ರಾಯ್ಪುರ್: ಕಳೆದ ಭಾನುವಾರ ಚತ್ತೀಸ್ಗಢದ ಬಿಜಾಪುರ-ಸುಕ್ಮಾ ಅರಣ್ಯ ವಲಯದಲ್ಲಿ ನಡೆದಿದ್ದ ಭೀಕರ ನಕ್ಸಲ್ ಹತ್ಯಾಕಾಂಡದಲ್ಲಿ ಸಿಆರ್ಪಿಎಫ್ ಕೋಬ್ರಾ ಪಡೆಯ ಯೋಧನೊಬ್ಬ ಕಣ್ಮರೆಯಾಗಿದ್ದ. ಆತನನ್ನು ನಕ್ಸಲ್ರು ಅಪಹರಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಇದೀಗ ಕಣ್ಮರೆಯಾಗಿದ್ದ ಯೋಧನ ಫೋಟೊವನ್ನು ನಕ್ಸಲ್ರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ನಾಪತ್ತೆಯಾಗಿದ್ದ ರಾಕೇಶ್ವರ್ ಸಿಂಗ್ ಮನಹಾಸ್ ನನ್ನು ನಕ್ಸಲ್ರು ಅರಣ್ಯವೊಂದರಲ್ಲಿ ಒತ್ತೆಯಾಳನ್ನಾಗಿಟ್ಟುಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ. ನಿಷೇಧಿತ ನಕ್ಸಲ್ ಸಂಘಟನಯಾದ ದಂಡಕಾರಣ್ಯ ಸ್ಪೇಷಲ್ ಜೂನಲ್ ಕಮಿಟಿ ಈ ಚಿತ್ರವನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ರಾಕೇಶ್ವರ ಸಿಂಗ್ ಮನ್ಹಾಸ್ ಅವರು ನಕ್ಸಲ್ ತಾತ್ಕಾಲಿಕ ಟೆಂಟ್ ಒಂದರಲ್ಲಿ ಕುಳಿತುಕೊಂಡಿರುವುದು ತೋರುತ್ತದೆ.
ಯೋಧನನ್ನು ಒತ್ತೆಯಾಳಾಗಿಟ್ಟುಕೊಂಡಿರುವ ನಕ್ಸಲ್ರು ಬಂಧನಕ್ಕೊಳಗಾಗಿರುವ ತಮ್ಮವರನ್ನು ಬಿಡುಗಡೆ ಮಾಡಬೇಕು. ನಂತರವೇ ನಾವು ಯೋಧನನ್ನು ಬಿಡುಗಡೆ ಮಾಡಲಿದ್ದೇವೆ. ಅಲ್ಲಿಯವರೆಗೂ ಯೋಧ ನಮ್ಮ ಬಳಿ ಸುರಕ್ಷಿತವಾಗಿರುತ್ತಾನೆ ಎಂದು ದಂಡಕಾರಣ್ಯ ಸ್ಪೇಷಲ್ ಜೂನಲ್ ಕಮಿಟಿಯ ವಿಕಲ್ಪ್ ಎನ್ನುವ ನಾಯಕ ಹೇಳಿದ್ದಾನೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಶನಿವಾರ ಕೋಬ್ರಾ ಪಡೆ ಹಾಗೂ ನಕ್ಸಲ್ರ ನಡುವೆ ಬಿಜಾಪುರ-ಸುಕ್ಮಾ ಜಿಲ್ಲೆಯ ಗಡಿಯ ಅರಣ್ಯದಲ್ಲಿ ನಡೆದ ಭೀಕರ ಗುಂಡಿನ ಕಾಳಗದಲ್ಲಿ 22 ಯೋಧರು ಹುತಾತ್ಮರಾಗಿ 10 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ನಕ್ಸಲ್ರು ನಡೆಸಿದ್ದ ಅತಿ ದೊಡ್ಡ ದಾಳಿ ಇದಾಗಿತ್ತು.