ಯೂಟ್ಯೂಬ್‌ನಲ್ಲಿ ಬರೋಬ್ಬರಿ 2.77 ಕೋಟಿ ಸಬ್‌ಸ್ಕ್ರೈಬರ್‌: ಹೆಂಡತಿಯನ್ನು ಎಲೆಕ್ಷನ್​ಗೆ ನಿಲ್ಲಿಸಿದ ಫಿಟ್‌ನೆಸ್ ಸ್ಟಾರ್​ಗೆ ಶಾಕ್​..! YouTuber Wife  
ದೇಶ

ಯೂಟ್ಯೂಬ್‌ನಲ್ಲಿ ಬರೋಬ್ಬರಿ 2.77 ಕೋಟಿ ಸಬ್‌ಸ್ಕ್ರೈಬರ್ಸ್​: ಹೆಂಡತಿಯನ್ನು ಎಲೆಕ್ಷನ್​ಗೆ ನಿಲ್ಲಿಸಿದ ಫಿಟ್‌ನೆಸ್ ಸ್ಟಾರ್​ಗೆ ಶಾಕ್​..! YouTuber Wife

ನವದೆಹಲಿ: ಸಾಮಾಜಿಕ ಜಾಲತಾಣಗಳ ವರ್ಚುವಲ್ ಪ್ರಪಂಚದಲ್ಲಿ ಕೋಟ್ಯಂತರ 'ಲೈಕ್ಸ್' ಮತ್ತು 'ಫಾಲೋವರ್ಸ್' ಹೊಂದಿರುವ ಜನಪ್ರಿಯ ವ್ಯಕ್ತಿಗಳಿಗೆ ನಿಜವಾದ ಚುನಾವಣಾ ಅಖಾಡದ ಮತಪೆಟ್ಟಿಗೆಯ ಮುಂದೆ ಅದೇ ಪ್ರೀತಿ ಸಿಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಕೋಟ್ಯಂತರ ಫಾಲೋವರ್ಸ್‌ಗಳನ್ನು ಹೊಂದಿದ್ದರೂ, ಸಾರ್ವಜನಿಕ ರಾಜಕೀಯ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಅಷ್ಟು ಸುಲಭವಲ್ಲ ಅನ್ನೋದಕ್ಕೆ ತಾಜಾ ಉದಾಹರಣೆಯೊಂದು ರಾಜಸ್ಥಾನದಲ್ಲಿ ವರದಿಯಾಗಿದೆ. ಯೂಟ್ಯೂಬ್‌ನಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ಪವನ್​ ಸಾಹು (Pawan Sahu), ರಾಜಸ್ಥಾನದ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪತ್ನಿ ಕೋಮಲ್ ಸಾಹು ( YouTuber Wife ) ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಸೋಲನುಭವಿಸಿದ್ದಾರೆ.

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಶಾಹಪುರ ತಾಲೂಕಿನ 'ಫುಲಿಯಾ ಖುರ್ದ್' (Phulia Khurd) ಗ್ರಾಮ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಕೋಮಲ್​ ಸಾಹು ಸೋಲನ್ನು ಅನುಭವಿಸಿದ್ದಾರೆ. ಪವನ್ ಸಾಹು ಅವರು ಯೂಟ್ಯೂಬ್‌ನಲ್ಲಿ ಬರೋಬ್ಬರಿ 2.77 ಕೋಟಿಗೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 70 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದು, ಪ್ರತಿಯೊಂದು ವಿಡಿಯೋ ಮತ್ತು ರೀಲ್ಸ್ ಲಕ್ಷಾಂತರ ವೀಕ್ಷಣೆ ಪಡೆಯುತ್ತದೆ. ಆನ್‌ಲೈನ್‌ನಲ್ಲಿ ಅಪಾರ ಕ್ರೇಜ್ ಇದ್ದ ಕಾರಣದಿಂದಲೇ ಅವರು ತಮ್ಮ ಪತ್ನಿಯ ಪರವಾಗಿ "ನನ್ನ ಗ್ರಾಮ.. ನನ್ನ ಗುರುತು" ಎಂಬ ಘೋಷಣೆಯೊಂದಿಗೆ 'ಮಿಷನ್ 2026' ಹೆಸರಿನಲ್ಲಿ ಆಕ್ರಮಣಕಾರಿ ಹಾಗೂ ಅದ್ಧೂರಿ ಪ್ರಚಾರ ಕೈಗೊಂಡಿದ್ದರು.

ಮನೆಯಲ್ಲಿ ಸ್ವಚ್ಛತೆ, ಉತ್ತಮ ರಸ್ತೆಗಳು, ಕುಡಿಯುವ ನೀರು, ಶಿಕ್ಷಣ ಮತ್ತು ಯುವಜನರ ಉಜ್ವಲ ಭವಿಷ್ಯದಂತಹ ಹಲವು ಭರವಸೆಗಳನ್ನು ನೀಡಿದ್ದರೂ, ಗ್ರಾಮದ ಸ್ಥಳೀಯ ಮತದಾರರು ಮಾತ್ರ ಈ ಡಿಜಿಟಲ್ ಜನಪ್ರಿಯತೆಗೆ ಮರುಳಾಗಲಿಲ್ಲ. ಅಂತಿಮವಾಗಿ ಫಲಿತಾಂಶ ಪ್ರಕಟಗೊಂಡಾಗ ಕೋಮಲ್ ಸಾಹು ಅವರಿಗೆ ಸಿಕ್ಕಿದ್ದು ಕೇವಲ 277 ಮತಗಳು ಮಾತ್ರ! ಇದರೊಂದಿಗೆ ಅವರು ಭಾರಿ ಅಂತರದ ಸೋಲನ್ನು ಅನುಭವಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಚುನಾವಣೆಯಲ್ಲಿ 1,203 ಮತಗಳನ್ನು ಪಡೆದ ಭಗವತಿ ಲಾಲ್ ಸೋನಿ ಸರ್ಪಂಚ್ ಆಗಿ ಭರ್ಜರಿ ಗೆಲುವು ಸಾಧಿಸಿದರೆ, 797 ಮತಗಳನ್ನು ಪಡೆದ ಮಾಜಿ ಸರ್ಪಂಚ್ ಕಾಳೂರಾಮ್ ದ್ವಿತೀಯ ಸ್ಥಾನ ಪಡೆದುಕೊಂಡರು.

ಈ ಫಲಿತಾಂಶದ ಮೂಲಕ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸ್‌ಗೂ ರಾಜಕೀಯ ಬೆಂಬಲಕ್ಕೂ ಅಗಾಧ ವ್ಯತ್ಯಾಸವಿದೆ ಎಂಬ ಸತ್ಯಾಂಶ ಮತ್ತೊಮ್ಮೆ ಸಾಬೀತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಡಿಜಿಟಲ್ ಲೈಕ್‌ಗಳನ್ನು ಪಡೆಯುವುದು ಸುಲಭ, ಆದರೆ ನಿಜವಾದ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಅಭ್ಯರ್ಥಿಯ ವ್ಯಕ್ತಿತ್ವ, ಸ್ಥಳೀಯ ಜನರೊಂದಿಗೆ ಹೊಂದಿರುವ ನೇರ ಸಂಪರ್ಕ ಹಾಗೂ ಗ್ರೌಂಡ್ ಲೆವೆಲ್‌ನ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವುದು ಅತ್ಯಗತ್ಯ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್​).