ಹೈದರಾಬಾದ್: ಪ್ರೇಮ ವಿವಾಹವನ್ನು ಪಾಲಕರು ಒಪ್ಪದಿದ್ದಕ್ಕೆ ಮನನೊಂದು ವಧುವೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ಸೋಮವಾರ ವರದಿಯಾಗಿದೆ.
ಶ್ರೀಲೇಖಾ (20) ಮೃತ ದುರ್ದೈವಿ. ಈಕೆ ಜಂಗಾಂವ್ ಜಿಲ್ಲೆಯ ಕೊಡಕಂಡ್ಲಾ ಮಂಡಲದ ಸೆವೆನ್ ನ್ಯೂ ವಿಲೇಜಸ್ ನಿವಾಸಿ. ತಮ್ಮದೇ ಗ್ರಾಮದ ಮನೋಹರ್ (20) ಎಂಬ ಯುವಕನನ್ನು ಶ್ರೀಲೇಖಾ ಪ್ರೀತಿಸುತ್ತಿದ್ದಳು. ಡಿಸೆಂಬರ್ 16ರಂದು ಇಬ್ಬರು ಮನೆಬಿಟ್ಟು ಹೈದರಾಬಾದ್ಗೆ ಪರಾರಿಯಾಗಿದ್ದರು.
ಡಿ. 22ರಂದು ಹೈದರಾಬಾದ್ನಲ್ಲೆ ಮದುವೆಯಾದ ಪ್ರೇಮಿಗಳು ತಮ್ಮ ಹಳ್ಳಿಗೆ ಹಿಂತಿರುಗಲು ರಕ್ಷಣೆಗಾಗಿ ಜನಗಮಾ ಪೊಲೀಸರ ನೆರವು ಕೇಳಿದ್ದರು. ಈ ವಿಚಾರವನ್ನು ಪೊಲೀಸರು ಎರಡು ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಆದರೂ ಇಬ್ಬರ ಮದುವೆಯನ್ನು ಒಪ್ಪಿಕೊಳ್ಳಲು ಪಾಲಕರು ತಯಾರಿರಲಿಲ್ಲ.
ಇದರ ನುಡವೆ ಗಲಾಟೆ ನಡೆಯಬಹುದೆಂಬದ ಸೂಚನೆಯಿಂದ ಶ್ರೀಲೇಖಾಳನ್ನು ಪೊಲೀಸರು ರಕ್ಷಣೆಯೊಂದಿಗೆ ಜನಗಮಾ ಸಖಿ ಕೇಂದ್ರಕ್ಕೆ ಕರೆದೊಯ್ದಿದ್ದರು. ಇತ್ತ ಪಾಲಕರು ಮದುವೆ ನಿರಾಕರಿಸಿದ್ದರಿಂದ ತುಂಬಾ ಮನನೊಂದಿದ್ದ ಶ್ರೀಲೇಖಾ ಸಖಿ ಕೇಂದ್ರದ ಶೌಚಗೃಹದಲ್ಲೇ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)