ನನ್ನ ಟಾಕ್ಸಿಕ್​​ ಸಿನಿಮಾ ಇಷ್ಟಪಡದವರಿಗೆ... ತೆಲುಗು ನೆಲದಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಸ್ಫೋಟಕ ಹೇಳಿಕೆ! Actor Yash

ಅಂದಹಾಗೆ, ನಟ ಯಶ್​ ಅವರು ನೀಡಿರುವ ದಿಟ್ಟ ಹೇಳಿಕೆ ಈಗ ಗಾಂಧಿನಗರದಿಂದ ಮುಂಬೈವರೆಗೂ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಯಶ್​ ಹೇಳಿದ್ದೇನು? ಟಾಕ್ಸಿಕ್​ ಸಿನಿಮಾ ನೋಡಿ ಟೀಕಿಸಿದವರ ಬಗ್ಗೆ ಏನಂದ್ರು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
Actor Yash
ನಟ ಯಶ್​
Published on: 

ಹೈದರಾಬಾದ್​: ಸಿನಿಮಾರಂಗದಲ್ಲಿ ಸೋಲು-ಗೆಲುವುಗಳು ಸಾಮಾನ್ಯವಾದರೂ, ನಟ ಯಶ್ ಅವರಂತಹ ಸ್ಟಾರ್‌ ನಟರ ಸಿನಿಮಾ ಸೋತಾಗ ಅಥವಾ ಮಿಶ್ರ ಪ್ರತಿಕ್ರಿಯೆ ಪಡೆದಾಗ ಅದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತದೆ. ಅದರಲ್ಲೂ ಒಂದು ಸಿನಿಮಾಗೆ ನಾಲ್ಕು ವರ್ಷಗಳನ್ನು ವ್ಯಯಿಸಿ, ಜನರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿ, ಕೊನೆಗೆ ಸಿನಿಮಾ ಬಿಡುಗಡೆಯಾದಾಗ ಬಾಕ್ಸ್​ ಆಫೀಸ್​ನಲ್ಲಿ ಸೋಲುಂಡರೆ ಆ ನಟನ ಅಭಿಮಾನಿಗಳಿಗೆ ಅದಕ್ಕಿಂತ ದೊಡ್ಡ ನೋವಿಲ್ಲ. ಇನ್ನೂ ಸಿನಿಮಾವನ್ನೇ ಉಸಿರಾಡುವ ನಟನಿಗೆ ತನ್ನ ಸಿನಿಮಾ ಸೋತಾಗ ಆಗುವ ಬೇಸರಕ್ಕೆ ಎಲ್ಲೆಯೇ ಇಲ್ಲ. ಆದರೆ, ಇದೆಲ್ಲವನ್ನು ನುಂಗಿ 'ಟಾಕ್ಸಿಕ್' ಸಿನಿಮಾ ಸೋಲಿನ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಕೊನೆಗೂ ಮೌನ ಮುರಿದಿದ್ದಾರೆ.

ಅಂದಹಾಗೆ, ನಟ ಯಶ್​ ಅವರು ನೀಡಿರುವ ದಿಟ್ಟ ಹೇಳಿಕೆ ಈಗ ಗಾಂಧಿನಗರದಿಂದ ಮುಂಬೈವರೆಗೂ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಯಶ್​ ಹೇಳಿದ್ದೇನು? ಟಾಕ್ಸಿಕ್​ ಸಿನಿಮಾ ನೋಡಿ ಟೀಕಿಸಿದವರ ಬಗ್ಗೆ ಏನಂದ್ರು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

Also Read
ಬಿಷ್ಣೋಯ್ ಗ್ಯಾಂಗ್​ಗೆ ಸಲ್ಲು ಒಂದು ನೆಪ ಮಾತ್ರ... ಸೆಲೆಬ್ರಿಟಿಗಳ ಮೇಲಿನ ದಾಳಿಗಳ ಹಿಂದಿದೆ ಈ ಭಯಾನಕ ಗೇಮ್‌ಪ್ಲ್ಯಾನ್! Lawrence Bishnoi Gang
Actor Yash

ಭಾರತೀಯ ಚಲನಚಿತ್ರ ರಂಗದಲ್ಲಿ ನಟರ ವೈಯಕ್ತಿಕ ಮಾತುಗಳು ಹಾಗೂ ಚಿತ್ರಗಳ ಬಾಕ್ಸ್‌ಆಫೀಸ್ ಫಲಿತಾಂಶಗಳ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಅಭಿಮಾನಿಗಳು ಅತ್ಯುತ್ಸಾಹದಿಂದ ಕಾಯುತ್ತಿದ್ದ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿದ್ದಾಗ ಅಥವಾ ನೆಗೆಟಿವ್ ಟಾಕ್ ಎದುರಿಸಿದಾಗ, ನಟರು ಹೇಗೆ ಸ್ಪಂದಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಈ ಹಿನ್ನೆಲೆಯಲ್ಲಿ, ಹೈದರಾಬಾದ್​ನಲ್ಲಿ ನಡೆದ ತಮ್ಮ ಮುಂಬರುವ ಬಹುನಿರೀಕ್ಷಿತ ರಾಮಾಯಣ ಚಿತ್ರದ ಸಮಾರಂಭವೊಂದರಲ್ಲಿ ನಟ ಯಶ್ ಅವರು 'ಟಾಕ್ಸಿಕ್' ಚಿತ್ರದ ಸೋಲು ಹಾಗೂ ಅಂದುಕೊಂಡ ಫಲಿತಾಂಶ ಸಿಗದ ಕುರಿತು ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ.

'ಟಾಕ್ಸಿಕ್' ಸಿನಿಮಾದ ಸೋಲು ಮತ್ತು ಎದುರಾದ ಟೀಕೆಗಳ ಕುರಿತು ಮುಕ್ತವಾಗಿ ಮಾತನಾಡಿದ ಯಶ್, "ನನ್ನ ಚಿತ್ರಕ್ಕೆ ನಿಮ್ಮ ಬೆಂಬಲ ಕೋರಿ ನಾನು ಇತ್ತೀಚೆಗೆ ಇಲ್ಲಿಗೆ ಬಂದಿದ್ದೆ. ಸಿನಿಮಾವನ್ನು ಇಷ್ಟಪಟ್ಟವರಿಗೆ ಹಾಗೂ ಇಷ್ಟಪಡದವರಿಗೂ ಧನ್ಯವಾದಗಳು. ನೀವು ನನ್ನ ಮೇಲಿನ ಪ್ರೀತಿಯಿಂದಲೇ ಸಿನಿಮಾ ನೋಡಲು ಬಂದಿದ್ದೀರಿ, ಅದೇ ನನಗೆ ಸಾಕು" ಎಂದು ಧೈರ್ಯದ ಮಾತುಗಳನ್ನಾಡಿದ್ದಾರೆ. ಯಶ್​ ಅವರ ಈ ತೂಕದ ಹಾಗೂ ನಮ್ರತೆಯ ಮಾತುಗಳು ವಿಮರ್ಶಕರ ಬಾಯಿ ಮುಚ್ಚಿಸುವ ಜತೆಗೆ ಅಭಿಮಾನಿಗಳ ಮನಗೆದ್ದಿದೆ.

ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ನಿರ್ಮಾಪಕ ದಿಲ್ ರಾಜು ಅವರು, 'ಟಾಕ್ಸಿಕ್' ಚಿತ್ರಕ್ಕಾಗಿ ಯಶ್ ಕಳೆದ ನಾಲ್ಕು ವರ್ಷಗಳಿಂದ ಪಟ್ಟ ಶ್ರಮವನ್ನು ಮುಕ್ತಕಂಠದಿಂದ ಕೊಂಡಾಡಿದರು. ಚಿತ್ರದ ಅಂತಿಮ ಫಲಿತಾಂಶ ಏನೇ ಇರಲಿ, ಒಬ್ಬ ಕಲಾವಿದ ಅನುಭವಿಸುವ ಕಷ್ಟ ಮತ್ತು ಸಮರ್ಪಣಾ ಭಾವವನ್ನು ಅವರು ಶ್ಲಾಘಿಸಿದರು. ಅಲ್ಲದೆ, ಮುಂಬರುವ 'ರಾಮಾಯಣ' ಚಿತ್ರದ ಮೂಲಕ ಯಶ್‌ಗೆ ಇನ್ನಷ್ಟು ದೊಡ್ಡ ಮಟ್ಟದ ಖ್ಯಾತಿ ಮತ್ತು ಯಶಸ್ಸು ಸಿಗಲಿ ಎಂದು ಹಾರೈಸಿದರು. ನಿರ್ಮಾಪಕರ ಈ ಮಾತುಗಳು ಪ್ರಸ್ತುತ ಸಿನಿರಂಗದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.

Also Read
ಕ್ಷಮೆ ಕೇಳದಿದ್ದರೆ ನೆಮ್ಮದಿಯಾಗಿ ಬದುಕಲು ಬಿಡಲ್ಲ! ಟೈಗರ್​ ಶ್ರಾಫ್​​ ದಾಳಿ ಬೆನ್ನಲ್ಲೇ ಸಲ್ಮಾನ್‌ಗೆ ಬಿಷ್ಣೋಯ್ ಗ್ಯಾಂಗ್ ಬೆದರಿಕೆ! Tiger Shroff
Actor Yash

ಯಶ್ ಅವರ ಈ ಪ್ರಾಮಾಣಿಕ ಹಾಗೂ ಪಾಸಿಟಿವ್​ ಪ್ರತಿಕ್ರಿಯೆಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯಲ್ಲಿ ಸ್ಪಂದಿಸುತ್ತಿದ್ದು, ರಾಕಿಂಗ್ ಸ್ಟಾರ್ ಬೆಂಬಲಕ್ಕೆ ನಿಂತಿದ್ದಾರೆ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಅವರ ಗುಣವನ್ನು ಕೊಂಡಾಡುತ್ತಿದ್ದಾರೆ. ಇದರೊಂದಿಗೆ ಸದ್ಯ ಎಲ್ಲರ ಚಿತ್ತ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ ಬಹುಕೋಟಿ ವೆಚ್ಚದ ಬ್ರಹ್ಮಾಂಡ ಚಿತ್ರವಾದ 'ರಾಮಾಯಣ - ಭಾಗ 1' (Ramayana - Part 1) ಮೇಲಿದೆ.

ಈ ಪ್ರತಿಷ್ಠಿತ ಚಿತ್ರದಲ್ಲಿ ಯಶ್ ಅವರು ಪೌರಾಣಿಕ ಪ್ರಮುಖ ಪಾತ್ರವಾದ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಣಬೀರ್ ಕಪೂರ್ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸುತ್ತಿರುವ ಈ ದೃಶ್ಯಕಾವ್ಯವು ನವೆಂಬರ್ 5 ರಂದು ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗಿದೆ. 'ಟಾಕ್ಸಿಕ್' ಅನುಭವದ ಬಳಿಕ ಯಶ್ ಈ ದೊಡ್ಡ ಪ್ರಾಜೆಕ್ಟ್‌ನಲ್ಲಿ ಯಾವ ರೀತಿಯ ಹೊಸ ಮ್ಯಾಜಿಕ್ ಮಾಡಲಿದ್ದಾರೆ ಎಂಬ ಕಾತರ ಪ್ರೇಕ್ಷಕರಲ್ಲಿ ದುಪ್ಪಟ್ಟಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net