Delhi Earthquake: ಇಂದು ಬೆಳ್ಳಂಬೆಳಗ್ಗೆಯೇ ದೆಹಲಿ-ಎನ್‌ಸಿಆರ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಭಾರೀ ಶಬ್ಬಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಬೆಳಗ್ಗೆ 5:36ರ ಸುಮಾರಿಗೆ 5 ಕಿಲೋಮೀಟರ್ ಆಳದಲ್ಲಿ 4 ತೀವ್ರತೆಯ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ಹಂಚಿಕೊಂಡಿದೆ. ದೆಹಲಿ, ನೋಯ್ಡಾ, ಇಂದಿರಾಪುರಂ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಭೂಕಂಪನ ಉಂಟಾಗಿದೆ. ಕಂಪನವು, 28.59 ಉತ್ತರ ಅಕ್ಷಾಂಶ ಮತ್ತು 77.16 ಪೂರ್ವ ರೇಖಾಂಶದಲ್ಲಿತ್ತು ಎಂದು ಎನ್‌ಸಿಎಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ಬಿರು ಬೇಸಿಗೆಯಲ್ಲಿ ನೆಲ್ಲಿಕಾಯಿ ಸೇವಿಸಿ, ಈ ಅದ್ಭುತ ಪ್ರಯೋಜನ ಪಡೆಯಿರಿ; ಇಲ್ಲಿದೆ ಉಪಯುಕ್ತ ಮಾಹಿತಿ | Amla
ಪ್ರಬಲ ಭೂಕಂಪನದ ಬೆನ್ನಲ್ಲೇ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, "ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ. ಜನರು ಶಾಂತವಾಗಿರಿ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ. ಭೂಕಂಪನದಿಂದ ಎಚ್ಚರದಿಂದಿರಿ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ" ಎಂದು ರಾಜ್ಯದ ಜನತೆಗೆ ಧೈರ್ಯ ತುಂಬಿದರು.
ಕೆಲವು ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ್ದೇ ತಡ ನಿದ್ರೆಯಲ್ಲಿದ್ದ ಜನರು ಏಕಾಏಕಿ ಗಾಬರಿಗೊಂಡು ಮನೆಯಿಂದ ಓಡಿ ಹೊರಬಂದಿದ್ದಾರೆ. ಭೂಕಂಪನದ ಶಬ್ದಕ್ಕೆ ನಡುಗಿದ ದೆಹಲಿ ಜನತೆ, ಘಟನೆಯ ದೃಶ್ಯಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭೂಕಂಪನ ಸಂಭವಿಸಿದ ಸಮಯದಲ್ಲಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕ ಮಾತನಾಡಿ, "ಈ ರೀತಿ ಹಿಂದೆಂದೂ ಆಗಿರಲಿಲ್ಲ. ಬಹಳ ಕೆಟ್ಟ ಅನುಭವ. ನನ್ನಂತೆ ಇತರೆ ಪ್ರಯಾಣಿಕರು ಕಾದು ಕುಳಿತಿದ್ದರು. ಆದರೆ, ಶಬ್ದ ಕೇಳಿದ ತಕ್ಷಣವೇ ಎಲ್ಲರೂ ಓಡೋಡಿ ಬಂದರು. ಆ ಶಬ್ದಕ್ಕೆ ಯಾವುದೋ ಸೇತುವೆ ಕುಸಿದುಬಿತ್ತೇನೋ ಎಂದು ಭಾವಿಸಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).