

Dharapuram bypoll: ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು, ಇದೀಗ ಧಾರಾಪುರಂ ಉಪಚುನಾವಣೆಯ ಮೊದಲ ಅಗ್ನಿಪರೀಕ್ಷೆಯಲ್ಲೂ ಭರ್ಜರಿ ಜಯಗಳಿಸುವ ಮೂಲಕ ತನ್ನ ರಾಜಕೀಯ ಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಕಳೆದ ಮಂಗಳವಾರ ನಡೆದ ಉಪಚುನಾವಣೆಯಲ್ಲಿ ಟಿವಿಕೆಯ ಪಿ. ಸತ್ಯಭಾಮ ಅವರು 9,471 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಡಿಎಂಕೆ ಅಭ್ಯರ್ಥಿ ಎಸ್. ಸುಗನ್ಯಾ 57,370 (ಶೇ. 31.78) ಮತ, ಸತ್ಯಭಾಮ ಅವರು 66,841 (ಶೇ. 37.02) ಮತ. ಎಐಎಡಿಎಂಕೆ ಅಭ್ಯರ್ಥಿ ಕೆ. ಬಾನುಮತಿ ಅವರು 45,280 (ಶೇ. 25.08) ಮತಗಳನ್ನು ಪಡೆದಿದ್ದಾರೆ.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಎಐಎಡಿಎಂಕೆಯಿಂದ ಸ್ಪರ್ಧಿಸಿದ್ದ ಪಿ. ಸತ್ಯಭಾಮ ಅವರು, ಟಿವಿಕೆ ಅಧಿಕಾರಕ್ಕೇರಿದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಜಯ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರಣದಿಂದಾಗಿ ಧಾರಾಪುರಂ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಎಐಎಡಿಎಂಕೆ ಅಭ್ಯರ್ಥಿ ಪಿ. ಸತ್ಯಭಾಮ ಅವರು ಒಟ್ಟು ಮತಗಳಲ್ಲಿ ಶೇ. 48.56 ರಷ್ಟು ಮತಗಳನ್ನು ಪಡೆದು ಈ ಕ್ಷೇತ್ರವನ್ನು ಗೆದ್ದುಕೊಂಡಿದ್ದರೆ, ಪ್ರತಿಸ್ಪರ್ಧಿ ಟಿವಿಕೆಯ ಗೌರಿ ಚಿತ್ರಾ ಅವರು ಶೇ. 23.23 ರಷ್ಟು ಮತಗಳನ್ನು ಪಡೆದಿದ್ದರು.
ಮಧುರಾಂತಕಂ ಉಪಚುನಾವಣೆಯಲ್ಲಿಯೂ ಟಿವಿಕೆ ಪಕ್ಷವು ಮುನ್ನಡೆ ಸಾಧಿಸುತ್ತಿದ್ದು, ಪಕ್ಷದ ಅಭ್ಯರ್ಥಿ ಕೆ. ಮರಗತಂ ಕುಮಾರವೇಲ್ ಅವರು ಡಿಎಂಕೆ ಅಭ್ಯರ್ಥಿ ಐ. ಪರಾಂತಮನ್ ಮತ್ತು ಎಐಎಡಿಎಂಕೆ ಅಭ್ಯರ್ಥಿ ಎಸ್. ಕನಿಥಾಸಂಪತ್ ಅವರ ವಿರುದ್ಧ ಮುನ್ನಡೆಯಲ್ಲಿದ್ದಾರೆ. ಎಐಎಡಿಎಂಕೆಯಿಂದ ಗೆದ್ದಿದ್ದ ಕೆ. ಮರಗತಂ ಕುಮಾರವೇಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿವಿಕೆ ಸೇರಿದ್ದರಿಂದ ಉಪಚುನಾವಣೆ ಅನಿವಾರ್ಯವಾಗಿತ್ತು. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿ ಕೆ. ಮರಗತಂ ಕುಮಾರವೇಲ್ ಅವರು ಶೇ. 34.95 ರಷ್ಟು ಮತಗಳನ್ನು ಪಡೆದಿದ್ದರೆ, ಟಿವಿಕೆಯ ಎಝಿಲ್ ಕ್ಯಾಥರೀನ್ ಎಝಿಲ್ಮಲೈ ಅವರು ಶೇ. 31.32 ರಷ್ಟು ಮತಗಳನ್ನು ಪಡೆದಿದ್ದರು.
ಆರು ತಿಂಗಳ ಹಿಂದೆ ನಡೆದಿದ್ದ ತಮಿಳುನಾಡು ಚುನಾವಣೆಯಲ್ಲಿ ಟಿವಿಕೆಯು 108 ಸ್ಥಾನಗಳೊಂದಿಗೆ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಆದರೆ ಸರಳ ಬಹುಮತ ಪಡೆಯಲು ವಿಫಲವಾಗಿತ್ತು. ಇದು ವಿಜಯ್ ಅವರನ್ನು ಕಾಂಗ್ರೆಸ್, ವಿದುತಲೈ ಚಿರುತೈಗಳು ಕಟ್ಚಿ (ವಿಸಿಕೆ), ಇಂಡಿಯನ್ ಯೂನಿಯನ್ ಮುಸ್ಲಿಂ ಲೈಗ್ (ಐಯುಎಂಎಲ್) ಮತ್ತು ಎಡಪಕ್ಷಗಳ ಮೇಲೆ ಅವಲಂಬಿತರಾಗುವಂತೆ ಮಾಡಿತು. ಮೈತ್ರಿಕೂಟವು ಪ್ರತಿ ಹಂತದಲ್ಲೂ ಕೋಮುವಾದಿ ಶಕ್ತಿಗಳನ್ನು ವಿರೋಧಿಸುವುದಾಗಿ ಹೇಳಿದ್ದು, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವು ತನ್ನ ಪ್ರಾಥಮಿಕ ತತ್ವಗಳಾಗಿರುತ್ತದೆ ಎಂದು ಮಿತ್ರಪಕ್ಷಗಳಿಗೆ ಭರವಸೆ ನೀಡಿದೆ(ಏಜೆನ್ಸೀಸ್).