ಮೃತ ಉತಿರಾ ಹಾಗೂ ಆರೋಪಿ ಶರವಣನ್  
ದೇಶ

4 ಪವನ್​ ಚಿನ್ನದ ಮಾಂಗಲ್ಯ ಸರಕ್ಕಾಗಿ ಸಹೋದ್ಯೋಗಿ ನರ್ಸ್ ಭೀಕರ ಹತ್ಯೆ: ಪೊಲೀಸರ ಬಲೆಗೆ ಬಿದ್ದ ಕಿರಾತಕ​! Gold Chain

ಘಟನೆಯ ವಿವರಕ್ಕೆ ಬರುವುದಾದರೆ, ಈರೋಡ್ ಜಿಲ್ಲೆಯ ರಾಮನಾಥಪುರಂ ಜಿಲ್ಲೆಯವರಾದ 26 ವರ್ಷದ ಉತಿರಾ ಎಂಬಾಕೆ ತಿರುಪೂರು ಜಿಲ್ಲೆಯ ಪಲ್ಲಗೌಂಡಂಪಾಳಯಂನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 15ರಂದು ಆಕೆ ನಾಪತ್ತೆಯಾಗಿದ್ದರಿಂದ ಆಕೆಯ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಚೆನ್ನೈ: ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನಡೆದ ಸಹೋದ್ಯೋಗಿ ನರ್ಸ್ ಒಬ್ಬರ ಬರ್ಬರ ಹತ್ಯೆ ಮತ್ತು ಮಾಂಗಲ್ಯ ಸರ ( Gold Chain ) ಕಳವು ಪ್ರಕರಣವು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ಕೇವಲ ಒಂದು ಅಪರಾಧವಾಗಿ ಉಳಿಯದೆ, ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವಿನ ತೀವ್ರ ರಾಜಕೀಯ ವಾಗ್ಯುದ್ಧಕ್ಕೆ ಮತ್ತು ಕಾನೂನು-ಸುವ್ಯವಸ್ಥೆಯ ಗಂಭೀರ ಚರ್ಚೆಗೆ ಕಾರಣವಾಗಿದೆ.

ಘಟನೆಯ ವಿವರಕ್ಕೆ ಬರುವುದಾದರೆ, ಈರೋಡ್ ಜಿಲ್ಲೆಯ ರಾಮನಾಥಪುರಂ ಜಿಲ್ಲೆಯವರಾದ 26 ವರ್ಷದ ಉತಿರಾ ಎಂಬಾಕೆ ತಿರುಪೂರು ಜಿಲ್ಲೆಯ ಪಲ್ಲಗೌಂಡಂಪಾಳಯಂನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 15ರಂದು ಆಕೆ ನಾಪತ್ತೆಯಾಗಿದ್ದರಿಂದ ಆಕೆಯ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಅಕ್ಟೋಬರ್ 17ರಂದು ಪೆರುಂದುರೈನ ವಿಜಯಮಂಗಲಂ ಟೋಲ್ ಗೇಟ್ ಬಳಿ ಉತಿರಾ ಅವರ ಮೃತದೇಹ ಪತ್ತೆಯಾಗಿದೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಸಹೋದ್ಯೋಗಿಯಾಗಿರುವ 23 ವರ್ಷದ ಶರವಣನ್ ಎಂಬ ಪುರುಷ ನರ್ಸ್‌ನನ್ನು ಪೊಲೀಸರು ಅಕ್ಟೋಬರ್ 19ರಂದು ಯಶಸ್ವಿಯಾಗಿ ಬಂಧಿಸಿದ್ದಾರೆ. ಉತಿರಾ ಅವರ ಬಳಿಯಿದ್ದ ನಾಲ್ಕು ಪವನ್ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡುವ ದುರುದ್ದೇಶದಿಂದಲೇ ಆರೋಪಿ ಶರವಣನ್ ತನ್ನ ದ್ವಿಚಕ್ರ ವಾಹನದಲ್ಲಿ ಕರೆದೊಯ್ದು ಈ ಹೀನ ಕೃತ್ಯ ಎಸಗಿರುವುದಾಗಿ ಈರೋಡ್ ಜಿಲ್ಲಾ ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಆರೋಪಿಯಿಂದ ಕಳವು ಮಾಡಿದ್ದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ, ಈ ಘಟನೆಯು ತಮಿಳುನಾಡಿನ ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಕುರಿತು ತೀವ್ರ ರಾಜಕೀಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪೊಲೀಸ್ ಇಲಾಖೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಮುಖ್ಯಮಂತ್ರಿಗಳು ಕೇವಲ ಹೆಸರಿಗೆ ಮಾತ್ರ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇತರ ಇಲಾಖೆಗಳ ಜವಾಬ್ದಾರಿಯನ್ನು ಇತರ ಸಚಿವರಿಗೆ ಹಂಚಿದಂತೆ, ಪೊಲೀಸ್ ಇಲಾಖೆಯನ್ನೂ ಹೊರಗುತ್ತಿಗೆ ನೀಡಿದ್ದೀರಾ? ಎಂದು ನೇರ ಪ್ರಶ್ನೆಗಳನ್ನು ಎಸೆದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳ ನಿರ್ಲಕ್ಷ್ಯದಿಂದಲೇ ಇಂತಹ ಸಾವುಗಳು ಸಂಭವಿಸುತ್ತಿವೆ ಎಂದು ಕಿಡಿಕಾರಿದ್ದಾರೆ.

ಮುಂದುವರಿದು ಮಾತನಾಡಿದ ಸ್ಟಾಲಿನ್, ಶಿವಗಂಗಾ ಜಿಲ್ಲೆಯಲ್ಲಿ ಜಾಮೀನಿನ ಮೇಲೆ ಹೊರಬಂದ ವ್ಯಕ್ತಿಯೊಬ್ಬರ ಕೊಲೆ ಹಾಗೂ ಟಿವಿಕೆ (TVK) ಕಾರ್ಯಕರ್ತನಿಗೆ ನಂಟು ಹೊಂದಿರುವ ಸುಮಾರು 135 ಕೆಜಿ ಮೆಥಾಂಫೆಟಮಿನ್ (Methamphetamine) ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಗಳನ್ನು ಉಲ್ಲೇಖಿಸಿ ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿದ್ದಾರೆ. ಈ ಘಟನೆಗಳು ಮಹಿಳೆಯರ ಸುರಕ್ಷತೆ, ಜಾಮೀನು ಪಡೆದವರ ಮೇಲಿನ ನಿಗಾ ಹಾಗೂ ಮಾದಕ ದ್ರವ್ಯ ಹಾವಳಿಯ ಬಗ್ಗೆ ಆಡಳಿತ ಸರ್ಕಾರದ ಗಂಭೀರ ಲೋಪಗಳನ್ನು ಬಹಿರಂಗಪಡಿಸಿವೆ ಎಂದು ಆರೋಪಿಸಿದ್ದಾರೆ.

2026ರ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಡ್ರಗ್ಸ್ ಪಿಡುಗು ಪ್ರಮುಖ ಚುನಾವಣಾ ವಿಷಯಗಳಾಗಿದ್ದವು. ಅದರ ವಿರುದ್ಧ ಹೋರಾಡಿ ನಟ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸದ್ಯ ಆರೋಪಿಗಳ ಜತೆಗಿನ ಟಿವಿಕೆ ನಾಯಕರ ಫೋಟೋಗಳು ವೈರಲ್ ಆಗುತ್ತಿದ್ದು, ಡ್ರಗ್ಸ್ ಕಳ್ಳಸಾಗಣೆ ಆರೋಪ ಹೊತ್ತ ಬೂಬಾಲನ್‌ ಎಂಬುವರನ್ನು ಪಕ್ಷದಿಂದ ಉಚ್ಛಾಟಿಸಿದೆ. ಆದಾಗ್ಯೂ, ಇತ್ತೀಚೆಗೆ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ವಿಜಯ್, ತಮ್ಮ ಸರ್ಕಾರ ಬಂದು ಕೆಲವೇ ತಿಂಗಳುಗಳಾಗಿವೆ. ಹೀಗಾಗಿ, ಇಂತಹ ಅಪರಾಧಗಳನ್ನು ತಳಕುಹಾಕಲಾಗದು ಎಂದಿದ್ದಾರೆ. ಅಲ್ಲದೆ, ಹಿಂದಿನ ಡಿಎಂಕೆ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂದು ಬೊಟ್ಟುಮಾಡುತ್ತಾ, ಅಪರಾಧ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ, (ಏಜೆನ್ಸೀಸ್​).