

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾಂಗ್ರೆಸ್ ಹಿರಿಯ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಪಕ್ಷದ ನಾಯಕರು ಹಾಗೂ 'ಇಂಡಿಯಾ' ಮೈತ್ರಿಕೂಟ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಮೂಲಗಳ ಪ್ರಕಾರ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಅವರು ಖರ್ಗೆ ಅವರಿಗೆ ಶನಿವಾರ ರಾತ್ರಿ ಕರೆ ಮಾಡಿ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿತ್ತು. ಅಲ್ಲಿಯವರೆಗೆ ಇಂಡಿಯಾ ಮೈತ್ರಿಕೂಟದ ಯಾವುದೇ ನಾಯಕರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ಬಂದಿರಲಿಲ್ಲ.
ಆದರೆ, ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷ ಟಿಎಂಸಿ ಭಾಗವಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದರು.
ಮೋದಿ ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇಂದು ಸಂಜೆ 7:15ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ವಿದೇಶದ ಕೆಲವು ಅತಿಥಿಗಳ ಜೊತೆಗೆ ದೇಶದ ಹಲವು ಪ್ರಮುಖ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.