ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೆ ಹಿನ್ನಡೆ; ಎಲ್‌ಒಪಿ ಆಗಿ ಶಾಸಕ ರಿತಬ್ರತ ಬ್ಯಾನರ್ಜಿ ಮುಂದುವರೆಯಲು ಹೈಕೋರ್ಟ್ ಅನುಮತಿ | Mamata Banerjee

ಮಮತಾ ಬ್ಯಾನರ್ಜಿ ಮತ್ತು ರಿತಬ್ರತ ಬ್ಯಾನರ್ಜಿ
ಮಮತಾ ಬ್ಯಾನರ್ಜಿ ಮತ್ತು ರಿತಬ್ರತ ಬ್ಯಾನರ್ಜಿ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವದ ಟಿಎಂಸಿ ಬಣಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಮಂಗಳವಾರ(ಆ. 18) ಕೋಲ್ಕತ್ತಾ ಹೈಕೋರ್ಟ್​ನ ವಿಭಾಗೀಯ ಪೀಠವು, ಬಂಡಾಯ ಶಾಸಕ ರಿತಬ್ರತ ಬ್ಯಾನರ್ಜಿ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಮುಂದುವರೆಯಲು ಅನುಮತಿ ನೀಡಿದೆ.
ವಿಧಾನಸಭಾ ಸ್ಪೀಕರ್ ರತೀಂದ್ರ ಬೋಸ್ ಅವರು ರಿತಬ್ರತ ಬ್ಯಾನರ್ಜಿಯನ್ನು ಎಲ್‌ಒಪಿ ಆಗಿ ನೇಮಿಸಿದ ನಿರ್ಧಾರದ ವಿರುದ್ಧ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ ಕೋಲ್ಕತ್ತಾ ಹೈಕೋರ್ಟ್​ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಟಿಎಂಸಿ ಹಿರಿಯ ಶಾಸಕ ಸೋಭಾಂದೇಬ್ ಚಟ್ಟೋಪಾಧ್ಯಾಯ ಅವರು, ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಶಾಸಕ ಸೋಭಾಂದೇಬ್ ಚಟ್ಟೋಪಾಧ್ಯಾಯ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಶಂಪಾ ಸರ್ಕಾರ್ ಮತ್ತು ಅಜಯ್ ಕುಮಾರ್ ಗುಪ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ರಿತಬ್ರತ ಬ್ಯಾನರ್ಜಿ ಅವರ ನೇಮಕ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಏಕ ಪೀಠವು ಇತ್ಯರ್ಥಪಡಿಸುವವರೆಗೆ ಅವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದು, ಎರಡು ತಿಂಗಳೊಳಗೆ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಸೂಚನೆ ನೀಡಿದೆ.
ಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ಟಿಎಂಸಿ ನಡೆದ ಬಂಡಾಯದ ಬಳಿಕ ಈ ವಿವಾದ ಉಂಟಾಗಿದೆ. ಪಕ್ಷವು 294 ಸ್ಥಾನಗಳಲ್ಲಿ 80 ಸ್ಥಾನಗಳನ್ನು ಗೆದ್ದು ಪ್ರಮುಖ ವಿರೋಧ ಪಕ್ಷವಾಗಿ ಹೊರ ಹೊಮ್ಮಿತು. ಮಮತಾ ಬ್ಯಾನರ್ಜಿ ನೇತೃತ್ವದ ಬಣವು ಎಲ್‌ಒಪಿ ಹುದ್ದೆಗೆ ಚಟ್ಟೋಪಾಧ್ಯಾಯ ಅವರನ್ನು ನೇಮಿಸಿದ್ರೆ, ಸುಮಾರು 60 ಶಾಸಕರ ಗುಂಪು ರಿತಬ್ರತ ಬ್ಯಾನರ್ಜಿ ಎಲ್​ಒಪಿಯಾಗಲು ಬೆಂಬಲ ನೀಡಿದೆ.
ವಿಧಾನಸಭೆಯ ಸ್ಪೀಕರ್ ಮಮತಾ ಬ್ಯಾನರ್ಜಿಯವರ ಬಣ ನೀಡಿದ ನೇಮಕಾತಿ ಪ್ರಸ್ತಾವನೆಯನ್ನು ತಿರಸ್ಕರಿಸಿ, ಬಂಡಾಯ ಶಾಸಕರು ಸಹಿ ಮಾಡಿದ ಪ್ರಸ್ತಾವನೆಯ ಆಧಾರದ ಮೇಲೆ ರಿತಬ್ರತ ಬ್ಯಾನರ್ಜಿಯನ್ನು ಎಲ್‌ಒಪಿಯನ್ನಾಗಿ ಗುರುತಿಸಿದ್ದಾರೆ. ಇದನ್ನು ಪ್ರಶ್ನಿಸಿ ಸೋಭಾಂದೇಬ್ ಚಟ್ಟೋಪಾಧ್ಯಾಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net