

ಮುಂಬೈ: ಮಾಯಾನಗರಿ ಎಂದೇ ಜನಜನಿತವಾಗಿರುವ ಮುಂಬೈನಲ್ಲಿ ಮತ್ತೆ ಭೂಗತ ಜಗತ್ತು ಸಕ್ರಿಯವಾಗಿದೆಯಾ? ಗಲ್ಲಿ-ಗಲ್ಲಿಗಳಲ್ಲಿ ಗ್ಯಾಂಗ್ಗಳ ಆರ್ಭಟ ಮರುಕಳಿಸಲಿದೆಯಾ? ಎಂಬ ಆತಂಕ ಮುಂಬೈ ನಿವಾಸಿಗಳಲ್ಲಿ ಮನೆಮಾಡಿದೆ. ನಿನ್ನೆ (ಭಾನುವಾರ, ಅ.18) ಮುಂಬೈನ ಜುಹು ಪ್ರದೇಶದಲ್ಲಿ ನಡೆದಿರುವ ಘಟನೆ ಇಡೀ ಬಾಲಿವುಡ್ ಅನ್ನೇ ಬೆಚ್ಚಿಬೀಳಿಸಿದೆ.
ಬಾಲಿವುಡ್‌ನ ಆಕ್ಷನ್ ಹೀರೋ, ‘ಬಾಘಿ’ ಖ್ಯಾತಿಯ ಟೈಗರ್ ಶ್ರಾಫ್ ಕಾರಿನ ಮೇಲೆ ಅಪರಿಚಿತರು ಏಕಾಏಕಿ ಗುಂಡಿನ ಮಳೆಗರೆದಿದ್ದಾರೆ. ಈ ಭೀಕರ ದಾಳಿಯ ಬೆನ್ನಲ್ಲೇ, ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಸಹಚರ ಸಲ್ಮಾನ್ ಖಾನ್‌ಗೆ ಬಹಿರಂಗವಾಗಿ ಜೀವಬೆದರಿಕೆ ಹಾಕಿದ್ದು, ಬಾಲಿವುಡ್‌ನಲ್ಲಿ ತಲ್ಲಣ ಸೃಷ್ಟಿಸಿದೆ.
ಭಾನುವಾರ ಸಂಜೆ ಮುಂಬೈನ ಜುಹುವಿನಲ್ಲಿರುವ ಫುಟ್‌ಬಾಲ್ ಕ್ಲಬ್‌ನಲ್ಲಿ ಆಟ ಮುಗಿಸಿ ಟೈಗರ್ ಶ್ರಾಫ್, ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಅವರ ಕಾರನ್ನು ಗುರಿಯಾಗಿಸಿಕೊಂಡು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡುಗಳು ಕಾರಿನ ಗಾಜುಗಳನ್ನು ಸೀಳಿ ಒಳನುಗ್ಗಿದ್ದು, ಗನ್ ಪೌಡರ್ ಹಾಗೂ ಗಾಜಿನ ಚೂರುಗಳು ಸಿಡಿದು ನಟ ಟೈಗರ್ ಶ್ರಾಫ್ ಅವರ ಬಲಗೈ, ಭುಜ ಹಾಗೂ ಎದೆಯ ಭಾಗಕ್ಕೆ ತರಚಿದ ಗಾಯಗಳಾಗಿವೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ, ಅವರ ಕಾರಿನ ಚಾಲಕ ಹಾಗೂ ಪಕ್ಕದಲ್ಲೇ ಇದ್ದ ಆಟೋರಿಕ್ಷಾ ಚಾಲಕನಿಗೆ ಗುಂಡೇಟು ತಗುಲಿ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾರ್ವಜನಿಕರು ಓಡಾಡುವ ಜನನಿಬಿಡ ರಸ್ತೆಯಲ್ಲೇ ನಡೆದ ಈ ಫೈರಿಂಗ್ ಇಡೀ ಮುಂಬೈ ಜನತೆಯನ್ನು ಬೆಚ್ಚಿಬೀಳಿಸಿದೆ.
ಗುಂಡಿನ ದಾಳಿ ನಡೆಸಿದ ತಕ್ಷಣ ದುಷ್ಕರ್ಮಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದರು. ಕೂಡಲೇ ಅಲರ್ಟ್ ಆದ ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ (ATF) ಮತ್ತು ರಾಜಸ್ಥಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಮುಂಬೈನಿಂದ ದೆಹಲಿಗೆ ರೈಲಿನಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಮೂವರು ಶೂಟರ್‌ಗಳನ್ನು ರಾಜಸ್ಥಾನದ ಕೋಟಾ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಮುಂಬೈ ಕ್ರೈಮ್ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ.
ಟೈಗರ್ ಶ್ರಾಫ್ ಮೇಲಿನ ದಾಳಿಯ ಬೆನ್ನಲ್ಲೇ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್‌ನ ಆಪ್ತ ಅನಿಲ್ ಪಂಡಿತ್ ಎಂಬಾತನ ಆಡಿಯೋ ಕ್ಲಿಪ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಡಿಯೋದಲ್ಲಿ ಆತ, "ಸಲ್ಮಾನ್ ಖಾನ್ ಬಹಿರಂಗವಾಗಿ ಕ್ಷಮೆ ಕೇಳುವವರೆಗೂ ನಾವು ಅವರನ್ನು ಬಿಡುವುದಿಲ್ಲ, ನೆಮ್ಮದಿಯಿಂದ ಬದುಕಲು ಸಹ ಬಿಡುವುದಿಲ್ಲ. ನಮ್ಮ ಸಮಾಜಕ್ಕೆ ಅವರು ಕ್ಷಮೆ ಕೇಳಿದರೆ ನಮ್ಮದೇನೂ ದ್ವೇಷವಿಲ್ಲ. ಆದರೆ ಕ್ಷಮೆ ಕೇಳದಿದ್ದರೆ, ಅವರೊಂದಿಗೆ ಗುರುತಿಸಿಕೊಂಡಿರುವ, ಅವರ ಜೊತೆ ಕೆಲಸ ಮಾಡುವ ಯಾರೊಬ್ಬರನ್ನೂ ನಾವು ಸುಮ್ಮನೆ ಬಿಡಲ್ಲ" ಎಂದು ಎಚ್ಚರಿಕೆ ನೀಡಿದ್ದಾನೆ. 1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ವಿರುದ್ಧ ಇಂದಿಗೂ ಸೇಡಿನ ಬೆಂಕಿ ಕಾರುತ್ತಲೇ ಇದೆ.
ಈ ಆಡಿಯೋದಲ್ಲಿ ಅನಿಲ್ ಪಂಡಿತ್, 2020ರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನು ಉಲ್ಲೇಖಿಸಿ ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾನೆ. "ಬಾಲಿವುಡ್‌ನ ಈ ಪ್ರಭಾವಿಗಳು ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೊಂದಾಗ ನಿಮ್ಮ ಆಡಳಿತ ವ್ಯವಸ್ಥೆ ಮತ್ತು ಕಾನೂನು ಎಲ್ಲಿ ಮಲಗಿತ್ತು? ಆಗ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಆದರೆ ನನ್ನ ಅಣ್ಣ ಲಾರೆನ್ಸ್ ಬಿಷ್ಣೋಯ್ ಈ ಅನ್ಯಾಯದ ವಿರುದ್ಧ ನಿಂತಾಗ ಇಡೀ ಸಿಸ್ಟಮ್ ನಮ್ಮ ಬೆನ್ನಿಗೆ ಬಿದ್ದಿದೆ ಎಂದು ಆಕ್ರೋಶ ಹೊರಹಾಕಿದ್ದಾನೆ.
ಅಷ್ಟೇ ಅಲ್ಲದೆ, ಬಾಲಿವುಡ್ ಮಂದಿಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ಕೂತಿರುವ ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಜೊತೆ ನೇರ ಕನೆಕ್ಷನ್ ಇದೆ ಎಂದೂ ಗಂಭೀರ ಆರೋಪ ಮಾಡಿದ್ದಾನೆ. ಬಾಲಿವುಡ್‌ನವರು ದಾವೂದ್‌ನ ಕಪ್ಪುಹಣದಿಂದ ಸಿನಿಮಾ ಮಾಡ್ತಾರೆ, ಅವನಿಗೆ ಹಣ ಕಳಿಸುತ್ತಾರೆ. ಅದೇ ಹಣ ನಮ್ಮ ದೇಶದಲ್ಲಿ ಡ್ರಗ್ಸ್ ದಂಧೆ ನಡೆಸಲು ಮತ್ತು ಬಾಂಬ್ ಬ್ಲಾಸ್ಟ್‌ಗಳಿಗೆ ಬಳಕೆಯಾಗುತ್ತಿದೆ. ನಮ್ಮ ಹೋರಾಟ ಇಂತಹ ದೇಶದ್ರೋಹಿಗಳ ವಿರುದ್ಧ ಎಂದು ಅನಿಲ್ ಪಂಡಿತ್ ಗುಡುಗಿದ್ದಾನೆ, (ಏಜೆನ್ಸೀಸ್).