಫಂಡ್ ಅನ್ನು ಓಪನ್-ಎಂಡೆಡ್ ಹೈಬ್ರಿಡ್ ಸ್ಕೀಮ್ ಆಗಿ ಪರಿಚಯಿಸಲಾಗಿದೆ. ವೈವಿಧ್ಯಮಯ ಹೂಡಿಕೆ ತಂತ್ರವನ್ನು ಬಳಸಿಕೊಳ್ಳುವ ಮೂಲಕ ದೀರ್ಘಕಾಲೀನ ಬಂಡವಾಳ ಗಳಿಸುವ ಗುರಿಯನ್ನು ಇದು ಹೊಂದಿದೆ.
ನಿಧಿಯ ಉದ್ದೇಶವು ಷೇರು ಮತ್ತು ಷೇರು ಸಂಬಂಧಿತ ಭದ್ರತೆಗಳು, ಸಾಲ ಮತ್ತು ಹಣ ಮಾರುಕಟ್ಟೆ ಉಪಕರಣಗಳು ಮತ್ತು ಚಿನ್ನದ ಇಟಿಎಫ್‌ಗಳು... ಹೀಗೆ ವಿವಿಧ ರೀತಿಗಳಲ್ಲಿ ಹೂಡಿಕೆ ಮಾಡುವುದನ್ನು ಒಳಗೊಂಡಿರುತ್ತದೆ. ಈ ಎನ್ಎಫ್ಒದಲ್ಲಿ ಕನಿಷ್ಠ ಹೂಡಿಕೆ ಮೊತ್ತವು 100 ರೂಪಾಯಿ ಆಗಿದೆ.
ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುವುದರಿಂದ ಅಪಾಯದ ಸಂಭಾವ್ಯ ಕಡಿಮೆ ಇದ್ದು, ಬೆಳವಣಿಗೆಯ ಅವಕಾಶಗಳನ್ನು ನೀಡುತ್ತದೆ. ಇದು ವೈವಿಧ್ಯಮಯ ಮಾನ್ಯತೆ ಬಯಸುವ ಹೂಡಿಕೆದಾರರಿಗೆ ಸೂಕ್ತವಾಗಿದೆ ಎಂದು ಸುಂದರಂ ಮ್ಯೂಚುವಲ್ ಫಂಡ್ ಹೇಳಿದೆ. ಈ ಎನ್ಎಫ್ಒ ಹೂಡಿಕೆಗೆ ಜ. 19 ಕೊನೆಯ ದಿನವಾಗಿದೆ.
ಈ ನಿಧಿಗಳಲ್ಲಿ ಹೂಡಿಕೆ ಮಾಡುವುದು ಒಬ್ಬರ ಹೂಡಿಕೆಯ ಉದ್ದೇಶಗಳು, ಅಪಾಯ ತಡೆದುಕೊಳ್ಳುವ ಸಾಮರ್ಥ್ಯ ಮತ್ತು ಹೂಡಿಕೆ ಅವಧಿ ಅವಲಂಬಿಸಿರುತ್ತದೆ.
ಸುಂದರಂ ಮಲ್ಟಿ ಅಸೆಟ್ ಅಲೊಕೇಶನ್ ಫಂಡ್ ವಿವಿಧ ಆಸ್ತಿ ವರ್ಗಗಳಾದ್ಯಂತ ಹೂಡಿಕೆ ಮಾಡುವುದರಿಂದ , ಅಪಾಯ ಸಾಧ್ಯತೆಯನ್ನು ಸಮತೋಲನಗೊಳಿಸುತ್ತದೆ. ಮತ್ತೊಂದೆಡೆ, ಕ್ವಾಂಟ್ ಫಂಡ್, ನಿರ್ದಿಷ್ಟ ವಲಯದ ಮೇಲೆ ಕೇಂದ್ರೀಕರಿಸುತ್ತದೆ, ಗ್ರಾಹಕ ಬಳಕೆ ಕಂಪನಿಗಳಿಗೆ ಮಾನ್ಯತೆ ನೀಡುತ್ತದೆ.
ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಹೂಡಿಕೆಯ ಗುರಿಗಳೊಂದಿಗೆ ಹೊಂದಿಸಲು ಮತ್ತು ಬಂಡವಾಳದೊಳಗೆ ಅವುಗಳ ಸೂಕ್ತತೆಯನ್ನು ನಿರ್ಣಯಿಸಲು ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚಿಸುವುದು ಸೂಕ್ತ ಎಂದು ತಜ್ಞರು ಹೇಳುತ್ತಾರೆ.
ಎನ್ಎಫ್ಒ ಎಂದರೆ ನ್ಯೂ ಫಂಡ್ ಆಫರ್ (ಹೊಸ ನಿಧಿಯ ಕೊಡುಗೆ). ಮ್ಯೂಚುವಲ್ ಫಂಡ್ ಕಂಪನಿಗಳ ಹೊಸ ಯೋಜನೆಯನ್ನು ಪ್ರಕಟಿಸಿದಾಗ ಮೊದಲ ಬಾರಿಗೆ ಚಂದಾದಾರಿಕೆ ಕೊಡುಗೆ ಇದಾಗಿರುತ್ತದೆ. ಯಾವುದೇ ಒಂದು ಕಂಪನಿಯು ಷೇರು ಮಾರುಕಟ್ಟೆಯನ್ನು ಮೊದಲ ಬಾರಿಗೆ ಪ್ರವೇಶಿಸಿದಾಗ ನೀಡುವ ಐಪಿಒ (ಇನಿಷಿಯಲ್ ಪಬ್ಲಿಕ್ ಆಫರ್) ರೀತಿಯಲ್ಲಿ ಇದು ಇರುತ್ತದೆ. ಎನ್ಎಫ್ಒದಲ್ಲಿ ಸಾಮಾನ್ಯವಾಗಿ 10 ರೂಪಾಯಿಗೆ ಒಂದು ಯುನಿಟ್ ನೀಡಲಾಗುತ್ತದೆ ಹಾಗೂ ಕನಿಷ್ಠ 5000 ಸಾವಿರ ರೂಪಾಯಿ ಹೂಡಿಕೆ ಇರುತ್ತದೆ. ಅಂದರೆ, 5000 ರೂಪಾಯಿ ಹೂಡಿಕೆ ಮಾಡಿದರೆ 500 ಯುನಿಟ್ ನೀಡಲಾಗುತ್ತದೆ. ನಂತರದದಲ್ಲಿ ಷೇರುಗಳ ರೀತಿಯಲ್ಲಿಯೂ ಈ ಯೂನಿಟ್ ಬೆಲೆಗಳು ಏರಿಳಿತವನ್ನು ಕಾಣುತ್ತವೆ. ನಂತರದಲ್ಲಿ ಆಯಾ ದಿನಗಳ ಯುನಿಟ್ಗಳ ಬೆಲೆಗಳನ್ನು ಎನ್ಎವಿ (ನೆಟ್ ಅಸೆಟ್ ವ್ಯಾಲ್ಯೂ ಎನ್ನುತ್ತಾರೆ. ಉದಾಹರಣೆ ಒಂದು ವರ್ಷದ ಅವಧಿಯಲ್ಲಿ ಎನ್ಎಫ್ಒ ಲಾಭಾಂಶ ಶೇಕಡಾ 30ರಷ್ಟು ಆಗಿದ್ದರೆ, ನಿಮ್ಮ ಪ್ರತಿ ಯೂನಿಟ್ನ ಎನ್ಎವಿ 13 ರೂಪಾಯಿ ಆಗುತ್ತದೆ (10 ರೂಪಾಯಿ ಅಸಲು ಮತ್ತು 3 ರೂಪಾಯಿ ಲಾಭ).