ಬೆಂಗಳೂರು: ರಾಜ್ಯದಲ್ಲಿ 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ 93 ಲಕ್ಷ ವಿದ್ಯಾರ್ಥಿಗಳ ಪೈಕಿ 31 ಲಕ್ಷ ವಿದ್ಯಾರ್ಥಿಗಳ ಬಳಿ ಸ್ಮಾಟ್ ಫೋನ್ ಇಲ್ಲವೇ ಇಲ್ಲ! ಇನ್ನೂ 8 ಲಕ್ಷ ವಿದ್ಯಾರ್ಥಿಗಳ ಮನೆಯಲ್ಲಿ ದೂರದರ್ಶನ ಮತ್ತು ರೇಡಿಯೋ ಇದೆರಡೂ ಇಲ್ಲ!
ಹೌದು. ಸಾರ್ವಜನಿಕ ಶಿಕ್ಷಣ ಇಲಾಖೆ ಜು.1ರಿಂದ ಆನ್‌ಲೈನ್ ತರಗತಿಗಳನ್ನು ಆರಂಭಿಸಿದೆ. ಆದರೆ, ಎಷ್ಟು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯ ಲಾಭ ಪಡೆಯಲು ಸಾಧ್ಯವಿದೆ ಎಂದು ಸಮೀಕ್ಷೆ ನಡೆಸಿದ್ದು, ಈ ಮಾಹಿತಿ ಬಹಿರಂಗವಾಗಿದೆ.
ರಾಜ್ಯದಲ್ಲಿ 1ರಿಂದ 10ನೇ ತರಗತಿಯಲ್ಲಿ 93,01,805 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ 79,33,029 ವಿದ್ಯಾರ್ಥಿಗಳ ಬಳಿ ಮೊಬೈಲ್ ಫೋನ್ ಇದೆ. 58,59,907 ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ ಇದೆ. ಆದರೆ, 31,27,524 ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್ ಇಲ್ಲ. ಇನ್ನೂ 51,34,386 ವಿದ್ಯಾರ್ಥಿಗಳ ಬಳಿ ಇಂಟರ್‌ನೆಟ್ ಇದ್ದರೂ, 37,79,965 ವಿದ್ಯಾರ್ಥಿಗಳ ಬಳಿ ಇಂಟರ್‌ನೆಟ್ ಇಲ್ಲ.
81,14,097 ವಿದ್ಯಾರ್ಥಿಗಳ ಮನೆಯಲ್ಲಿ ದೂರದರ್ಶನ ಹಾಗೂ 10,45,288 ವಿದ್ಯಾರ್ಥಿಗಳ ಮನೆಯಲ್ಲಿ ರೇಡಿಯೋ ಇದೆ. 8,65,259 ವಿದ್ಯಾರ್ಥಿಗಳ ಮನೆಯಲ್ಲಿ ಈ ಎರಡೂ ಸೌಲಭ್ಯಗಳಿಲ್ಲ. ಇನ್ನೂ ಇ-ಮೇಲ್ ಸಂಪರ್ಕದಲ್ಲಿರುವ ಸಂಖ್ಯೆ ನೋಡಿದಾಗ 4,88,826 ವಿದ್ಯಾರ್ಥಿಗಳು ಮಾತ್ರವೇ ಇ-ಮೇಲ್ ಬಳಕೆ ಮಾಡುತ್ತಿದ್ದಾರೆ.
ಸ್ಮಾರ್ಟ್ ಫೋನ್ ಚಿಂತನೆ:
ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳ ಬಳಿ ಸ್ಮಾಟ್ ಫೋನ್ ಇದ್ದೇ ಇರುತ್ತದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಬಳಿ ಫೋನ್ ಇರುವುದೇ ಕಷ್ಟ. ಕರೊನಾ ವೇಳೆಯಲ್ಲಿ ಭೌತಿಕ ತರಗತಿಗಳು ಆರಂಭವಾಗದೆ ಇರುವುದರಿಂದ ಈ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಬೇಕೆಂದು ಇಲಾಖೆ ಆಲೋಚನೆ ಮಾಡುತ್ತದೆ. ಅಲ್ಲದೆ, ಸ್ಮಾರ್ಟ್ ಫೋನ್ ನೀಡಿ ಆ ಮೂಲಕ ಖಾಸಗಿ ಶಾಲೆಗಳಂತೆಯೇ ಆನ್‌ಲೈನ್ ಕ್ಲಾಸ್ ಮಾಡಲು ಚಿಂತಿಸಿದೆ. ಇದಕ್ಕಾಗಿ ಕೆಲವು ದಾನಿಗಳಿಂದ ಸ್ಮಾರ್ಟ್ ಫೋನ್‌ಗಳನ್ನು ದಾನವಾಗಿಯೂ ಪಡೆಯುತ್ತಿದೆ. ಸರ್ಕಾರದ ಹಂತದಲ್ಲೂ ಫೋನ್ ಖರೀದಿಸಲು ಚಿಂತಿಸಿದೆ.
ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯಿಂದ ಈ ಸಮೀಕ್ಷೆ ಮಾಡಿಸಿದೆ ಎಂದು ತಿಳಿದು ಬಂದಿದೆ.