

Rejinagar Bypoll Result: ಪಶ್ಚಿಮ ಬಂಗಾಳದ ರೇಜಿನಗರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಶಂಖರವ್ ಸರ್ಕಾರ್ ಅವರು ತಮ್ಮ ಪ್ರತಿಸ್ಪರ್ಧಿ ಆಮ್ ಜನತಾ ಉನ್ನಯನ್ ಪಕ್ಷದ (AJUP) ಅಭ್ಯರ್ಥಿ ಗೋಲಾಂ ನಬಿ ಆಜಾದ್ ಅಲಿಯಾಸ್ ರಾಬಿನ್ ವಿರುದ್ಧ 75,816 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸರ್ಕಾರ್ ಅವರು 1,29,914 ಮತಗಳನ್ನು ಪಡೆದಿದ್ದು, ಇದು ಚಲಾವಣೆಯಾದ ಒಟ್ಟು ಮತಗಳ ಶೇ. 63.14 ರಷ್ಟಾಗಿದೆ. ಇತ್ತ ಆಜಾದ್ ಅವರು 54,098 ಮತಗಳನ್ನು (ಶೇ. 26.29) ಪಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ಲಾಹಿಲ್ ಕಾಫಿ ಅವರು 6,168 ಮತ(ಶೇ. 3), ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ರಬಿಲ್ ಆಲಮ್ ಚೌಧರಿ 3,847 ಮತ (ಶೇ. 1.87), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅಭ್ಯರ್ಥಿ ಎಂ.ಡಿ. ಸಯೀದ್ 3,797 ಮತ (ಶೇ. 1.85), ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸೈಫುಜ್ಜಮಾನ್ ಸೈಖ್ ಅವರು 2,044 ಮತಗಳನ್ನು (ಶೇ. 0.99) ಪಡೆದಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿರುವ ರೇಜಿನಗರವು ಬಹರಂಪುರ ಲೋಕಸಭಾ ಕ್ಷೇತ್ರದ ಭಾಗವಾಗಿದೆ ಮತ್ತು ಇಲ್ಲಿ 2,57,657 ನೋಂದಾಯಿತ ಮತದಾರರಿದ್ದಾರೆ. ಇದರ ಶೇ. 70 ರಷ್ಟು ಮತದಾರರು ಮುಸ್ಲಿಮರಾಗಿದ್ದು, ಬಿಜೆಪಿ, ಟಿಎಂಸಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ರಾಜಕೀಯ ಸಂಘಟನೆಗಳ ನಡುವಿನ ಸ್ಪರ್ಧೆಯ ಹಿನ್ನೆಲೆಯಲ್ಲಿ ಈ ಫಲಿತಾಂಶವು ವಿಶೇಷವೆನಿಸಿದೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ, ಟಿಎಂಸಿಯಿಂದ ಉಚ್ಚಾಟನೆಗೊಂಡಿದ್ದ ಹುಮಾಯೂನ್ ಕಬೀರ್ ಅವರು ಬಿಜೆಪಿ ಅಭ್ಯರ್ಥಿ ಬಪನ್ ಘೋಷ್ ವಿರುದ್ಧ 58,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಇದರೊಂದಿಗೆ ಮತ್ತೊಂದು ಕ್ಷೇತ್ರವಾದ ನೌದಾದಿಂದಲೂ ಗೆದ್ದಿದ್ದರು. ಕಬೀರ್ ಈ ಪೈಕಿ ರೇಜಿನಗರವನ್ನು ತೆರವುಗೊಳಿಸಿದ ನಂತರ ಈ ಉಪಚುನಾವಣೆ ಅನಿವಾರ್ಯವಾಗಿತ್ತು. ಮುರ್ಷಿದಾಬಾದ್‌ನಲ್ಲಿ ಬಾಬ್ರಿ ಮಸೀದಿ ಮಾದರಿಯ ಮಸೀದಿಯನ್ನು ನಿರ್ಮಿಸುವ ಅವರ ಪ್ರಸ್ತಾಪದ ಸುತ್ತ ವಿವಾದ ಉಂಟಾದ ನಂತರ ಕಬೀರ್ ಅವರನ್ನು ಅಂದಿನ ಟಿಎಂಸಿಯಿಂದ ಹೊರಹಾಕಲಾಯಿತು. ಇದರ ಬಳಿಕ ಅವರು ಎಜೆಯುಪಿ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು.
ಕಬೀರ್ ತಮ್ಮ ಮಗನಾದ ಗೋಲಾಂ ನಬಿ ಆಜಾದ್ರನ್ನೇ ಕಣಕ್ಕಿಳಿಸಿದ್ದರೆ, ಬಿಜೆಪಿ ಮುರ್ಷಿದಾಬಾದ್ ಮಾಜಿ ಜಿಲ್ಲಾ ಅಧ್ಯಕ್ಷ ಶಂಖರವ್ ಸರ್ಕಾರ್ಗೆ ಟಿಕೆಟ್ ನೀಡಿತ್ತು. ರೆಜಿನಗರ ವಿಧಾನಸಭಾ ಉಪಚುನಾವಣೆಗೆ ಅಕ್ಟೋಬರ್ 6 ರಂದು ಚುನಾವಣೆ ನಡೆದಿದ್ದು, ಕ್ಷೇತ್ರದಲ್ಲಿ ಶೇ. 78.42 ರಷ್ಟು ಮತದಾನ ದಾಖಲಾಗಿದೆ.
ಈ ಹಿಂದೆ ಹುಮಾಯೂನ್ ಕಬೀರ್ ಅವರು 58,000ಕ್ಕೂ ಹೆಚ್ಚು ಮತಗಳ ಭಾರಿ ಅಂತರದಿಂದ ಗೆದ್ದಿದ್ದ ಅದೇ ರೇಜಿನಗರ ಕ್ಷೇತ್ರದಲ್ಲಿ, ಈಗ ಬಿಜೆಪಿ ಗೆಲುವು ಸಾಧಿಸಿರುವುದು ಹಿಂದಿನ ಫಲಿತಾಂಶಕ್ಕಿಂತ ತದ್ವಿರುದ್ಧವಾದ ದೊಡ್ಡ ಬದಲಾವಣೆಯಾಗಿದೆ. ಮುಸ್ಲಿಂ ಮತದಾರರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಇಷ್ಟು ಗರಿಷ್ಠ ಮತಗಳೊಂದಿಗೆ ಬಿಜೆಪಿ ಗೆದ್ದಿರುವುದು ಮತ್ತು ಅಖಾಡದಲ್ಲಿ ಹಲವು ವಿರೋಧ ಪಕ್ಷಗಳು ಸ್ಪರ್ಧಿಸಿರುವುದು ಎಲ್ಲರ ಗಮನ ಸೆಳೆದಿದೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬರುವ ಈ ರೇಜಿನಗರ ಕ್ಷೇತ್ರದಲ್ಲಿ ಶೇ. 70ರಷ್ಟು ಮುಸ್ಲಿಂ ಮತದಾರರಿದ್ದಾರೆ. ಹಾಗಾಗಿ, ಇಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್, ಟಿಎಂಸಿ ಮತ್ತು ಸ್ಥಳೀಯ ಪ್ರಾದೇಶಿಕ ಪಕ್ಷಗಳ ನಡುವಷ್ಟೇ ನೇರ ಪೈಪೋಟಿ ಇರುತ್ತಿತ್ತು. ಆದರೆ ಈ ಬಾರಿ ಬಿಜೆಪಿಯು ದೊಡ್ಡ ಗೆಲುವು ಸಾಧಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ವಿರೋಧ ಪಕ್ಷಗಳ ಮತಗಳು ಚದುರಿಹೋಗಿರುವುದು ಮತ್ತು ಕಣದಲ್ಲಿ ಬರೋಬ್ಬರಿ 15 ಜನ ಅಭ್ಯರ್ಥಿಗಳು ನಿಂತಿದ್ದು ರಾಜಕೀಯ ಲೆಕ್ಕಾಚಾರವನ್ನೇ ಬದಲಾಯಿಸಿದೆ. ಈ ರೀತಿಯ ತೀವ್ರ ಪೈಪೋಟಿ ಮತ್ತು ವಿರೋಧ ಪಕ್ಷಗಳ ನಡುವಿನ ಬಿರುಕು ಅಂತಿಮವಾಗಿ ಬಿಜೆಪಿಗೆ ವರವಾಗಿ ಪರಿಣಮಿಸಿದೆ ಎನ್ನಬಹುದು(ಏಜೆನ್ಸೀಸ್).