ಭುವನೇಶ್ವರ್: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಒಡಿಶಾದ ಹಂಗಾಮಿ ಮುಖ್ಯಮಂತ್ರಿಯಾದ ನವೀನ್ ಪಟ್ನಾಯಕ್ ಅವರ ಆಪ್ತರಾಗಿರುವ ವಿ.ಕೆ. ಪಾಂಡಿಯನ್ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.
ಇತ್ತೀಚೆಗೆ ನಡೆದಿದ್ದ ಒಡಿಶಾ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾದಳ (ಬಿಜೆಡಿ) ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಅವರು ರಾಜಕೀಯಕ್ಕೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದ್ದಾರೆ.
ಎಕ್ಸ್‌ನಲ್ಲಿ ವಿಡಿಯೋ ಸಂದೇಶದಲ್ಲಿ ಹಂಚಿಕೊಂಡಿರುವ ಪಾಂಡಿಯನ್, ಈಗ ನಾನು ಪ್ರಜ್ಞಾಪೂರ್ವಕವಾಗಿ ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಈ ಪ್ರಯಾಣದಲ್ಲಿ ನಾನು ಯಾರಿಗಾದರೂ ನೋಯಿಸಿದ್ದರೆ ಕ್ಷಮಿಸಿ. ಬಿಜೆಡಿಯ ಸೋಲಿನಲ್ಲಿ ಪಾತ್ರವಿದೆ, ಹಾಗಾಗಿ ನಾನು ಪಕ್ಷದ ಕಾರ್ಯಕರ್ತರನ್ನು ಕ್ಷಮೆ ಕೋರುವೆ ಎಂದಿದ್ದಾರೆ.
ನಾನು ಲಕ್ಷ ಲಕ್ಷ ಬಿಜು ಪರಿವಾರದ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಾನು ಯಾವಾಗಲೂ ಒಡಿಶಾವನ್ನು ನನ್ನ ಹೃದಯದಲ್ಲಿ ಹಾಗೂ ನನ್ನ ಗುರು ನವೀನ್ ಬಾಬು ಅವರನ್ನು ನನ್ನ ಉಸಿರಿನಲ್ಲಿ ಇಟ್ಟುಕೊಳ್ಳುತ್ತೇನೆ. ಅವರ ಏಳಿಗೆಗಾಗಿ ನಾನು ಜಗನ್ನಾಥನನ್ನು ಪ್ರಾರ್ಥಿಸುತ್ತೇನೆ ಎಂದು ಪಾಡಿಯನ್ ವಿಡಿಯೋದಲ್ಲಿ ಹೇಳಿದ್ದಾರೆ.
ನವೀನ್ ಪಟ್ನಾಯಕ್ ಅವರ ಸಂಭಾವ್ಯ ಉತ್ತರಾಧಿಕಾರಿ ಎಂದೇ ಪಾಂಡಿಯನ್ ಅವರನ್ನು ಬಿಂಬಿಸಲಾಗಿತ್ತು. ಇದೀಗ ಚುನಾವಣೆಯಲ್ಲಿ ಬಿಜೆಡಿಯ ಹೀನಾಯ ಸೋಲಿನ ನಂತರ ಪಾಂಡಿಯನ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಡಿಯ ಆಘಾತಕಾರಿ ಸೋಲಿನ ನಂತರ ತೀವ್ರ ಟೀಕೆಗೆ ಗುರಿಯಾದರು. ಆದಾಗ್ಯೂ , ಪಾಂಡಿಯನ್ ಅವರ ಉತ್ತರಾಧಿಕಾರಿ ಅಲ್ಲ ಮತ್ತು ಅವರ ಉತ್ತರಾಧಿಕಾರಿ ಯಾರೆಂದು ಒಡಿಶಾದ ಜನರು ನಿರ್ಧರಿಸುತ್ತಾರೆ ಎಂದು ಪಟ್ನಾಯಕ್ ಶನಿವಾರ ಪುನರುಚ್ಚರಿಸಿದರು.
ವಿ.ಕೆ. ಪಾಂಡ್ಯನ್ ಅವರು ಒಡಿಶಾದ ಮಾಜಿ ಸಿಎಂ ನವೀನ್ ಪಾಟ್ನಾಯಕ್ ಅವರಿಗೆ ಬಲಗೈ ಬಂಟರಂತಿದ್ದವರು. ಸಾರ್ವಜನಿಕವಾಗಿ ಪಾಟ್ನಾಯಕ್ ಜೊತೆಯೇ ಅವರು ಸದಾ ಇರುತ್ತಿದ್ದರು. ಇತ್ತೀಚೆಗೆ ನವೀನ್ ಪಾಟ್ನಾಯಕ್ ಭಾಷಣ ಮಾಡುತ್ತಿರುವಾಗ ಅವರ ಕೈ ನಡುಗುತ್ತಿದ್ದುದು, ಅದನ್ನು ಸಾರ್ವಜನಿಕರಿಂದ ಮರೆ ಮಾಚಲು ಪಾಂಡ್ಯನ್ ಯತ್ನಿಸುತ್ತಿದ್ದುದು ಈ ದೃಶ್ಯ ಇರುವ ವಿಡಿಯೋವೊಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹೋಗಿತ್ತು. ನವೀನ್ ಪಾಟ್ನಾಯಕ್ ಅವರನ್ನು ಪಾಂಡ್ಯನ್ ನಿಯಂತ್ರಿಸುತ್ತಿದ್ದಾರೆ. ಅವರೇ ಮುಂದಿನ ಬಾರಿ ಸಿಎಂ ಆಗುತ್ತಾರೆ ಎನ್ನುವಂತಹ ಮೆಸೇಜ್ ಎಲ್ಲೆಡೆ ಶೇರ್ ಆಗಿತ್ತು.