ರೋಹಿತ್, ರಣವೀರ್ ಬೆನ್ನಲ್ಲೇ ಈಗ ಟೈಗರ್... ಸಲ್ಲು ನಂಟು ಬಾಲಿವುಡ್​ಗೆ ಬಿಷ್ಣೋಯ್ ಗ್ಯಾಂಗ್​ ಬಿಡಿಸಲಾಗದ ಗಂಟು! Lawrence Bishnoi Gang

ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಮೇಲೆ ನಡೆದ ಗುಂಡಿನ ದಾಳಿ ಹಾಗೂ ನಟ ರಣವೀರ್ ಸಿಂಗ್ ಅವರಿಗೆ ಹಣದ ಬೇಡಿಕೆ ಹಾಗೂ ಬೆದರಿಕೆ ಕರೆ ಬಂದ ಕೇವಲ ಎಂಟೇ ತಿಂಗಳಲ್ಲಿ ಈ ಹೊಸ ದಾಳಿ ಸಂಭವಿಸಿದೆ. ಆದರೆ, ಈ ಎಲ್ಲ ಘಟನೆಗಳ ಹಿಂದಿನ ಮೂಲ ಬೇರು ಮಾತ್ರ ಒಂದೇ. ಅದುವೇ ನಟ ಸಲ್ಮಾನ್ ಖಾನ್.
Lawrence Bishnoi Gang
ಗುಂಡಿನ ದಾಳಿಯಿಂದ ಬಾಲಿವುಡ್​ ನಟ ಟೈಗರ್ ಶ್ರಾಫ್ ಬಚಾವ್​
Published on: 

ಮುಂಬೈ: ನಿನ್ನೆ ಸಂಜೆ (ಅ.18) ನಟ ಟೈಗರ್​ ಶ್ರಾಫ್​ ( Tiger Shroff ) ಮೇಲೆ ನಡೆದ ಗುಂಡಿನ ದಾಳಿ ಬೆನ್ನಲ್ಲೇ ಬಾಲಿವುಡ್ ಅಂಗಳದಲ್ಲಿ ಮತ್ತೊಮ್ಮೆ ಅಂಧಕಾರದ ಯುಗದ ನೆನಪುಗಳು ಮರುಕಳಿಸುತ್ತಿವೆ. ಬೆದರಿಕೆ ಕರೆಗಳು, ಹಣದ ಬೇಡಿಕೆಗಳು, ಮನೆಗಳ ಮುಂದೆ ಮಾರ್ದನಿಸುವ ಗುಂಡಿನ ಸದ್ದು ಹಾಗೂ ಜೀವಭಯದಲ್ಲೇ ಬದುಕು ದೂಡುತ್ತಿರುವ ಸೆಲೆಬ್ರಿಟಿಗಳು... ಇವೆಲ್ಲವೂ 1980 ಮತ್ತು 90ರ ದಶಕದ ಕರಾಳ ಮುಂಬೈ ಭೂಗತ ಲೋಕವನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತಿವೆ. ಅಂದು ಭೂಗತ ಪಾತಕಿಗಳು ಭಯ ಮತ್ತು ಹಿಂಸೆಯ ಮೂಲಕ ಇಡೀ ಹಿಂದಿ ಚಿತ್ರರಂಗವನ್ನೇ ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದರು. ಆದರೆ ಇಂದು, ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ( Lawrence Bishnoi Gang ) ನಿರಂತರವಾಗಿ ಎದುರಾಗುತ್ತಿರುವ ಬೆದರಿಕೆಗಳು ಮತ್ತು ಭೀಕರ ದಾಳಿಗಳು ಬಾಲಿವುಡ್‌ಗೆ ಅದೇ ಹಳೆಯ ಆತಂಕಕಾರಿ ದಿನಗಳ ಭೀತಿಯನ್ನು ಮರಳಿ ತಂದಿವೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಮೇಲೆ ನಡೆದ ಗುಂಡಿನ ದಾಳಿ ಹಾಗೂ ನಟ ರಣವೀರ್ ಸಿಂಗ್ ಅವರಿಗೆ ಹಣದ ಬೇಡಿಕೆ ಹಾಗೂ ಬೆದರಿಕೆ ಕರೆ ಬಂದ ಕೇವಲ ಎಂಟೇ ತಿಂಗಳಲ್ಲಿ ಈ ಹೊಸ ದಾಳಿ ಸಂಭವಿಸಿದೆ. ಆದರೆ, ಈ ಎಲ್ಲ ಘಟನೆಗಳ ಹಿಂದಿನ ಮೂಲ ಬೇರು ಮಾತ್ರ ಒಂದೇ. ಅದುವೇ ನಟ ಸಲ್ಮಾನ್ ಖಾನ್.

ನಿಲ್ಲದ ಸರಣಿ ದಾಳಿಗಳು

ಸಲ್ಮಾನ್ ಖಾನ್ ಅವರನ್ನು ಕಾಡುತ್ತಿರುವ ಬೆದರಿಕೆಗಳ ಸರಣಿ ನಿಲ್ಲುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಎಲ್ಲವೂ ಸರಿಯಾಯಿತು ಅನ್ನುವಷ್ಟರಲ್ಲಿ ಒಂದಲ್ಲ ಒಂದು ದಾಳಿ ನಡೆಯುತ್ತಲೇ ಬರುತ್ತಿದೆ. 1998ರ ಕೃಷ್ಣಮೃಗ (ಬ್ಲಾಕ್‌ಬಕ್) ಬೇಟೆ ಪ್ರಕರಣದಿಂದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಲ್ಮಾನ್ ಖಾನ್ ನಿರಂತರ ವೈಷಮ್ಯವನ್ನು ಎದುರಿಸುತ್ತ ಬಂದಿದ್ದಾರೆ. ಏಕೆಂದರೆ, ಕೃಷ್ಣಮೃಗವು ಬಿಷ್ಣೋಯ್​ ಸಮುದಾಯಕ್ಕೆ ದೇವರ ಸ್ವರೂಪ. ಅಂತಹ ಪ್ರಾಣಿಯನ್ನು ಸಲ್ಲು ಬೇಟೆಯಾಡಿದ್ದು, ಬಿಷ್ಣೋಯ್​ ಗ್ಯಾಂಗ್​ನ ಕಣ್ಣು ಕೆಂಪಾಗಿಸಿದ್ದು, ಪ್ರತೀಕಾರದ ಹೆಮ್ಮರವಾಗಿ ಬೆಳೆದಿದೆ. 2024ರ ಏಪ್ರಿಲ್‌ನಲ್ಲಿ ಸಲ್ಲು ಅವರ ಬಾಂದ್ರಾ ನಿವಾಸದ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೆ, ಸಲ್ಮಾನ್ ಅವರ ತಂದೆ, ಹಿರಿಯ ಲೇಖಕ ಸಲೀಮ್ ಖಾನ್ ಅವರಿಗೂ ಕೂಡ ಬೆದರಿಕೆಗಳು ಬಂದಿದ್ದು, ಇಡೀ ಕುಟುಂಬದ ಭದ್ರತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.

Also Read
ಕೊನೇ ಕ್ಷಣದಲ್ಲಿ ನಡೆದ ಪವಾಡ: ಇದು ನಡೆಯದೇ ಹೋಗಿದ್ರೆ ಗುಂಡಿನ ದಾಳಿಗೆ ಬಲಿಯಾಗ್ತಿದ್ರು ನಟ ಟೈಗರ್ ಶ್ರಾಫ್! Tiger Shroff
Lawrence Bishnoi Gang

ಈ ಬೆದರಿಕೆಗಳು ಕೇವಲ ಸಲ್ಲುಗೆ ಮಾತ್ರ ಸೀಮಿತವಾಗದೇ ಅವರ ಆಪ್ತ ವಲಯದಲ್ಲಿರುವವರಿಗೂ ವ್ಯಾಪಿಸಿವೆ. 2023ರ ನವೆಂಬರ್‌ನಲ್ಲಿ ಕೆನಡಾದಲ್ಲಿರುವ ಪಂಜಾಬಿ ನಟ-ಗಾಯಕ ಗಿಪ್ಪಿ ಗ್ರೆವಾಲ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ನಂಟಿದೆ ಎಂದು ಹೇಳಿಕೊಂಡ ಸಂದೇಶವೊಂದರಲ್ಲಿ, ಸಲ್ಮಾನ್ ಖಾನ್ ಅವರೊಂದಿಗಿನ ಒಡನಾಟವೇ ಈ ದಾಳಿಗೆ ಕಾರಣ ಎಂದು ಉಲ್ಲೇಖಿಸಲಾಗಿತ್ತು. ಈ ದಾಳಿ ಬಳಿಕ ಗಿಪ್ಪಿ ಗ್ರೆವಾಲ್ ಅವರು ತಮಗೆ ಸಲ್ಮಾನ್ ಖಾನ್ ಜತೆ ಯಾವುದೇ ವಿಶೇಷ ನಂಟಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇನ್ನೂ ಅಕ್ಟೋಬರ್ 12, 2024ರಂದು ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಸಲ್ಮಾನ್ ಖಾನ್ ಅವರ ಅತ್ಯಾಪ್ತ ಬಾಬಾ ಸಿದ್ದಿಕ್ ಮುಂಬೈನಲ್ಲಿ ಗುಂಡೇಟಿಗೆ ಬಲಿಯಾಗಿದ್ದು ಬಿಷ್ಣೋಯ್​ ಗ್ಯಾಂಗ್​ ಮೇಲಿನ ಭಯವನ್ನು ಇನ್ನಷ್ಟು ಹೆಚ್ಚು ಮಾಡಿತು. ಈ ಹತ್ಯೆಯ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದ್ದು, ಬಿಡುಗಡೆಯಾದ ಸಂದೇಶದಲ್ಲಿ ಬಾಬಾ ಸಿದ್ದಿಕ್‌ಗೆ ಸಲ್ಮಾನ್ ಖಾನ್ ಜತೆ ಇದ್ದ ನಂಟೇ ಕಾರಣ ಎಂದು ತಿಳಿಸಲಾಗಿತ್ತು. ಈ ಹತ್ಯೆಯು ಬಾಲಿವುಡ್‌ನಾದ್ಯಂತ ತೀವ್ರ ಆಘಾತವನ್ನುಂಟುಮಾಡಿತು. ಇದಾದ ಬಳಿಕ ನಟನ ಆಪ್ತ ವಲಯದಲ್ಲಿ ಆತಂಕವೂ ಹೆಚ್ಚಾಯಿತು. ಹೀಗೆ ಕಾಲ ಕಳೆದಂತೆ ಸರಣಿ ಗುಂಡಿನ ದಾಳಿಗಳ ಪಟ್ಟಿಯು ಬೆಳೆಯುತ್ತಿದೆ.

ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ-ದಾಳಿಗಳನ್ನು ಎದುರಿಸಿದ ಸೆಲೆಬ್ರಿಟಿಗಳು

ಮುನಾವರ್ ಫರೂಕಿ: ಈ ಸ್ಟ್ಯಾಂಡಪ್​ ಕಾಮಿಡಿಯನ್​ಗೆ ಅಕ್ಟೋಬರ್ 2024ರಲ್ಲಿ ಜೀವ ಬೆದರಿಕೆಗಳು ಬಂದಿದ್ದವು. ಇದರಿಂದ ಎಚ್ಚೆತ್ತ ಮುಂಬೈ ಪೊಲೀಸರು ಫರೂಕಿಗೆ ತಕ್ಷಣವೇ ಭದ್ರತೆ ಕಲ್ಪಿಸಿದ್ದರು. ದೆಹಲಿಯಲ್ಲಿ ಅವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿಯೂ ಲಭ್ಯವಾಗಿತ್ತು.

ಕಪಿಲ್ ಶರ್ಮಾ: ಕೆನಡಾದಲ್ಲಿರುವ ಈ ಖ್ಯಾತ ಹಾಸ್ಯ ಕಲಾವಿದನ ಕೆಫೆಯ ಮೇಲೆ 2025ರಲ್ಲಿ ಮೂರು ಬಾರಿ ಗುಂಡಿನ ದಾಳಿ ನಡೆದಿತ್ತು. ಈ ಕೆಫೆಯ ಉದ್ಘಾಟನಾ ಸಮಾರಂಭಕ್ಕೆ ಸಲ್ಮಾನ್ ಖಾನ್ ಅತಿಥಿಯಾಗಿ ಆಗಮಿಸಿದ್ದೇ ಈ ದಾಳಿಗೆ ಕಾರಣ ಎಂದು ಬಿಷ್ಣೋಯ್ ಗ್ಯಾಂಗ್ ನಂಟು ಹೊಂದಿರುವ ಸಂದೇಶಗಳಲ್ಲಿ ತಿಳಿಸಲಾಗಿತ್ತು.

ಆಮೀರ್ ಖಾನ್: ಜುಲೈ 2026ರಲ್ಲಿ ನಟ ಆಮೀರ್ ಖಾನ್​ಗೆ ಸಾಮಾಜಿಕ ಜಾಲತಾಣಗಳು ಹಾಗೂ ಆಡಿಯೋ ಸಂದೇಶಗಳ ಮೂಲಕ ಬೆದರಿಕೆಗಳು ಬಂದಿದ್ದವು. ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ನಂಟು ಹೊಂದಿದ್ದೇವೆ ಎಂದು ಹೇಳಿಕೊಂಡ ವ್ಯಕ್ತಿಗಳು ಅವರ ವೈಯಕ್ತಿಕ ಜೀವನದ ಬಗ್ಗೆಯೂ ಆರೋಪಗಳನ್ನು ಮಾಡಿ ಬೆದರಿಕೆ ಹಾಕಿದ್ದರು. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದರು.

ರಣವೀರ್ ಸಿಂಗ್: ಫೆಬ್ರವರಿ 2026ರಲ್ಲಿ ನಟ ರಣವೀರ್ ಸಿಂಗ್ ಅವರಿಗೆ 10 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ವಾಯ್ಸ್ ಮೆಸೇಜ್ (ಧ್ವನಿ ಸಂದೇಶ) ಮೂಲಕ ಬೆದರಿಕೆ ಹಾಕಲಾಗಿತ್ತು. ಅಲ್ಲದೆ, ಅವರ ಹಾಗೂ ಅವರ ಸಿಬ್ಬಂದಿಯ ಸುರಕ್ಷತೆಗೆ ಧಕ್ಕೆ ತರುವುದಾಗಿಯೂ ಎಚ್ಚರಿಕೆ ನೀಡಲಾಗಿತ್ತು.

ಆಯುಷ್ ಶರ್ಮಾ: ಸಲ್ಮಾನ್ ಖಾನ್ ಅವರ ಭಾವ (ಬಾವಾ) ಹಾಗೂ ನಟರಾದ ಆಯುಷ್ ಶರ್ಮಾ ಅವರಿಗೆ ಫೆಬ್ರವರಿ 2026ರಲ್ಲಿ ಬೆದರಿಕೆ ಇಮೇಲ್ ಬಂದಿತ್ತು. ಬಿಷ್ಣೋಯ್ ಗ್ಯಾಂಗ್‌ನವರ ಹೆಸರನ್ನು ಬಳಸಿಕೊಂಡ ಕ್ರಿಪ್ಟೋಕರೆನ್ಸಿ ಮೂಲಕ ಪರಿಹಾರ ಹಣ ನೀಡುವಂತೆ ಒತ್ತಾಯಿಸಿದ್ದರು.

ಇದೆಲ್ಲವನ್ನು ನೋಡಿದರೆ 1980 ಮತ್ತು 90ರ ದಶಕದ ಆ ಕರಾಳ ದಿನಗಳ ಛಾಯೆ ಈಗ ಮತ್ತೆ ಕಾಣಿಸುತ್ತಿದೆ. 1997ರಲ್ಲಿ ಮ್ಯೂಸಿಕ್ ದಿಗ್ಗಜ ಗುಲ್ಶನ್ ಕುಮಾರ್ ಹತ್ಯೆ, ಅದೇ ವರ್ಷ ಚಲನಚಿತ್ರ ನಿರ್ಮಾಪಕ ಮುಕೇಶ್ ದುಗ್ಗಾಲ್ ಗುಂಡೇಟಿಗೆ ಬಲಿಯಾಗಿದ್ದು ಹಾಗೂ 2000ನೇ ಇಸವಿಯಲ್ಲಿ ಚಲನಚಿತ್ರ ನಿರ್ಮಾಪಕ ರಾಕೇಶ್ ರೋಷನ್ ಅವರು ಹತ್ಯೆ ಯತ್ನದಿಂದ ಪಾರಾಗಿದ್ದು ಮುಂಬೈ ಅಂಡರ್‌ವರ್ಲ್ಡ್‌ನ ಅಂದಿನ ದೌರ್ಜನ್ಯಕ್ಕೆ ಸಾಕ್ಷಿಯಾಗಿದ್ದವು. ಅಂದು ಕ್ರಿಮಿನಲ್ ಜಾಲಗಳು ಚಿತ್ರರಂಗದ ಮೇಲೆ ತಮ್ಮ ಪ್ರಭಾವ ಬೀರಲು ಬೆದರಿಕೆ ಮತ್ತು ಹಿಂಸೆಯನ್ನು ಹೇಗೆಲ್ಲ ಬಳಸಿಕೊಳ್ಳುತ್ತಿದ್ದವು ಎಂಬುದಕ್ಕೆ ಈ ಘಟನೆಗಳು ಮುಖಪುಟದಂತಿದ್ದವು.

Also Read
ನಟ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿಗೆ ಕಾರಣವೇನು? ಈ ಒಂದು ಮಾತು ಕೇಳಿ ಬೆಚ್ಚಿಬಿದ್ದ ಬಾಲಿವುಡ್! Tiger Shroff Firing
Lawrence Bishnoi Gang

ಪ್ರಸ್ತುತ ಕಾಲಘಟ್ಟ ಹಾಗೂ ಪರಿಸ್ಥಿತಿಗಳು ಬದಲಾಗಿರಬಹುದು, ಆದರೆ ಅಪರಾಧಿಗಳ ಹಳೆಯ ವಿಧಾನಗಳು ಮಾತ್ರ ಇಂದಿಗೂ ಹಾಗೆಯೇ ಇವೆ. ಹಣಕ್ಕಾಗಿ ಬೇಡಿಕೆಗಳನ್ನು ಇಡುವುದು, ಸೆಲೆಬ್ರಿಟಿಗಳು ಹಾಗೂ ಅವರ ಆಪ್ತರಿಗೆ ಬೆದರಿಕೆ ಹಾಕುವುದು ಮತ್ತು ಕೇವಲ ಟಾರ್ಗೆಟ್​ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಆಘಾತಕಾರಿ ಸಂದೇಶ ರವಾನಿಸುವ ಗುಂಡಿನ ದಾಳಿಗಳು ಇಂದಿಗೂ ಮುಂದುವರಿದಿವೆ. ಟೈಗರ್ ಶ್ರಾಫ್ ಮೇಲಿನ ಈ ದಾಳಿಯು ಈ ಕರಾಳ ಸರಣಿಗೆ ಮತ್ತೊಂದು ಆತಂಕಕಾರಿ ಅಧ್ಯಾಯವನ್ನು ಸೇರಿಸಿದ್ದು, ಎಲ್ಲವೂ ಸರಿಯಾಗಿದೆ ಅಂದುಕೊಂಡಿದ್ದ ಬಾಲಿವುಡ್​ ಹಳೆಯ ದುಸ್ವಪ್ನವನ್ನು ಇದೀಗ ಮತ್ತೊಮ್ಮೆ ಎದುರಿಸುವಂತಾಗಿದೆ.

ಬಾಲಿವುಡ್‌ನ ಅತ್ಯಂತ ಶ್ರೀಮಂತರು, ಭದ್ರತೆ ಮತ್ತು ದೊಡ್ಡ ಪ್ರಭಾವವನ್ನು ಹೊಂದಿರುವ ದಿಗ್ಗಜರೇ ಇಂದು ಜೀವ ಬೆದರಿಕೆಗಳು ಹಾಗೂ ದಾಳಿಗಳನ್ನು ಎದುರಿಸಬೇಕಾಗಿ ಬಂದಿರುವುದು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ, ಇಡೀ ಸಮಾಜದ ಗಂಭೀರ ಕಾನೂನು ಮತ್ತು ಸುವ್ಯವಸ್ಥೆಯ ಸವಾಲಿನ ಬಗ್ಗೆ ಪ್ರಶ್ನೆ ಮೂಡಿಸುತ್ತದೆ. ಟೈಗರ್ ಶ್ರಾಫ್ ಮೇಲೆ ನಡೆದ ಈ ದಾಳಿಯು ಇನ್ನು ಮುಂದೆ ಈ ಗಂಭೀರ ಸಮಸ್ಯೆಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net