ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಮತ್ತು ಪ್ರಿಯಾಂಕಾ ಪೆಂಚಿ  
ದೇಶ

ಸಂಘರ್ಷದಲ್ಲಿ ಪುರುಷರ ಸಾವುಗಳಿಗೆ ಮಹಿಳೆಯರೇ ಕಾರಣ; ಸೀತಾ, ದ್ರೌಪದಿಯವರನ್ನು ಉಲ್ಲೇಖಿಸಿ ವ್ಯಾಖ್ಯಾನ; ವೇದಿಕೆಯಲ್ಲೇ ಬಿಜೆಪಿ ಶಾಸಕರ ವಾಗ್ವಾದ | BJP v/s BJP

ಭೋಪಾಲ್: ಯುದ್ಧ ಮತ್ತು ಸಂಘರ್ಷಗಳಲ್ಲಿ ಪುರುಷರ ಸಾವುಗಳಿಗೆ ಮಹಿಳೆಯರೇ ಕಾರಣ ಎಂದು ಐತಿಹಾಸಿಕ ಮತ್ತು ಪುರಾಣದ ಸೀತಾ, ದ್ರೌಪದಿ ಹಾಗೂ ಸಂಯೋಗಿತೆಯರನ್ನು ಉಲ್ಲೇಖಿಸಿ ಮಧ್ಯಪ್ರದೇಶದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ವ್ಯಾಖ್ಯಾನ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದು, ವೇದಿಕೆಯಲ್ಲಿ ಮತ್ತೊಬ್ಬ ಮಹಿಳಾ ಬಿಜೆಪಿ ಶಾಸಕಿ ಪ್ರಿಯಾಂಕಾ ಪೆಂಚಿ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದ ನಡೆಸಿದ್ದಾರೆ.
ಗುನಾದ ನಾನಖೇಡಿ ಮಂಡಿ ಸಂಕೀರ್ಣದಲ್ಲಿ ಮಂಗಳವಾರ(ಆ. 18) ನಡೆದ 'ಬಲರಾಮ್ ಕೃಷಿ ಮಹೋತ್ಸವ'ದ ವೇಳೆ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಶಾಕ್ಯ ಅವರು, ಪುರುಷರ ಸಾವುಗಳಿಗೆ ಮಹಿಳೆಯರೇ ಕಾರಣ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ರಾಮಾಯಣ, ಮಹಾಭಾರತ ಮತ್ತು ಪೃಥ್ವಿರಾಜ್ ಚೌಹಾಣ್ ಅವರ ಕಥೆಯನ್ನು ಉಲ್ಲೇಖಿಸಿದರು.
ಆದರೆ ಚಚೌರಾದ ಬಿಜೆಪಿ ಶಾಸಕಿ ಪ್ರಿಯಾಂಕಾ ಪೆಂಚಿ ಅದನ್ನು ವಿರೋಧಿಸಿದ್ದು, ಮತ್ತು ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಶಾಕ್ಯ ತಮ್ಮ ನಿಲುವಿನಿಂದ ಹಿಂದೆ ಸರಿಯದೇ, ಬದಲಾಗಿ ನಾನು ಅನೇಕ ಪುಸ್ತಕಗಳನ್ನು ಓದಿದ್ದೇನೆ. ದಯವಿಟ್ಟು ನೀವು ಕುಳಿತುಕೊಳ್ಳಿ ಎಂದು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.

ವೇದಿಕೆಯಲ್ಲೇ ಬಿಜೆಪಿ ಶಾಸಕ V/S ಬಿಜೆಪಿ ಶಾಸಕಿ

ಕೃಷಿ ಕಾರ್ಯಕ್ರಮದಲ್ಲಿ ಆರಂಭದಲ್ಲಿ ರೈತರು, ರಸಗೊಬ್ಬರಗಳು ಮತ್ತು ವಿದ್ಯುತ್ ಬಗ್ಗೆ ಮಾತನಾಡುವ ಮೂಲಕ ಭಾಷಣ ಆರಂಭಿಸಿದ ಶಾಕ್ಯ, ಬಳಿಕ ದೇಶಭಕ್ತಿ, ಸಮಾಜ ಮತ್ತು ಧಾರ್ಮಿಕ ಮತ್ತು ಐತಿಹಾಸಿಕ ಉದಾಹರಣೆಗಳ ಕಡೆ ತಿರುಗಿಸಿದ್ದಾರೆ. ರಾಮಾಯಣವನ್ನು ಉಲ್ಲೇಖಿಸುತ್ತಾ, ಇನ್ನೊಬ್ಬ ವ್ಯಕ್ತಿಯ ಹೆಂಡತಿಯನ್ನು ಅಪಹರಿಸುವುದರ ಎಚ್ಚರಿಕೆಗಳ ಹೊರತಾಗಿಯೂ, ರಾವಣನು ಅದನ್ನು ಮಾಡಿ ತಾನೂ ಮತ್ತು ತನ್ನ ರಾಜ್ಯದ ವಿನಾಶವನ್ನು ಮೈಮೇಲೆ ಎಳೆದುಕೊಂಡನು ಎಂದು ಹೇಳಿದ್ದಾರೆ.
ಬಳಿಕ ಮಹಾಭಾರತದ ದ್ರೌಪದಿಯನ್ನು ಉಲ್ಲೇಖಿಸುತ್ತಾ, ಒಬ್ಬ ಮಹಿಳೆಯ ಕಾರಣದಿಂದಾಗಿ ಲಕ್ಷಾಂತರ ಪುರುಷರು ಸಾವನ್ನಪ್ಪಿದರು ಎಂದು ಪ್ರತಿಪಾದಿಸಿದ್ದಾರೆ. ನಂತರ ಪೃಥ್ವಿರಾಜ್ ಚೌಹಾಣ್ ಮತ್ತು ಸಂಯೋಗಿತಾ ಅವರ ಉದಾಹರಣೆಯನ್ನು ಪ್ರಸ್ತಾಪಿಸಿ, ಸಂಯೋಗಿತಾ ಸಂಬಂಧಿತ ಘಟನೆಗಳ ಸಂದರ್ಭದಲ್ಲಿ ಚೌಹಾಣ್ ಅವರ ಸೇನಾಪತಿಗಳು ಮೃತಪಟ್ಟಿದ್ದನ್ನು ಉಲ್ಲೇಖಿಸಿದ್ದಾರೆ.
ಇದಕ್ಕೆ ವೇದಿಕೆಯಲ್ಲೇ ಇದ್ದ ಶಾಸಕಿ ಪ್ರಿಯಾಂಕಾ ಪೆಂಚಿ ಮಧ್ಯ ಪ್ರವೇಶಿಸಿ ಆಕ್ಷೇಪಿಸಿದ್ದು, ಶಾಖ್ಯಾ ಅವರ ಹೇಳಿಕೆಯನ್ನು ವಿರೋಧಿಸಿದರು. ಮತ್ತು ಅವರ ಈ ನಿರೂಪಣೆಯು ಮಹಿಳೆಯರಿಗೆ ಅವಮಾನಕರವಾಗಿದೆ ಎಂದು ಪ್ರತಿಭಟಿಸಿದರು. ಆದರೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಾಕ್ಯ, ನಾನು ಸಾಕಷ್ಟು ಅಧ್ಯಯನ ಮಾಡಿದ್ದೇನೆ ಮತ್ತು ಇತಿಹಾಸ ಹಾಗೂ ಧಾರ್ಮಿಕ ಗ್ರಂಥಗಳಲ್ಲಿ ಏನಿದೆ ಎಂಬುದು ತನಗೆ ತಿಳಿದಿದೆ ಎಂದಿದ್ದಾರೆ.
ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಅವರು ಈ ರೀತಿ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. 2018ರಲ್ಲಿ ಗುಣಾ ಸರ್ಕಾರಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಹುಡುಗಿಯರು ಏಕೆ ಬಾಯ್‌ಫ್ರೆಂಡ್‌ಗಳನ್ನು ಮಾಡಿಕೊಳ್ಳುತ್ತಾರೆ? ಅವರು ಇದನ್ನು ನಿಲ್ಲಿಸಿದರೆ, ಅವರ ಮೇಲಿನ ದೌರ್ಜನ್ಯಗಳು ನಿಲ್ಲುತ್ತವೆ ಎಂದಿದ್ದರು (ಏಜೆನ್ಸೀಸ್).