ದಳಪತಿ ವಿಜಯ್, ಸಂಗೀತಾ ವಿಚ್ಛೇದನ ಪ್ರಕರಣ
- ದಳಪತಿ ವಿಜಯ್, ಸಂಗೀತಾ ವಿಚ್ಛೇದನ ಪ್ರಕರಣ
- ಜೂನ್ 15 ಕ್ಕೆ ವಿಚಾರಣೆ ಮುಂದೂಡಿದ ಕೌಟುಂಬಿಕ ನ್ಯಾಯಾಲಯ
- ಏಪ್ರಿಲ್ 23 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ
ಚೆನ್ನೈ: ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದ ತಮಿಳು ನಟ ಮತ್ತು ರಾಜಕಾರಣಿ ದಳಪತಿ ವಿಜಯ್ ಮತ್ತು ಸಂಗೀತಾ ನಡುವಿನ ವಿಚ್ಛೇದನ (Vijay Divorce) ಪ್ರಕರಣದ ಅರ್ಜಿಯನ್ನು ಜೂನ್ 15 ಕ್ಕೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಆದೇಶಿಸಿದೆ.
ಸೋಮವಾರ (ಏ.20) ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದ ಜಸ್ಟೀಸ್ ಶಶಿಕಲಾ ಅವರ ನ್ಯಾಯಪೀಠದ ಮುಂದೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ವಿಚಾರಣೆಯನ್ನು ಜೂನ್ 15 ಕ್ಕೆ ಮುಂದೂಡಿದ್ದಾರೆ.
2021 ರ ಸಮಯದಲ್ಲಿ ನಟ, ಪತಿ ವಿಜಯ್ ನಟಿಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿರುವ ಅನುಮಾನದ ಹಿನ್ನಲೆ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಫೆಬ್ರವರಿ 2026 ರಲ್ಲಿ ಸಲ್ಲಿಕೆಯಾಗಿದ್ದ ಈ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 20 ರಂದು ನಡೆಸುವುದಾಗಿ ನ್ಯಾಯಾಲಯ ಹೇಳಿತ್ತು. ಈಗ ಕೆಲವೇ ದಿನಗಳಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯಿರುವ ಕಾರಣ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಭಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ತಮಿಳಿಗ ವೆಟ್ರಿಗ ಕಳಗಂ (ಟಿವಿಕೆ) ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ಚುನಾವಣೆಯಲ್ಲಿ ವಿಜಯ್ ಪೆರೆಂಬೂರು ಹಾಗೂ ತಿರುಚ್ಚಿ(ಪೂರ್ವ) ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದಾರೆ.
ಏಪ್ರಿಲ್ 23 ರಂದು ತಮಿಳುನಾಡಿನಾದ್ಯಂತ ಮತದಾನ ನಡೆಯಲಿದ್ದು, ಮೇ 4 ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ಭಾರಿಯ ಚುನಾವಣೆಯಲ್ಲಿ ಆಡಳಿತರೂಢ ಡಿಎಂಕೆ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ, ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಒಟ್ಟಾಗಿ ಚುನಾವಣೆಯನ್ನು ಎದುರಿಸಲಿವೆ. ಇವುಗಳ ನಡುವೆ ವಿಜಯ್ ಅವರ ಟಿವಿಕೆ ಒಬ್ಬಂಟಿಯಾಗಿ ಚುನಾವಣಾ ಕಣದಲ್ಲಿ ಕಾದಾಡಲು ಸಿದ್ಧವಾಗಿದೆ.
25 ವರ್ಷಗಳ ದಾಂಪತ್ಯದಲ್ಲಿ ಬಿರುಕು
ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಮಾರು 25 ವರ್ಷ ಕಳೆದಿದೆ. ಜುಲೈ 1998ರಲ್ಲಿ ರಿಜಿಸ್ಟರ್ ಆಗಿ, 1999ರಲ್ಲಿ ಚೆನ್ನೈನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಆದರೆ, ಈಗ ಸಂಗೀತಾ ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ಗಂಭೀರ ಆರೋಪಗಳಿವೆ. 2021 ರಿಂದ ವಿಜಯ್ ಭಾವನಾತ್ಮಕವಾಗಿ ದೂರವಾಗಿದ್ದಾರೆ ಮತ್ತು ವೈವಾಹಿಕ ಜೀವನದಲ್ಲಿ ಅಗೌರವ ತೋರಿಸುತ್ತಿದ್ದಾರೆ ಎಂಬುದು ಸಂಗೀತಾ ಅವರ ಆರೋಪ. ಜೂನ್ 15, 2026 ಕ್ಕೆ ಈ ಪ್ರಕರಣದ ವಿಚಾರಣೆ ನಡೆಯಲಿದೆ, (ಏಜನ್ಸೀಸ್).