ನ್ಯೂಸ್

ಆಹಾರ ಇಲಾಖೆಗೆ ನೂತನ ಸ್ವರೂಪ: ಫೋನ್​ಇನ್​ನಲ್ಲಿ ಸಚಿವ ಗೋಪಾಲಯ್ಯ

ಬೆಂಗಳೂರು: ಕರೊನಾ ಸಂಕಷ್ಟ ಕಾಲದಲ್ಲಿ ರಾಜ್ಯದ ಜನರು ಹಸಿವಿನಿಂದ ಬಳಲದಂತೆ ಅಚ್ಚುಕಟ್ಟಾಗಿ ಜವಾಬ್ದಾರಿ ನಿಭಾಯಿಸಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕಾಲಕ್ಕೆ ತಕ್ಕಂತೆ ಹೊಸ ಸ್ವರೂಪ ಪಡೆದುಕೊಂಡು ಜನರಿಗೆ ಇನ್ನಷ್ಟು ಪಾರದರ್ಶಕ ಹಾಗೂ ಗೊಂದಲರಹಿತ ಸೇವೆ ನೀಡುವ ಸಂಕಲ್ಪ ಮಾಡಿದೆ. ಕರೊನಾ ಆರ್ಭಟ ತಗ್ಗುತ್ತಿದ್ದಂತೆ ಈ ಕುರಿತ ಪ್ರಕ್ರಿಯೆ ಆರಂಭವಾಗಲಿದೆ.

ವಿಜಯವಾಣಿ ಫೋನ್ ಇನ್ ಹಾಗೂ ಸಂವಾದದಲ್ಲಿ ಇಲಾಖೆಯ ಬಗೆಗಿನ ಕನಸುಗಳನ್ನು ವಿವರಿಸಿದ ಆಹಾರ ಸಚಿವ ಕೆ.ಗೋಪಾಲಯ್ಯ, ‘ನಾನು ಸಚಿವನಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಂತೆ ಕರೊನಾ ಎದುರಾಯಿತು. ಇದು ತಗ್ಗಿದ ಬಳಿಕ ಇಲಾಖೆಗೆ ಹೊಸ ರೂಪ ಕೊಡುವ ತುಡಿತ ಇದೆ. ಜನರಿಗೆ ಉಪಯೋಗವಾಗುವ ಹತ್ತು ಹಲವು ಕಲ್ಪನೆಗಳಿದ್ದು, ಅವುಗಳನ್ನು ಜಾರಿಮಾಡುತ್ತೇವೆ’ ಎಂದರು.

ಕರೊನಾ ಹರಡುತ್ತಿರುವ ಸಂದರ್ಭದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬುದು ನಮ್ಮ ಮೊದಲ ಆದ್ಯತೆ. ಆ ದಿಕ್ಕಿನಲ್ಲಿ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಚರ್ಚೆ ನಡೆಸಿ ಹೊಸ ಕಾರ್ಯಕ್ರಮ ಜಾರಿ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.ಬಹುಮುಖ್ಯವಾಗಿ ಬಿಪಿಎಲ್ ಕಾರ್ಡ್ ಮಾನದಂಡ ಪರಿಷ್ಕರಿಸುವ ಆಲೋಚನೆ ಇದೆ. ಮಾನವೀಯ ನೆಲೆಯಲ್ಲಿ ಕೆಲವರು ಪಡಿತರ ಪಡೆದುಕೊಳ್ಳಲು ಅರ್ಹರಿದ್ದರೂ ನಿಯಮ ಅಡ್ಡಿಯಾಗುತ್ತದೆ. ಹೀಗಾಗಿ ಕಾರ್ಯಸಾಧುವಾದ ನಿಯಮ ಜಾರಿ ಮಾಡುವ ಉದ್ದೇಶವಿದೆ ಎಂದು ಗೋಪಾಲಯ್ಯ ಹೇಳಿದರು.

ಸಚಿವರು ಹೇಳಿದ್ದೇನು?

ಹಂತಹಂತವಾಗಿ ಇಲಾಖೆಯಲ್ಲಿ ನೇಮಕ

15 ದಿನಗಳ ಬಳಿಕ ಹೊಸ ಪಡಿತರ ಚೀಟಿ ಆನ್​ಲೈನ್ ಅರ್ಜಿ ಸ್ವೀಕಾರ

ಪಡಿತರ ತೂಕದಲ್ಲಿ ನಿಖರತೆಗೆ ಕೇಂದ್ರೀಕೃತ ಹೊಸ ತಂತ್ರಜ್ಞಾನ ಬಳಕೆ

ತೂಕದ ಮೋಸ ಮಾಡುವವರ ವಿರುದ್ಧ ದಂಡ ಹೆಚ್ಚಳಕ್ಕೆ ಕಾನೂನು

ಸೋರಿಕೆ ತಡೆಯಲು ಉನ್ನತ ಮಟ್ಟದ 5 ಕ್ಷಿಪ್ರ ಕಾರ್ಯಾಚರಣೆ ತಂಡ

ಜುಲೈನಿಂದ ಡಿಸೆಂಬರ್​ವರೆಗೆ ಮೂರು ಕೆಜಿ ಅಕ್ಕಿ, ಗೋಧಿ ಜತೆ ರಾಗಿ ಅಥವಾ ಜೋಳ ವಿತರಣೆ

ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನನಗೆ ಆಹಾರ ಇಲಾಖೆ ಜವಾಬ್ದಾರಿ ನೀಡಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಅರ್ಹರಿಗೆ ಆಹಾರ ತಲುಪಿಸಿದ ತೃಪ್ತಿ ಇದೆ. ಸೋರಿಕೆ ತಡೆಗಟ್ಟಲು ಅಧಿಕಾರಿಗಳೊಂದಿಗೆ ಸೇರಿ ವಿಶೇಷ ಪ್ರಯತ್ನ ಮಾಡಿದ್ದೇವೆ.

| ಕೆ.ಗೋಪಾಲಯ್ಯ ಆಹಾರ ಸಚಿವ