ನ್ಯೂಸ್

ಭೂಕಂಪ ಏಕೆ ಸಂಭವಿಸುತ್ತದೆ? ಕಾರಣಗಳೇನು? ರಕ್ಷಿಸಿಕೊಳ್ಳುವುದು ಹೇಗೆ? ಇಲ್ಲಿದೆ ಕಂಪ್ಲೀಟ್​ ಮಾಹಿತಿ…

ಕಾಠ್ಮಂಡು: ಪರ್ವತಗಳ ನಾಡು ನೇಪಾಳದಲ್ಲಿ ಶುಕ್ರವಾರ ಮಧ್ಯರಾತ್ರಿ 6.4 ತೀವ್ರತೆಯಲ್ಲಿ ಸಂಭವಿಸಿದ ಭೂಕಂಪನದಲ್ಲಿ ಮೃತಪಟ್ಟರ ಸಂಖ್ಯೆ 128ಕ್ಕೆ ಏರಿದೆ. ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಈ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ನೇಪಾಳ ಸರ್ಕಾರ ಘೋಷಣೆ ಮಾಡಿದೆ.

ನೇಪಾಳದಲ್ಲಿ ಪದೇಪದೆ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ಒಂದೇ ವರ್ಷದಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದೆ. ಈ ಭೂಕಂಪ ಏಕೆ ಸಂಭವಿಸುತ್ತದೆ? ಅದಕ್ಕೆ ಕಾರಣಗಳೇನು? ಭೂಕಂಪನದಿಂದ ರಕ್ಷಣೆ ಮಾಡಿಕೊಳ್ಳುವುದು ಹೇಗೆ? ನೇಪಾಳದಲ್ಲಿ ಯಾಕೆ ಹೆಚ್ಚು ಭೂಕಂಪಗಳಾಗುತ್ತವೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ನಾವೀಗ ಉತ್ತರ ಕಂಡುಕೊಳ್ಳೋಣ.

ಭೂಕಂಪ ಏಕೆ ಸಂಭವಿಸುತ್ತದೆ?

ವಾಸ್ತವವಾಗಿ ನಮ್ಮ ಭೂಮಿಯು ನಾಲ್ಕು ಪದರಗಳಿಂದ ಮಾಡಲ್ಪಟ್ಟಿದೆ. ಅವುಗಳನ್ನು ಒಳಪದರ, ಹೊರ ಪದರ, ಮ್ಯಾಂಟಲ್​ (ಭೂಮಿಯ ಹೊದಿಕೆಯು ಭೂಮಿಯ ಒಳಭಾಗದ ಬಹುಪಾಲು ಘನ ಭಾಗವಾಗಿದೆ) ಮತ್ತು ಕ್ರಸ್ಟ್​ (ಗ್ರಹದ ಹೊರಗಿನ ಘನ ಭಾಗ) ಎಂದು ಕರೆಯಲಾಗುತ್ತದೆ. ಕ್ರಸ್ಟ್​​ ಮತ್ತು ಮ್ಯಾಂಟಲ್​ ಮೇಲ್ಭಾಗವನ್ನು ಲಿಥೋಸ್ಪಿಯರ್ (ಭೂಮಿಯ ಬಂಡೆಗಳು ಮತ್ತು ಖನಿಜಗಳ ಗಟ್ಟಿಯಾದ ಹೊರಗಿನ ಪದರವಾಗಿದೆ)​ ಎಂದು ಕರೆಯುತ್ತಾರೆ. ಇವು 50 ಕಿ.ಮೀ ದಪ್ಪ ಪದರವಾಗಿದ್ದು, ಇವುಗಳನ್ನು ಟೆಕ್ಟೋನಿಕ್​ ಪ್ಲೇಟ್ಸ್​ ಎಂದು ಕರೆಯಲಾಗುತ್ತದೆ. ಈ ಟೆಕ್ಟೋನಿಕ್​ ಪ್ಲೇಟ್ಸ್ ತಮ್ಮ ಸ್ಥಾನದಿಂದ​ ಸದಾ ಚಲಿಸುತ್ತಿರುತ್ತದೆ, ಸುತ್ತುತ್ತಿರುತ್ತದೆ ಮತ್ತು ಜಾರುತ್ತಿರುತ್ತದೆ.

ಈ ಪ್ಲೇಟ್​ಗಳು ಪ್ರತಿ ವರ್ಷ ತಮ್ಮ ಸ್ಥಾನದಿಂದ ಸುಮಾರು 4 ರಿಂದ 5 ಮಿಲಿ ಮೀಟರ್​ ಸ್ಥಳಾಂತರವಾಗುತ್ತದೆ. ಅಡ್ಡಲಾಗಿ ಮತ್ತು ಲಂಭವಾಗಿ ಚಲಿಸಬಲ್ಲದು. ಈ ಅನುಕ್ರಮದಲ್ಲಿ ಕೆಲವೊಮ್ಮೆ ಒಂದು ಪ್ಲೇಟ್ ಇನ್ನೊಂದು ಪ್ಲೇಟ್​ ಹತ್ತಿರ ಚಲಿಸುತ್ತದೆ ಮತ್ತು ಕೆಲವೊಮ್ಮೆ ಅದು ದೂರವೂ ಸಾಗುತ್ತದೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ಪ್ಲೇಟ್​ಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಾತ್ರ ಭೂಕಂಪ ಸಂಭವಿಸುತ್ತದೆ ಮತ್ತು ಭೂಮಿ ನಡುಗುತ್ತದೆ. ಈ ಪ್ಲೇಟ್​ಗಳು ಭೂ ಮೇಲ್ಮೈನಿಂದ ಸುಮಾರು 30 ರಿಂದ 50 ಕಿ.ಮೀ ಆಳದಲ್ಲಿರುತ್ತವೆ.

ರಕ್ಷಣೆ ಮಾಡಿಕೊಳ್ಳುವುದು ಹೇಗೆ?

ಒಂದು ವೇಳೆ ದಿಢೀರ್​ ಭೂಕಂಪ ಸಂಭವಿಸಿದಾಗ ತಕ್ಷಣ ಮನೆಯಿಂದ ಹೊರಗೆ ಓಡಿ ಬರಬೇಕು. ಒಂದು ವೇಳೆ ನೀವು ಮನೆಯೊಳಗೆ ಸಿಲುಕಿದರೆ, ಹಾಸಿಗೆ ಅಥವಾ ಗಟ್ಟಿಮುಟ್ಟಾದ ಮೇಜಿನ ಕೆಳಗೆ ಮರೆಮಾಡಿಕೊಳ್ಳಬೇಕು. ಮನೆಯ ಮೂಲೆಗಳಲ್ಲಿ ನಿಂತುಕೊಳ್ಳುವ ಮೂಲಕ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಭೂಕಂಪನದ ಸಮಯದಲ್ಲಿ ಯಾವುದೇ ಕಾರಣಕ್ಕೂ ಲಿಫ್ಟ್​ ಬಳಸಲೇಬಾರದು. ತೆರೆದ ಪ್ರದೇಶಗಳಲ್ಲಿ ಹೋಗಬೇಕು. ಮರಗಳು ಮತ್ತು ವಿದ್ಯುತ್​ ಕಂಬಗಳು ಅಥವಾ ತಂತಿಗಳಿಂದ ದೂರ ನಿಲ್ಲಬೇಕು. ಇವುಗಳ ಹೊರತಾಗಿ ಭೂಕಂಪ ನಿರೋಧಕ ಮನೆಗಳು ಕೂಡ ಅಷ್ಟೇ ಮುಖ್ಯ. ಇದು ತುಂಬಾ ದುಬಾರಿ ಅಲ್ಲದಿದ್ದರೂ, ಅದರ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿಂದಾಗಿ, ಜನರು ಇದನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ.

ನೇಪಾಳದಲ್ಲಿ ಏಕೆ ಹೆಚ್ಚು ಭೂಕಂಪಗಳು ಸಂಭವಿಸುತ್ತವೆ?

ನೇಪಾಳದ ಭೂಮಿ ಆಗಾಗ ನಡುಗುತ್ತದೆ. ಕಳೆದ ತಿಂಗಳು, ಅಕ್ಟೋಬರ್ 22 ರಂದು ಧಾಡಿಂಗ್ ಜಿಲ್ಲೆಯಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ, ಇದನ್ನು ಹೊರತುಪಡಿಸಿ, ಅಕ್ಟೋಬರ್ 16 ರಂದು ನೇಪಾಳದ ಸುದುರ್ಪಶ್ಚಿಮ್ ಪ್ರಾಂತ್ಯದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. 2015 ರಲ್ಲಿ, 7.8 ತೀವ್ರತೆಯ ಭೂಕಂಪ ಮತ್ತು ಅದರ ನಂತರದ ಆಘಾತಗಳಿಂದ ಸುಮಾರು 9,000 ಜನರು ಸಾವನ್ನಪ್ಪಿದರು. ನೇಪಾಳದಲ್ಲಿ ಮತ್ತೆ ಮತ್ತೆ ಭೂಕಂಪಗಳು ಏಕೆ ಸಂಭವಿಸುತ್ತವೆ? ಎಂದು ನೋಡುವುದಾದರೆ ವಾಸ್ತವವಾಗಿ, ನೇಪಾಳವು ಭಾರತೀಯ ಮತ್ತು ಟಿಬೆಟಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ನಡುವೆ ಇದೆ. ಈ ಟೆಕ್ಟೋನಿಕ್ ಪ್ಲೇಟ್‌ಗಳು ಪ್ರತಿ 100 ವರ್ಷಗಳಿಗೊಮ್ಮೆ ಎರಡು ಮೀಟರ್‌ಗಳವರೆಗೆ ಚಲಿಸುತ್ತವೆ. ಇದರಿಂದಾಗಿ ಭೂಮಿಯಲ್ಲಿ ಒತ್ತಡ ಉಂಟಾಗುತ್ತದೆ ಮತ್ತು ಭೂಕಂಪಗಳು ಸಂಭವಿಸುತ್ತವೆ. ನೇಪಾಳ ಸರ್ಕಾರದ ವಿಪತ್ತು ಮೌಲ್ಯಮಾಪನ ವರದಿ (PDNA) ಪ್ರಕಾರ, ನೇಪಾಳವು ವಿಶ್ವದ 11 ನೇ ಅತಿ ಹೆಚ್ಚು ಭೂಕಂಪ ಪೀಡಿತ ರಾಷ್ಟ್ರವಾಗಿದೆ.

ಜಾಜರ್​ಕೋಟ್​ ಭೂಕಂಪದ ಕೇಂದ್ರ ಬಿಂದು

ನೇಪಾಳದ ಭೂಕಂಪನ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್)ದ ಪ್ರಕಾರ ಶುಕ್ರವಾರ (ನ.03) ರಾತ್ರಿ 11.32 ಕ್ಕೆ 10 ಕಿಮೀ ಆಳದಲ್ಲಿ ಕಂಪನ ಸಂಭವಿಸಿದ್ದು, ನೇಪಾಳದ ಜಾಜರ್​ಕೋಟ್​ ಜಿಲ್ಲೆಯ ಲಾಮಿದಾಂದಾ ಏರಿಯಾವನ್ನು ಭೂಕಂಪನದ ಕೇಂದ್ರ ಬಿಂದು ಗುರುತಿಸಲಾಗಿದೆ.

500 ಕಿ.ಮೀ ವರೆಗೂ ಕಂಪನ

ಭೂಮಿಯ ಕಂಪನವು ಕೇಂದ್ರ ಬಿಂದುವಿನಿಂದ ಸುಮಾರು 500 ಕಿ.ಮೀ ದೂರದಲ್ಲಿರುವ ದೆಹಲಿಯನ್ನೂ ಸಹ ತಲುಪಿದೆ. ಅಲ್ಲದೆ, ದೆಹಲಿ-ಎನ್​ಸಿಆರ್​ ವಲಯ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿದೆ. ರಾತ್ರಿ ಮಲಗಿದ್ದ ಮಂದಿ ಭೂಮಿ ನಡುಗಿದ ಸದ್ದು ಕೇಳಿ ಭಯಭೀತರಾಗಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.

ಪ್ರಧಾನಿ ಸಂತಾಪ

ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅಲಿಯಾಸ್​ ಪ್ರಚಂಡ ಅವರು ಭೂಕಂಪನದಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ. ಶುಕ್ರವಾರ ರಾತ್ರಿ 11.47 ಕ್ಕೆ ಜಾಜರಕೋಟ್‌ನ ರಾಮಿದಂಡಾದಲ್ಲಿ ಸಂಭವಿಸಿದ ಭೂಕಂಪನದಿಂದ ಉಂಟಾದ ಜೀವ ಮತ್ತು ಆಸ್ತಿ ಹಾನಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ತಕ್ಷಣದ ರಕ್ಷಣೆ ಹಾಗೂ ಪರಿಹಾರಕ್ಕಾಗಿ ಎಲ್ಲ 3 ಭದ್ರತಾ ಏಜೆನ್ಸಿಗಳನ್ನು ಸಜ್ಜುಗೊಳಿಸಿದ್ದಾರೆ ಎಂದು ನೇಪಾಳ ಪ್ರಧಾನಿ ಕಚೇರಿ ಎಕ್ಸ್​ (ಈ ಹಿಂದೆ ಟ್ವಿಟರ್​) ಮೂಲಕ ತಿಳಿಸಿದೆ.

ನೇಪಾಳದಲ್ಲಿ, ಆಂಬ್ಯುಲೆನ್ಸ್‌ಗಳು ಜನರಿಗೆ ಚಿಕಿತ್ಸೆ ನೀಡಲು ಧಾವಿಸುತ್ತಿರುವ ದೃಶ್ಯಗಳು ಮತ್ತು ಭೂಕಂಪದಿಂದ ಜನರು ಗಾಯಗೊಂಡಿರುವುದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಭೂಕಂಪದ ಕೇಂದ್ರಬಿಂದುವಾಗಿರುವ ಜಾಜರ್‌ಕೋಟ್‌ನಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ತಡರಾತ್ರಿಯಲ್ಲಿ ಆಂಬ್ಯುಲೆನ್ಸ್ ಆಗಮಿಸುತ್ತಿರುವುದನ್ನು ವಿಡಿಯೋ ತೋರಿಸಿದೆ. ಭೂಕಂಪದ ಪರಿಣಾಮ ಮನೆಗಳ ಗೋಡೆಗಳು ಬಿರುಕು ಬಿಟ್ಟಿರುವುದನ್ನು ಅನೇಕ ಚಿತ್ರಗಳು ತೋರಿಸಿದ್ದು, ಸಾಕಷ್ಟು ಆಸ್ತಿಪಾಸ್ತಿಗೆ ಹಾನಿಯಾಗಿದೆ. ಭೂಮಿ ನಡುಗಿದ ಪರಿಗೆ ಮನೆಯೊಳಗೆ ಇದ್ದ ಮಂದಿ ಭಯಭೀತರಾಗಿ ಹೊರಗಟೆ ಓಡೋಡಿ ಬಂದು ಕಿರುಚಾಡಿದ್ದು, ಭೂಕಂಪನಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. (ಏಜೆನ್ಸೀಸ್​)