netflix 
ನ್ಯೂಸ್

ಸಾಲು ಸಾಲು ವೆಬ್​ಸಿರೀಸ್​ ಮತ್ತು ಸಿನಿಮಾಗಳನ್ನು ಘೋಷಣೆ ಮಾಡಿದ ನೆಟ್​ಫ್ಲಿಕ್ಸ್ ಇಂಡಿಯಾ

ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಸ್ಥಗಿತಗೊಂಡಿದೆ. ಚಿತ್ರೀಕರಣ ಶುರುವಾದರೂ, ಬಿಡುಗಡೆಗೆ ಮಾತ್ರ ಸರ್ಕಾರ ಅನುಮತಿ ನೀಡಿಲ್ಲ. ಹೀಗಿರುವಾಗಲೇ ಓಟಿಟಿ ವೇದಿಕೆಗೆ ಹೆಚ್ಚಿನ ಡಿಮಾಂಡ್ ಸೃಷ್ಟಿಯಾಗಿದ್ದು, ಚಿತ್ರ ನಿರ್ಮಾಪಕರು ಓಟಿಟಿಯಲ್ಲಿಯೇ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಬಾಲಿವುಡ್​ನ ಸ್ಟಾರ್ ಕಲಾವಿದರ ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿವೆ. ಇತ್ತೀಚೆಗಷ್ಟೇ ಡಿಸ್ನಿ ಹಾಟ್​ಸ್ಟಾರ್ ಸಾಲು ಸಾಲು ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಇದೀಗ ನೆಟ್​ಫ್ಲಿಕ್ಸ್ ಒಟ್ಟು 17 ಸಿನಿಮಾ, ವೆಬ್​ ಸರಣಿಗಳನ್ನು ರಿಲೀಸ್​ ಮಾಡುವ ಬಗ್ಗೆ ಹೇಳಿಕೊಂಡಿದೆ.

ಗುಂಜನ್​ ಸಕ್ಸೆನಾ; ಎ ಕಾರ್ಗಿಲ್​ ಗರ್ಲ್​, ಡೋಲಿ ಕಿಟ್ಟಿ ಔರ್ ಚಮಕ್ತೆ ಸಿತಾರೆ, ತೋರ್​ಬಾಜ್​, ಕ್ಲಾಸ್​ ಆಫ್​ 83, ತ್ರಿಭಂಗಾ ಸೇರಿ ಒಟ್ಟು 12 ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಇದರ ಜತೆಗೆ ಐದು ಡ್ರಾಮಾ ಸೀರೀಸ್‌ಗಳು ಬಿತ್ತರವಾಗಲಿದ್ದು, ಇತ್ತೀಚೆಗಷ್ಟೇ ಟ್ರೇಲರ್​ ಮೂಲಕವೇ ಗಮನ ಸೆಳೆದ ಟಬು ಮತ್ತು ಇಶಾನ್ ಖಟ್ಟರ್ ನಟನೆಯ 'ಎ ಸೂಟಬಲ್ ಬಾಯ್', 'ಮಸಬಾ ಮಸಬಾ', 'ಬಾಂಬೆ ಬೇಗಮ್ಸ್​' ಮತ್ತು 'ಮಿಸ್ ಮ್ಯಾಚ್ಡ್' ಸಹ ಸೇರಿವೆ.

ಇನ್ನು ಅಕ್ಷಯ್​ ಕುಮಾರ್ ನಟನೆಯ ಲಕ್ಷ್ಮೀ ಬಾಂಬ್​, ಆಲಿಯಾ ಭಟ್ ಮುಖ್ಯಭೂಮಿಕೆ ನಿಭಾಯಿಸಿರುವ ಸಡಕ್2 ಮತ್ತು ಸುಶಾಂತ್​ ಸಿಂಗ್​ ನಟನೆಯ ದಿಲ್​ ಬೇಚಾರಾ ಸಿನಿಮಾಗಳು ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಬಿಡುಗಡೆ ಆಗಲಿವೆ. ಇತ್ತ ಅಮೆಜಾನ್​ ಪ್ರೈಂನಲ್ಲಿ ಅಭಿಷೇಕ್​ ಬಚ್ಚನ್​ ನಟನೆಯ ಚೊಚ್ಚಲ ಬ್ರೀಥ್​ ವೆಬ್ ಸಿರೀಸ್ ಸಹ ತೆರೆಕಂಡಿತ್ತು. ಇದೀಗ ನೆಟ್​ಫ್ಲಿಕ್ಸ್ ಸಿನಿಮಾ ಪಟ್ಟಿಯನ್ನು ಹೊರಗೆಡವಿದ್ದು, ಶೀಘ್ರದಲ್ಲಿ ಅವುಗಳ ಬಿಡುಗಡೆ ದಿನಾಂಕವನ್ನೂ ಘೋಷಿಸಲಿದೆ. (ಏಜೆನ್ಸೀಸ್​)​ ​