ನಾವೀಗ ಕಲಿಯುಗದಲ್ಲಿದ್ದೇವೆ. ಈ ಹಿಂದೆ ದ್ವಾಪರಯುಗ ಕಳೆದು ಹೋಗಿದೆ. ಮಹಾಭಾರತದ ಯುಗ ಅದು. ಮಹಾಭಾರತ ಯುದ್ಧ ನಡೆದ ನಂತರ ಪಾಂಡವರು ವಿಜಯಶಾಲಿಗಳಾಗಿ ರಾಜ್ಯವಾಳಿದ ಕಥನ ನಮಗೆ ಚಿರಪರಿಚಿತವೇ. ಆ ನಂತರ ಏನಾಯಿತೆಂಬುದು ಅಷ್ಟು ಜನಪ್ರಿಯವಲ್ಲದಿದ್ದರೂ ಪಾಂಡವರ ಸ್ವರ್ಗಾರೋಹಣದ ವಿವರಗಳೂ ಅಷ್ಟಿಷ್ಟು ಪರಿಚಿತ. ಆದರೆ ಸ್ವರ್ಗದತ್ತ ಪಾಂಡವರ ಪಯಣ ಹೇಗಿತ್ತು, ಕೃಷ್ಣನ ಕಥೆ ಏನು, ಪರೀಕ್ಷಿತ ಹೇಗೆ ಆಳಿದ, ಜನಮೇಜಯನ ಕಾಲದಲ್ಲಿ ಏನಾಯಿತು ಎಂಬೆಲ್ಲ ಸಂಗತಿಗಳು ಮಾತ್ರವಲ್ಲದೆ, ದ್ವಾಪರ ಕಲಿಯುಗವಾಗಿ ಬದಲಾಗುವ ಸಂಧಿಕಾಲ ಹೇಗಿತ್ತು? ಎನ್ನುವುದೂ ಕುತೂಹಲಕಾರಿ ಸಂಗತಿ. ಯುಗವೊಂದು ಕೊನೆಗೊಂಡು ನವಯುಗವೊಂದು ಶುರುವಾಗುವ ಪ್ರಕ್ರಿಯೆ ಒಂದು ಕ್ಷಣದ ಪಲ್ಲಟವಂತೂ ಅಲ್ಲ. ಅದು ನಿಧಾನವಾಗಿ ಜರುಗುವ ಸ್ಥಿತ್ಯಂತರ. ಮನಸುಗಳ ಬದಲಾವಣೆ, ನಡವಳಿಕೆಗಳ ರೂಪಾಂತರ. ಮೊದಲಿನದರ ಪ್ರಭಾವ ಕುಂದುತ್ತ ಕುಂದುತ್ತ ಮತ್ತೊಂದು ನಿಧಾನವಾಗಿ ಆಕ್ರಮಿಸುತ್ತ ಕೊನೆಗೆ ‘ಹಿಂದೆ ಹೀಗಿತ್ತು’ ಎಂಬುದನ್ನು ನಂಬಲೂ ಸಾಧ್ಯವಾಗದಷ್ಟು ಆಗುವ ಬದಲಾವಣೆ. ಕಾಲವೆಂದರೆ ಲೇಖಕರೇ ಹೇಳುವಂತೆ ಜೀವವಿರುವ ಎಲ್ಲರ, ಎಲ್ಲದರ ಮೇಲೂ ಪ್ರಭಾವಿಸುವ ಅಮೂರ್ತ ಪರಿಕಲ್ಪನೆ.
‘ಯುಗಾಂತರ’ ಅಂಥದೊಂದು ಬದಲಾವಣೆಯನ್ನು ಹೇಳುತ್ತ ಸಾಗುವ ಕಾದಂಬರಿ. ಕಲಿಯುಗ ಮತ್ತು ದ್ವಾಪರ ಯುಗಗಳ ಕಾಲಬದಲಾವಣೆ ಇದರ ಕಥಾವಸ್ತು. ಇದು ಮಹಾಭಾರತವೆಂಬ ಪುರಾಣದ ಕತೆಯೇ ಎಂದೆನಿಸಿದರೂ ನಾವಿರುವ ಕಲಿ ಕಾಲದ ಆರಂಭದ ದಿನಗಳನ್ನು ದಾಖಲಿಸುತ್ತದೆ. ಕಳೆದ ನೂರಾರು ವರ್ಷಗಳಲ್ಲಿ ಮಹಾಭಾರತ ಪೌರಾಣಿಕ ಕಲ್ಪನೆ ಎಂಬ ಅಭಿಪ್ರಾಯ ಕ್ಷೀಣಿಸುತ್ತ ಮಹಾಭಾರತ ಯುದ್ದ ವಾಸ್ತವ ಮತ್ತು ಅಲ್ಲಿ ಬರುವ ಕೃಷ್ಣ, ಯುದಿಷ್ಠಿರ ಇವರೆಲ್ಲ ಚಾರಿತ್ರಿಕ ವ್ಯಕ್ತಿಗಳು ಎಂಬ ಅಭಿಪ್ರಾಯ ಬಲವಾಗಿದೆ. ಕಾಲದ ವಿಷಯದಲ್ಲಿ ವಿದ್ವಾಂಸರಲ್ಲಿ ಒಮ್ಮತವಿಲ್ಲ ಅಷ್ಟೇ. ಆದ್ದರಿಂದ ಮಹಾಭಾರತದ ಕಥನ ಈ ನಾಡಿನ ಚರಿತ್ರೆಯೇ ಎನ್ನಬಹುದು.
ಕೃತಿ: ಯುಗಾಂತರ ಐತಿಹಾಸಿಕ ಕಾದಂಬರಿ ಲೇಖಕರು: ಶ್ರೀಧರ ಡಿ.ಎಸ್. ಪುಟಗಳು: 258 ಬೆಲೆ: 299 ರೂ. ಪ್ರಕಾಶಕರು: ಅಯೋಧ್ಯಾ ಪಬ್ಲಿಕೇಷನ್ಸ್ ಬೆಂಗಳೂರು ಸಂಪರ್ಕ ಸಂಖ್ಯೆ: 96209-16996
ನಾವಿರುವ ಕಾಲ ಸತ್ಯವೆಂದಾದರೆ ಅದು ಆರಂಭವಾದುದೂ, ಅದರ ಹಿಂದೊಂದು ಕಾಲವಿತ್ತೆಂಬುದೂ ನಂಬಲರ್ಹವೇ. ಆ ಕಾಲದಿಂದ ಈ ಕಾಲಕ್ಕೆ ಪರಿವರ್ತನೆ ಗೊಂಡ ಕಾಲದ ಕಥೆ ಇದು. ಹೀಗಾಗಿ ಇದು ಇತಿಹಾಸ ಕೂಡ. ಚಿತ್ರಿಸಿದ ರೀತಿಯೂ ಹಾಗಿದೆ. ಅದೇ ಕಾರಣಕ್ಕೆ ಇದು ಐತಿಹಾಸಿಕ ಕಾದಂಬರಿ. ದ್ವಾಪರ ಮುಗಿಯುತ್ತಿರುವಾಗ ಕಲಿಯು ಪ್ರವೇಶಿಸುತ್ತಿದ್ದಂತೆ ದ್ವಾರಕಾ ನಗರದ ಜನಜೀವನ ಉದ್ವಸ್ಥಗೊಳ್ಳುವುದರಿಂದಲೇ ಈ ಕಾದಂಬರಿ ತೊಡಗುತ್ತದೆ. ಮುಂದೆ ಕಲಿ-ದ್ವಾಪರ ಯುಗಗಳ ಸ್ಥಿತ್ಯಂತರದಲ್ಲಿ ಉಂಟಾದ ಸಂಘರ್ಷಗಳ ಮೇಲೆ ಬೆಳಕು ಬೀರುತ್ತ ಸಾಗುತ್ತದೆ. ಸಮರ್ಥ ಆಡಳಿತಗಾರನಿಗೆ ಸಮರ್ಥ ಸಲಹೆಗಾರನ ಸಹಾಯವಿದ್ದರೆ ಕಲಿಯನ್ನೂ ನಿಯಂತ್ರಿಸಬಹುದು ಎಂಬುದು ಇಡೀ ಕಾದಂಬರಿಯ ಹೂರಣ. ಪುರಾಣ ಲೋಕದಲ್ಲಿ ಒಮ್ಮೆ ಮಾತ್ರ ಘಟಿಸಿದ ಸಶರೀರ ಸ್ವರ್ಗಾರೋಹಣದ ಚಿತ್ರಣ ಮನೋಜ್ಞವಾಗಿ ವರ್ಣಿತವಾಗಿದೆ ಎಂದು ಪುಸ್ತಕದ ಬೆನ್ನುಡಿಯಲ್ಲಿ ಹೇಳಿರುವುದು ಅಕ್ಷರಶಃ ನಿಜ. ಅದು ಮಾತ್ರವಲ್ಲ ಇಡೀ ಕಾದಂಬರಿ ಎಲ್ಲಿಯೂ ಸರಾಗ ಓದಿಗೆ ತೊಡಕಾಗುವುದಿಲ್ಲ.
ಬದಲಿಗೆ ಓದುಗನನ್ನು ತಾನೇ ಕೈ ಹಿಡಿದು ಕಥನದೊಳಕ್ಕೆ ಸೆಳೆಯುತ್ತದೆ. ನಮ್ಮ ಪುರಾಣ ಲೋಕ ಬಹು ವಿಸ್ತಾರವಾದುದು. ಮತ್ತೆ ಮತ್ತೆ ಮಥನಗೊಳ್ಳುತ್ತ ನವನೀತವನ್ನು ಕೊಡುತ್ತಲೇ ಇರುವಷ್ಟು ಸಮೃದ್ಧವಾದುದು. ಆ ಕಾರಣದಿಂದಲೇ ನಮ್ಮ ರಾಮಾಯಣ, ಮಹಾಭಾರತ, ಭಾಗವತ ಇವೆಲ್ಲ ವಿವಿಧ ಪ್ರಕಾರಗಳಲ್ಲಿ ಮರುಹುಟ್ಟು ಪಡೆಯುತ್ತಲೇ ಬಂದಿವೆ. ಬದುಕಿನ ಮೌಲ್ಯಗಳನ್ನು ಹೇಳುತ್ತಲೇ ಇವೆ. ಅಂಥ ಮೌಲ್ಯಗಳನ್ನು, ಕಥನವನ್ನು ಕಟ್ಟುತ್ತಲೇ ಇಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನದ ಭಾಗವಾಗಿಯೂ ಇಷ್ಟವಾಗುವ ಕೃತಿ ಇದು. ‘ಯುಗ ಯಾವುದೂ ಇರಬಹುದು ಕೈಗೊಂಡ ಕ್ರಿಯೆಯನ್ನು ಅನುಸರಿಸಿಯೇ ಫಲ ದೊರೆಯುತ್ತದೆ. ಕಲಿಯುಗವೆಂದು ಹಾಲು ವಿಷವಾಗದು. ಹಾವು ಅಮೃತವಾಗದು. ಶುಭದ ನಿರೀಕ್ಷೆಯನ್ನು ಬಯಸುತ್ತೀರೋ ಧರ್ಮದಿಂದ ನಡೆಯಿರಿ.
ಅರ್ಥಕಾಮಗಳು ಧರ್ಮದಿಂದಲೇ ಸಿದ್ಧಿಯಾಗುತ್ತವೆ. ಯಾವುದೇ ಯುಗವಿರಲಿ, ಹೀಗೇ ಇರುವುದು, ಇರಲಿರುವುದು, ಇರುತ್ತದೆ...’ ಎಂಬ ಕೊನೆಯ ವಾಕ್ಯ ಕಾದಂಬರಿಯ ಸಂದೇಶದಂತಿದೆ. ವಿದ್ವಾಂಸರಾಗಿ, ಯಕ್ಷಗಾನ ಅರ್ಥಧಾರಿ, ಪ್ರಸಂಗಕರ್ತರಾಗಿ, ಸಾಹಿತಿಯಾಗಿ ಹೆಸರು ಮಾಡಿರುವ ಶ್ರೀಧರ ಡಿ. ಎಸ್. ಅವರ ಈ ‘ಯುಗಾಂತರ’ ಪುರಾಣದ ಮರು ಓದಿನ ಅನುಭವವನ್ನೂ ಕಾದಂಬರಿ ಓದಿನ ಸುಖವನ್ನೂ ಇತಿಹಾಸದ ಗುಟ್ಟುಗಳನ್ನೂ ಒಟ್ಟೊಟ್ಟಾಗಿ ನೀಡುವ ವಿಶಿಷ್ಟ ಗುಣ ಹೊಂದಿದೆ.