ಬೆಂಗಳೂರು: ರಾಜ್ಯದ ಪದವಿಪೂರ್ವ ಶಿಕ್ಷಣ ಇಲಾಖೆಯು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳನ್ನು ಮಾತ್ರ ಅಳವಡಿಸಿಕೊಂಡಿರುವುದಾಗಿ ಪಿಯು ಇಲಾಖೆಯು ತಿಳಿಸಿದೆ.
ಆದರೆ, ಪ್ರಸ್ತುತ ವಿವಾದಕ್ಕೆ ಗುರಿಯಾಗಿರುವ ಎನ್ಸಿಇಆರ್ಟಿ 12ನೇ ತರಗತಿ ರಾಜ್ಯಶಾಸ್ತ್ರ ಪಠ್ಯದಲ್ಲಿ ಕಡಿತವಾಗಿರುವ ‘ಮಹಾತ್ಮ ಗಾಂಧಿ ಹತ್ಯೆ ಮತ್ತು ಆರ್ಎಸ್ಎಸ್ ನಿಷೇಧ ಕುರಿತ ವಿಷಯಗಳು’ ಹಾಗೂ 11ನೇ ತರಗತಿಯ ಸಮಾಜ ವಿಜ್ಞಾನದಲ್ಲಿನ ‘ಗುಜರಾತ್ ಗಲಭೆ’ಗೆ ಸಂಬಂಧಿಸಿದ ವಿಷಯಗಳು ರಾಜ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ.
ರಾಜ್ಯಶಾಸ್ತ್ರ ಮತ್ತು ಸಮಾಜವಿಜ್ಞಾನ ವಿಷಯಗಳು ಕಲಾ ವಿಭಾಗಕ್ಕೆ ಸೇರಲಿವೆ. ಕಲಾ ವಿಭಾಗದ ವಿಷಯಗಳನ್ನು ರಾಜ್ಯಪಠ್ಯಕ್ರಮದ ವಿಷಯಗಳನ್ನೇ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ, ವಿವಾದಿತ ಪಠ್ಯಗಳು ರಾಜ್ಯಕ್ಕೆ ಅನ್ವಯವಾಗುವುದಿಲ್ಲ ಎಂದು ಪಿಯು ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಅಳವಡಿಸಿಕೊಂಡಿರುವ ಪಠ್ಯ ವಿಷಯ: ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತ (ಪಿಸಿಎಂಬಿ) ವಿಷಯಗಳು ಹಾಗೂ ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಷಯ ಸೇರಿ 7 ವಿಷಯಗಳನ್ನು ಮಾತ್ರ ಎನ್ಸಿಇಆರ್ಟಿ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಪಿಯು ಇಲಾಖೆ ತಿಳಿಸಿದೆ. ರಾಜ್ಯದಲ್ಲಿ 2023-24ನೇ ಸಾಲಿಗೆ 12ನೇ ತರಗತಿ ಪಠ್ಯಪುಸ್ತಕದಲ್ಲಿ ಕೆಲ ಅಧ್ಯಾಯಗಳನ್ನು ಕಡಿತಗೊಳಿಸಿದೆ. ರಾಜ್ಯದಲ್ಲಿ ಅಳವಡಿಸಿಕೊಂಡಿರುವ ಎನ್ಸಿಇಆರ್ಟಿ ಪರಿಷ್ಕೃತ ಎಲ್ಲ ಪಠ್ಯವಸ್ತುವಿನಲ್ಲಿಯೂ ಸ್ವಲ್ಪ ಕಡಿತ ಮಾಡಲಾಗಿದೆ. ಪರಿಷ್ಕೃತ ಪಠ್ಯವಸ್ತುವನ್ನೇ ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಪಿಯು ಇಲಾಖೆ ನಿರ್ದೇಶಕಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.
ಒಂದು ವೇಳೆ ವಿದ್ಯಾರ್ಥಿಗಳು ಈಗಾಗಲೆ ಹಳೆಯ ಪುಸ್ತಕಗಳನ್ನು ಖರೀದಿಸಿದ್ದರೆ ಕಡಿತಗೊಳಿಸಿರುವ ಅಧ್ಯಾಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳ ಅಭ್ಯಾಸಕ್ಕೆ ಬಳಸಿಕೊಳ್ಳಬಹುದು. ಎನ್ಸಿಇಆರ್ಟಿ ಯಾವ್ಯಾವ ವಿಷಯದ ಪಠ್ಯದಲ್ಲಿ ಯಾವ್ಯಾವ ಅಧ್ಯಾಯ ಕಡಿತಗೊಳಿಸಿದೆ ಎಂಬುದನ್ನು ಇಲಾಖೆಯ ವೆಬ್ಸೈಟ್ ಟ್ಠಛಿ.kಚ್ಟ್ಞಠಿಚkಚ.ಜಟಡ.ಜ್ಞಿ ನಲ್ಲಿ ಪ್ರಕಟಿಸಿದ್ದು ವಿದ್ಯಾರ್ಥಿಗಳು ಪರಿಶೀಲಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಪಿಯುಸಿ ವಿಜ್ಞಾನ ವಿಭಾಗದ 4 ಹಾಗೂ ವಾಣಿಜ್ಯ ವಿಭಾಗದ 3 ವಿಷಯಗಳನ್ನು ಮಾತ್ರ ಎನ್ಸಿಇಆರ್ಟಿ ಪಠ್ಯಪುಸ್ತಕಗಳಾಗಿ ಅಳವಡಿಸಿಕೊಳ್ಳಲಾಗಿದೆ. ಈ ವಿಷಯಗಳಲ್ಲಿಯೂ ಸ್ವಲ್ಪ ಪಠ್ಯ ಕಡಿತವಾಗಿದೆ. ಪರಿಷ್ಕೃತ ಪಠ್ಯಪುಸ್ತಕಗಳನ್ನೇ ವಿದ್ಯಾರ್ಥಿಗಳು ಖರೀದಿಸಲಿ.
| ಸಿಂಧು ಬಿ. ರೂಪೇಶ್, ಪಿಯು ಇಲಾಖೆ ನಿರ್ದೇಶಕಿ