UP Rajya Sabha Elections: ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನಾಮಪತ್ರ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರೀಕ್ಷೆಯಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂಟು ಸ್ಥಾನಗಳನ್ನು ಪಡೆದುಕೊಂಡರೆ, ಸಮಾಜವಾದಿ ಪಕ್ಷ (ಎಸ್‌ಪಿ) ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ.
ಎಲ್ಲಾ 10 ಸ್ಥಾನಗಳಿಗೆ ಅಕ್ಟೋಬರ್ 16 ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಖಾಲಿ ಇರುವ ಸ್ಥಾನಗಳಿಗೆ ಕೇವಲ 10 ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದ ಕಾರಣ ಮತದಾನ ನಡೆಯದೆ ಫಲಿತಾಂಶವನ್ನು ಘೋಷಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ 10 ಸ್ಥಾನಗಳ ಪೈಕಿ ಎಂಟು ಸ್ಥಾನಗಳನ್ನು ಗೆದ್ದುಕೊಂಡಿದೆ. ಹೊಸದಾಗಿ ಆಯ್ಕೆಯಾದ ಸಂಸದರಲ್ಲಿ ಉತ್ತರ ಪ್ರದೇಶ ಸರ್ಕಾರದ ಸಚಿವ ಧರ್ಮಪಾಲ್ ಸಿಂಗ್, ಪಕ್ಷದ ಒಬಿಸಿ ಮೋರ್ಚಾ ಮುಖ್ಯಸ್ಥ ಪ್ರಕಾಶ್ ಪಾಲ್, ಶ್ರುತಿ ಗಂಗ್ವಾರ್, ವಿದ್ಯಾ ಸಾಗರ್ ಸೋಂಕರ್, ಪ್ರಿಯಾಂಕಾ ರಾವತ್, ರಾಧಾಕಾಂತ್ ಓಜಾ, ಗೋಪಿ ಕೃಷ್ಣ ಪಾಂಡೆ ಮತ್ತು ರಾಮ್ ಪ್ರತಾಪ್ ಸಿಂಗ್ ಚೌಹಾಣ್ ಸೇರಿದ್ದಾರೆ.
ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ನಂತರ ಮಾತನಾಡಿದ ಎಸ್‌ಪಿ ಸಂಸದ ಧನ್‌ರಾಜ್ ನಾಥ್ವಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಇತರ ಹಿರಿಯ ನಾಯಕರಿಗೆ ಧನ್ಯವಾದ ಅರ್ಪಿಸಿದರು.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಾಥ್ವಾನಿ, ನನ್ನ ಮೇಲೆ ಅಚಲವಾದ ನಂಬಿಕೆ ಇಟ್ಟಿರುವ ಹಿರಿಯ ನಾಯಕರಿಗೆ ಮತ್ತು ಪಕ್ಷದ ಎಲ್ಲಾ ಶಾಸಕರಿಗೆ ತಮ್ಮ ಕೃತಜ್ಞತೆಗಳನ್ನು ಸಲಿಸಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ಉತ್ತರ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿ, ಆಧುನಿಕ ಮೂಲಭೂತ ಸೌಕರ್ಯ ಮತ್ತು ಯುವಕರ ಉಜ್ವಲ ಭವಿಷ್ಯಕ್ಕಾಗಿ ಅಖಿಲೇಶ್ ಅವರ ಪ್ರಗತಿಪರ ದೃಷ್ಟಿಕೋನವನ್ನು ಮುನ್ನಡೆಸಲು ನಾನು ಸಂಪೂರ್ಣವಾಗಿ ಸಮರ್ಪಿತನಾಗಿರುತ್ತೇನೆ ಎಂದು ಬರೆದಿದ್ದಾರೆ. ಅಕ್ಟೋಬರ್ 12 ರಂದು ಮಧ್ಯಾಹ್ನ ತಮ್ಮ ಗೆಲುವಿನ ಪ್ರಮಾಣಪತ್ರವನ್ನು ಸ್ವೀಕರಿಸುವುದಾಗಿ ಘೋಷಿಸಿದರು.
ನೂತನವಾಗಿ ಆಯ್ಕೆಯಾದ ಬಿಜೆಪಿ ಸಂಸದೆ ಶ್ರುತಿ ಗಂಗಾವರ್ ಅವರು ತಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದರು. ನನ್ನ ಮೇಲೆ ಇಷ್ಟು ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಪಕ್ಷಕ್ಕೆ, ಕೇಂದ್ರ ನಾಯಕತ್ವಕ್ಕೆ ಮತ್ತು ರಾಜ್ಯ ನಾಯಕತ್ವಕ್ಕೆ ಮನಸಾರೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಜವಾಬ್ದಾರಿ ಮತ್ತು ನಂಬಿಕೆಯನ್ನು ಕೇವಲ ನನ್ನ ಮೇಲೆ ಮಾತ್ರವಲ್ಲ, ಬದಲಿಗೆ ದೇಶದ ಅರ್ಧದಷ್ಟು ಜನರ ಮೇಲೆ ಇರಿಸಲಾಗಿದೆ. ನಾನು ಈ ಜವಾಬ್ದಾರಿಯನ್ನು ಸಂಪೂರ್ಣ ಪ್ರಾಮಾಣಿಕತೆ, ಸಮರ್ಪಣೆ ಮತ್ತು ಬದ್ಧತೆಯಿಂದ ಪೂರೈಸಲು ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ(ಏಜೆನ್ಸೀಸ್).