ಖಾನ್ ಸರ್ ವಿರುದ್ಧ ತಮ್ಮನ ಕೊಲೆ ಆರೋಪ ಹೊರಿಸಿದ ರೌಶನ್ ಆನಂದ್
- ಬಿಹಾರದ ಶಿಕ್ಷಣ ಲೋಕದಲ್ಲಿ ಮಹಾ ಸಂಚಲನ!
- ನೇಪಾಳದಲ್ಲಿ ಪ್ರಿನ್ಸ್ ಯಾದವ್ ನಿಗೂಢ ಸಾವು
- ಖಾನ್ ಸರ್ ವಿರುದ್ಧ ತಮ್ಮನ ಕೊಲೆ ಆರೋಪ ಹೊರಿಸಿದ ರೌಶನ್ ಆನಂದ್
- ಮಂಪರು ಪರೀಕ್ಷೆಗೆ ಒತ್ತಾಯ
ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಶಿಕ್ಷಣ ಲೋಕದ ಇಬ್ಬರು ದಿಗ್ಗಜರ ನಡುವಿನ ಪೈಪೋಟಿ, ಈಗ ರಕ್ತಸಿಕ್ತ ಅಪರಾಧ ಲೋಕದ ಕತೆಯಾಗಿ ಬದಲಾಗಿದೆ.
ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಪ್ರಸಿದ್ಧ ಶಿಕ್ಷಕ ಫೈಸಲ್ ಖಾನ್ ಅಲಿಯಾಸ್ ಖಾನ್ ಸರ್ ಮತ್ತು ರೌಶನ್ ಆನಂದ್ (Raushan Anand Allegation on Khan Sir) ನಡುವಿನ ಜಗಳ, ಈಗ ಕೊಲೆ ಆರೋಪದ ಹಂತಕ್ಕೆ ಬಂದು ನಿಂತಿದೆ.
ಸೋಮವಾರ (ಜೂ. 15) ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ರೌಶನ್ ಆನಂದ್, ಖಾನ್ ಸರ್ ವಿರುದ್ಧ ನಡೆಸಿರುವ ವಾಗ್ದಾಳಿ ಬಿಹಾರ ರಾಜಕೀಯ ಹಾಗೂ ಶಿಕ್ಷಣ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ನನ್ನ ತಮ್ಮನನ್ನು ಖಾನ್ ಸರ್ ಕೊಲೆ ಮಾಡಿಸಿದ್ದಾರೆ!
ಖಾನ್ ಸರ್ ನೀಡಿದ ಸುಳ್ಳು ದೂರಿನ ಮೇಲೆ ಪಾಟ್ನಾ ಪೊಲೀಸರು ನನ್ನನ್ನು ಜೈಲಿಗೆ ಕಳಿಸಿದ್ದರು. ನಾನು ಜೈಲಿನಲ್ಲಿದ್ದಾಗ, ನೇಪಾಳದಲ್ಲಿ ನಿಗೂಢವಾಗಿ ನನ್ನ ಸಹೋದರ ಪ್ರಿನ್ಸ್ ಯಾದವ್‌ನನ್ನು ಖಾನ್ ಸರ್ ಪ್ಲಾನ್ ಮಾಡಿ ಕೊಲೆ ಮಾಡಿಸಿದ್ದಾರೆ.
ಈಗ ನನಗೆ ಹಾಗೂ ನನ್ನ ತಮ್ಮ ಪ್ರಿನ್ಸ್ ಸಾವಿಗೆ ನ್ಯಾಯ ಬೇಕು ಎಂದು ರೌಶನ್ ಆನಂದ್ ಗುಡುಗಿದ್ದಾರೆ. ಅಷ್ಟೇ ಅಲ್ಲದೆ, ಸತ್ಯ ಹೊರಬರಬೇಕಾದರೆ ಖಾನ್ ಸರ್‌ಗೆ ಮಂಪರು ಪರೀಕ್ಷೆ ಮಾಡಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಿನ್ಸ್ ಯಾದವ್ ಸಾವಿನ ಮಿಸ್ಟರಿ
ನೇಪಾಳದ ಬಿರಾಟ್‌ನಗರದಲ್ಲಿ ರೌಶನ್ ಆನಂದ್ ಸಹೋದರ ಪ್ರಿನ್ಸ್ ಯಾದವ್ ನಿಗೂಢವಾಗಿ ಸಾವನ್ನಪ್ಪಿದ್ದು, ಇದರ ಕುರಿತು ಎರಡು ವಿಭಿನ್ನ ವರದಿಗಳು ಕೇಳಿಬರುತ್ತಿವೆ.
ಮೊದಲ ವರದಿ ಪ್ರಕಾರ, ಖಾನ್ ಸರ್ ಕೋಚಿಂಗ್ ಸೆಂಟರ್ ಮೇಲಿನ ದಾಳಿ ಪ್ರಕರಣದಲ್ಲಿ ಪೊಲೀಸರು ತನ್ನನ್ನು ಬಂಧಿಸಬಹುದು ಎಂಬ ಭಯದಿಂದ ಪ್ರಿನ್ಸ್ ನೇಪಾಳಕ್ಕೆ ಓಡಿಹೋಗಿ ಅಲ್ಲಿನ ಹೋಟೆಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.
ಎರಡನೇ ವರದಿ ಪ್ರಕಾರ, ಜೂನ್ 3 ರಂದು ಪಾಟ್ನಾದಲ್ಲಿ ನಡೆದ ಗಲಾಟೆಯಲ್ಲಿ ಖಾನ್ ಸರ್ ಅವರ ಬಾಡಿಗಾರ್ಡ್ಸ್ ನಡೆಸಿದ ಗುಂಡಿನ ದಾಳಿಯಲ್ಲಿ ಪ್ರಿನ್ಸ್ ಗಾಯಗೊಂಡಿದ್ದ. ಖಾನ್ ಸರ್ ಕಡೆಯವರಿಂದ ಮತ್ತಷ್ಟು ಅಪಾಯ ಎದುರಾಗಬಹುದು ಎಂಬ ಭಯದಿಂದ ಆತನನ್ನು ನೇಪಾಳದ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದೂ ಹೇಳಲಾಗುತ್ತಿದೆ.
ಈ ನಡುವೆ ತಲೆಮರೆಸಿಕೊಂಡಿರುವ ಖಾನ್ ಸರ್ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದು, ಪ್ರಿನ್ಸ್ ಸಾವಿನ ಸುದ್ದಿ ನನಗೆ ದುಃಖ ತಂದಿದೆ. ರೌಶನ್ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದರೂ, ನಾನು ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಎಂದು ಹೇಳಿದ್ದಾರೆ.
ಪೊಲೀಸರ ನಡೆಗೆ ವಕೀಲರ ಆಕ್ಷೇಪ!
ಈ ತಿಂಗಳ ಆರಂಭದಲ್ಲಿ ಪಾಟ್ನಾದಲ್ಲಿರುವ ಖಾನ್ ಗ್ಲೋಬಲ್ ಕೋಚಿಂಗ್ ಇನ್ಸ್ಟಿಟ್ಯೂಟ್ ಮೇಲೆ ಕಲ್ಲು ತೂರಾಟ ನಡೆಸಿ ಧ್ವಂಸಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ರೌಶನ್ ಆನಂದ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು.
ಈ ಬಗ್ಗೆ ಮಾತನಾಡಿದ ರೌಶನ್ ಪರ ವಕೀಲ ನಿರಂಜನ್ ಕುಮಾರ್ ಸಿಂಗ್, ಖಾನ್ ಸರ್ ತಮ್ಮ ರಾಜಕೀಯ ಪ್ರಭಾವ ಬಳಸಿ ರೌಶನ್ ಇಮೇಜ್ ಹಾಳು ಮಾಡಲು ಸುಳ್ಳು ಕೇಸ್ ದಾಖಲಿಸಿದ್ದಾರೆ. ಘಟನಾ ಸ್ಥಳದಲ್ಲಿ ರೌಶನ್ ಇರಲೇ ಇಲ್ಲ. ಆದರೂ ಕೊಲೆ ಯತ್ನದ ಸುಳ್ಳು ಕೇಸ್ ಹಾಕಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನೀವು ಶಿಕ್ಷಕರೋ? ಅಪರಾಧಿಗಳೋ? ಕೋರ್ಟ್ ಗರಂ!
ರೌಶನ್ ಆನಂದ್ ಅವರಿಗೆ ಜಾಮೀನು ಮಂಜೂರು ಮಾಡಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇಬ್ಬರು ಶಿಕ್ಷಕರಿಗೆ ಸರಿಯಾಗಿಯೇ ಕ್ಲಾಸ್ ತಗೆದುಕೊಂಡಿದೆ. ನೀವಿಬ್ಬರೂ ಸಮಾಜಕ್ಕೆ ಬುದ್ಧಿ ಕಲಿಸುವ ಶಿಕ್ಷಕರು, ನಿಮ್ಮ ನಡವಳಿಕೆ ಹಫ್ತಾ ವಸೂಲಿ ಮಾಡುವ ಅಪರಾಧಿಗಳಂತೆ ಇರಬಾರದು. ಇನ್ಮುಂದೆ ಇಬ್ಬರೂ ಪಾಠಮಾಡುವತ್ತ ಗಮನ ಕೊಡಿ ಎಂದು ಕೋರ್ಟ್ ಇಬ್ಬರಿಗೂ ವಾರ್ನಿಂಗ್ ನೀಡಿದೆ, (ಏಜನ್ಸೀಸ್).